ಉಳ್ಳಾಲ: ತೊಕ್ಕೊಟ್ಟು ಜಂಕ್ಷನ್ ಬಳಿ ಸರಕಾರಿ ಜಾಗದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ಜಾಗ ಸಮತಟ್ಟು ಮಾಡಲು ತೆರಳಿದ ಪುರಸಭಾ ಅಧಿಕಾರಿಗಳಿಗೆ ಮತ್ತು
ಸ್ಥಳೀಯರ ಮಧ್ಯೆ ಕೊರಗಜ್ಜನ ಕಟ್ಟೆಯ ವಿಚಾರದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡ ಘಟನೆ ಶನಿವಾರ ನಡೆದಿದ್ದು, ಬಳಿಕ ಸ್ಥಳೀಯ ಜನಪ್ರತಿನಿಧಿಗಳ ಮುತುವರ್ಜಿಯಲ್ಲಿ ಬಗೆಹರಿಸಲಾಯಿತು.
ಇಂದಿರಾ ಕ್ಯಾಂಟಿನ್ ಉಳ್ಳಾಲದ ತೊಕ್ಕೊಟ್ಟಿನಲ್ಲಿ ಸ್ಥಾಪನೆಗ ನಿರ್ಧರಿಸಲಾಗಿತ್ತು. ಈ ನಿಟ್ಟಿನಲ್ಲಿ ನಗರಸಭೆಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಕ್ಯಾಂಟಿನ್ಗೆ ಈ ಹಿಂದೆ ಲಾರಿ ಚೆಕ್ ಪೋಸ್ಟ್ ಇದ್ದ ಹಿಂಬದಿಯ ಜಾಗವನ್ನು ಗುರುತಿಸಿ ಸಮತಟ್ಟು ಮಾಡಲು ಶನಿವಾರ ಕಾರ್ಮಿಕರೊಂದಿಗೆ ನಗರ ಸಭೆಯ ಅಧಿಕಾರಿಗಳು ಜನಪ್ರತಿನಿಧಿಗಳು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಒಂದು ತಂಡ ಜಾಗ ಸಮತಟ್ಟು ಮಾಡುವಾಗ ಕೊರಗಜ್ಜನ ಕಟ್ಟೆಯನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಸುದ್ದಿ ಹರಡಿ ಸ್ಥಳದಲ್ಲಿ ಜನರು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಅಧಿಕಾರಿಗಳು ನಾವು ಯಾವುದೇ ಕಟ್ಟೆಯನ್ನು ತೆಗೆಯುತ್ತಿಲ್ಲ. ಈ ಹಿಂದಿನಿಂದ ಕಾರ್ಯ ನಿರ್ವಹಿಸುತ್ತಿದ್ದ ಹಳೆ ಕಟ್ಟಡವನ್ನು ಕೆಡವಿ ಜಾಗ ಸಮತಟ್ಟು ಮಾಡಿ ಆವರಣ ಗೋಡೆ ನಿರ್ಮಿಸಿ ಇಂದಿರಾ ಕ್ಯಾಂಟಿನ್ ಪ್ರಾರಂಭಿಸುವ ಉದ್ದೇಶವನ್ನು ಇಟ್ಟುಕೊಂಡಿದ್ದು, ಧಾರ್ಮಿಕ ತಾಣಗಳಿಗೆ ಯಾವುದೇ ಹಾನಿ ಮಾಡಲಾಗುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು ಬಳಿಕ ಜನಪ್ರತಿನಿಧಿಗಳ ಮಧ್ಯಸ್ಥಿಕೆಯಲ್ಲಿ ಸಮಸ್ಯೆಯನ್ನು ಬಗೆಹರಿಸಲಾಯಿತು. ಈ ಸಂದರ್ಭದಲ್ಲಿ ನಗರಸಭೆಯ ಮುಖ್ಯಾಧಿಕಾರಿ ವಾಣಿ ಆಳ್ವ ಮಾತನಾಡಿ, ಸರಕಾರದ ಆದೇಶದಂತೆ ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಸರ್ವೆ ನಂಬ್ರ: 66-ಎ2ಬಿ2 ರ 0.22 ಸೆಂಟ್ಸ್ ಸ್ಥಳವನ್ನು ಗುರುತಿಸಿದ್ದು, ಸ್ಥಳದಲ್ಲಿರುವ ಹಳೆ ಕಟ್ಟಡವನ್ನು ಕೆಡವಿ ಸಮತಟ್ಟು ಮಾಡಿ ಆವರಣ ಗೋಡೆ ನಿರ್ಮಿಸಲು ತೀರ್ಮಾನಿಸಿದಂತೆ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಲು ತೆರಳಿದ್ದರು. ನಗರ ಸಭೆಯ ಜಾಗದಲ್ಲಿರುವ ಕೊರಗಜ್ಜನ ಕಟ್ಟೆ ಕೆಡವಲು ಯಾವುದೇ ಆದೇಶವನ್ನು ನಗರಸಭೆಯಿಂದ ನೀಡಿಲ್ಲ ಎಂದರು.