ಮಂಗಳೂರು: ಆಸ್ಪತ್ರೆ ಯೊಂದು ಯಶಸ್ವಿ ಹಾಗೂ ಜನಸ್ನೇಹಿ ಎನ್ನಿಸಿಕೊಳ್ಳಬೇಕಾದರೆ ಶುಶ್ರೂಷೆ, ಆರೈಕೆಯಲ್ಲಿ ವಿಜ್ಞಾನ, ತಂತ್ರಜ್ಞಾನದ ಅಳವಡಿಕೆ ಜತೆಗೆ ಸಹಾನುಭೂತಿ ಇರುವ ಸಿಬಂದಿ, ವೈದ್ಯರ ತಂಡವೂ ಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ನಗರದ ಇಂದಿರಾ ಆಸ್ಪತ್ರೆಯ 25ನೇ ವಾರ್ಷಿಕೋತ್ಸವ ಸಂಭ್ರಮಾ ಚರಣೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಸಂಸ್ಥೆಯ 25ರ ಸಾಧನೆ ಎಂದರೆ ಐತಿಹಾಸಿಕ ದಿನ, ಡಾ| ಸಯ್ಯದ್ ನಿಜಾಮುದ್ದೀನ್ ಅವರು ತಮ್ಮ ಬದ್ಧತೆಯಿಂದ ಅವರ ತಂದೆಯವರ ಆಶೀರ್ವಾದ, ಕುಟುಂಬದ ಸಹಕಾರ ದಿಂದ ಈ ದೊಡ್ಡ ಸಂಸ್ಥೆ ಕಟ್ಟಿದ್ದಾರೆ. ಸಂಸ್ಥೆ ಎಂದರೆ ಕಟ್ಟಡವಲ್ಲ, ಸೇವಾ ಮನೋಭಾವದ ಸಿಬಂದಿ ಮುಖ್ಯ, ಅಂತಹ ಸಿಬಂದಿ, ವೈದ್ಯರ ತಂಡವನ್ನು ರಚಿಸಿ ಯಶಸ್ವಿ ಯಾಗಿದ್ದಾರೆ, ಹಾಗಾಗಿ ಸಂಸ್ಥೆ ನೂರು ವರ್ಷ ಯಶಸ್ವಿಯಾಗಿ ಪೂರೈಸಲಿದೆ ಎಂದರು.
ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಇಂದಿರಾ ಆಸ್ಪತ್ರೆಯ ನಿರ್ಮಾಣ ಮೂಲಕ ಮಂಗಳೂರಿನ ವೈದ್ಯಕೀಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಸಿಕ್ಕಿದಂತಾಗಿದೆ ಎಂದರು.
ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಆಸ್ಪತ್ರೆಯ ರಜತ ವರ್ಷದ ಸಂದರ್ಭದಲ್ಲಿ ಆಡಳಿತವು, ಆಸ್ಪತ್ರೆಯ ಯಶಸ್ಸಿನ ಕಾರಣಕರ್ತರಾದ ಸಿಬಂದಿ, ವೈದ್ಯರನ್ನು ಗುರುತಿಸಿ ಗೌರವಿಸಬೇಕು ಎಂದು ಮನಗಂಡಿರುವುದು ಶುಭಸೂಚಕ ಎಂದರು. ಇಂದಿರಾ ಆಸ್ಪತ್ರೆ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ| ಸಯ್ಯದ್ ನಿಜಾಮುದ್ದೀನ್ ಸ್ವಾಗತಿಸಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಯೆನಪೊಯ ವಿವಿ ಕುಲಪತಿ ಯೇನಪೊಯ ಅಬ್ದುಲ್ಲ ಕುಂಞ ಶುಭಹಾರೈಸಿದರು.
ಸಯ್ಯದ್ ಝೊರಾನುದ್ದೀನ್, ಇಂದಿರಾ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ| ತಂಗಂ ವರ್ಗಿàಸ್ ಜೋಶ್ವ, ಡಾ|ಮಹಮ್ಮದ್ ಇಸ್ಮಾಯಿಲ್, ಡಾ| ಮುನೀರ್ ಅಹಮದ್, ಡಾ| ಜಮೀಲಾ, ಡಾ| ವಿಜಯಗೋಪಾಲ್, ಡಾ| ಕೃಷ್ಣ ಪ್ರಸಾದ್ ಉಪಸ್ಥಿತರಿದ್ದರು. ಸಂಸ್ಥೆಯ ವೈದ್ಯರು ಹಾಗೂ ಸಿಬಂದಿಯನ್ನು ಅವರ ಸೇವೆಗಾಗಿ ಗಣ್ಯರು ಗೌರವಿಸಿದರು. ಹೆರಾ ಪಿಂಟೊ, ಸಾಹಿಲ್ ಜಹೀರ್ ನಿರೂಪಿಸಿದರು.
25 ವರ್ಷಗಳ ಹೆಜ್ಜೆಗುರುತು
ಇಂದಿರಾ ಆಸ್ಪತ್ರೆಯು ಫಳ್ನೀರಿನಲ್ಲಿ 1999ರ ಆ.15ರಂದು ಆರಂಭವಾಗಿದ್ದು, ಅಂದಿನಿಂದ ಆಸ್ಪತ್ರೆ ಅತ್ಯುತ್ತಮ ವೈದ್ಯಕೀಯ ಆರೈಕೆಯನ್ನು ನೀಡುವ ಮೂಲಕ ಹೆಸರಾಗಿದೆ. 150 ಹಾಸಿಗೆಯ ಸೇವೆ, ತುರ್ತು ಆರೈಕೆ, ಶಸ್ತ್ರಚಿಕಿತ್ಸೆ, ಡಯಾಲಿಸಿಸ್, ಮೆಟರ್ನಿಟಿ, ಮೆಡಿಸಿನ್, ಫಿಸಿಯೋಥೆರಪಿ ಸಹಿತ ವಿಶಾಲವಾದ ಸೇವೆಗಳನ್ನು ಒದಗಿಸುತ್ತಿದೆ.