ವರದಿ: ಶಿವಶಂಕರ ಕಂಠಿ
ಹುಬ್ಬಳ್ಳಿ: ಇಂದಿರಾ ಗಾಜಿನ ಮನೆ ಆವರಣದಲ್ಲಿನ ಮಹಾತ್ಮಾ ಗಾಂಧಿ ಉದ್ಯಾನವನದಲ್ಲಿ ಅಕ್ಟೋಬರ್ ಅಂತ್ಯದೊಳಗೆ ಇಲ್ಲವೆ ಕರ್ನಾಟಕ ರಾಜ್ಯೋತ್ಸವದಂದು ಬುಲೆಟ್ ಮಾದರಿ ಪುಟಾಣಿ ರೈಲು ಸೇವೆಗೆ ಲಭ್ಯವಾಗಲಿದೆ.
ಪುಣೆಯ ಸಿಸಿ ಇಂಜನಿಯರ್ ಕಂಪನಿಯವರು ನಿರ್ಮಿಸಿದ ಬುಲೆಟ್ ಮಾದರಿಯ ಈ ಪುಟಾಣಿ ರೈಲಿನ ಎಂಜಿನ್ ಮತ್ತು ಬೋಗಿಗಳು ಆಗಮಿಸಿದ್ದು, ಇವುಗಳ ಅಲೈನ್‌ಮೆಂಟ್ ಸೆಟ್ (ಜೋಡಣೆ) ಮಾಡಿ ಒಂದು ಬಾರಿ ಓಡಿಸಿ ತಪಾಸಿಸಲಾಗಿದೆ. ಅಲ್ಲಲ್ಲಿ ಹಳಿಗಳ ಜೋಡಣೆ ಸರಿಯಾಗಿ ಸೆಟ್ ಆಗಿಲ್ಲದ್ದರಿಂದ ಮತ್ತೆ ಬದಲಾಯಿಸಿ ಮೆಟಲಿಂಗ್ ಹಾಕುವ ಕಾರ್ಯ ನಡೆದಿದೆ. ಇನ್ನು 3-4 ದಿನಗಳಲ್ಲಿ ಮತ್ತೂಮ್ಮೆ ಇದರ ಪ್ರಯೋಗಾತ್ಮಕ ಪರೀಕ್ಷೆ ನಡೆಸಲಿದೆ. ಉದ್ಯಾನವನ ಪ್ರವೇಶ ದ್ವಾರದ ಎಡಭಾಗದಲ್ಲಿ ಪ್ಲಾಟ್‌ಫಾರ್ಮ್ ಸಿದ್ಧಗೊಳ್ಳುತ್ತಿದ್ದು, ಅಂತಿಮ ಹಂತದಲ್ಲಿದೆ.
ಪಜಲ್ ಪಾರ್ಕ್‌ನ ಬಲ ಬದಿಯಲ್ಲಿ ಎರಡನೇ ಪ್ಲಾಟ್‌ಫಾರ್ಮ್ ಸಿದ್ಧಗೊಳ್ಳಬೇಕಿದೆ. ಇದನ್ನು 10-15 ದಿನಗಳಲ್ಲಿ ಪೂರ್ಣಗೊಳಿಸಲು ಯೋಜಿಸಲಾಗಿದೆ. ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯಡಿ ಅಂದಾಜು 4.4 ಕೋಟಿ ರೂ.ವೆಚ್ಚದಲ್ಲಿ ಬುಲೆಟ್ ಮಾದರಿ ರೈಲು ನಿರ್ಮಿಸಲಾಗಿದೆ. ಪುಣೆಯ ಸಿಸಿ ಇಂಜನಿಯರ್ ಕಂಪನಿ ನಿರ್ಮಾಣ ಮತ್ತು 5 ವರ್ಷಗಳ ನಿರ್ವಹಣೆಯ ಗುತ್ತಿಗೆ ಪಡೆದಿದೆ. ಈ ಬುಲೆಟ್ ಮಾದರಿ ಪುಟಾಣಿ ರೈಲು ಸಂಪೂರ್ಣ ಕೇಂದ್ರೀಕೃತ ಹವಾನಿಯಂತ್ರಿತ (ಸೆಂಟ್ರಲೈಜ್ ಏರ್ ಕೂಲರ್)ವಾಗಿದ್ದು, ಪೂರ್ತಿ ಸುರಕ್ಷಿತವಾಗಿದೆ. ಪ್ರಯಾಣಿಕರು ಹೊರಗಿನ ದೃಶ್ಯಗಳನ್ನು ಕಿಟಕಿ ಮುಖಾಂತರವೇ ವೀಕ್ಷಿಸಬಹುದು.
ಎರಡು ಇಂಜಿನ್ ಪುಟಾಣಿ ರೈಲಿನ ವಿಶೇಷತೆ: ಮಹಾತ್ಮಾ ಗಾಂಧಿ ಉದ್ಯಾನವನ ಆವರಣದಲ್ಲಿ ಬುಲೆಟ್ ಮಾದರಿ ಪುಟಾಣಿ ರೈಲು 930 ಮೀಟರ್ ಸುತ್ತ ಓಡಲಿದೆ. ಈ ರೈಲು ಮುಂಭಾಗ ಮತ್ತು ಹಿಂಭಾಗದಲ್ಲಿ ತಲಾ ಒಂದು ಇಂಜಿನ್ ಹೊಂದಿದ್ದು, ಮೂರು ಬೋಗಿಗಳೊಂದಿಗೆ ಸಂಚರಿಸಲಿದೆ. ಈ ರೈಲಿನ ವಿಶೇಷತೆ ಎಂದರೆ ಒಂದು ಪ್ಲಾಟ್‌ಫಾರ್ಮ್ನಿಂದ ಇನ್ನೊಂದು ಪ್ಲಾಟ್‌ಫಾರ್ಮ್‍ಗೆ ಹೋಗಬೇಕಾದರೆ ಮುಂಭಾಗದ ಎಂಜಿನ್ ಮಾತ್ರ ಬಳಸಲಾಗುತ್ತದೆ. ಅದೇ ಮಾರ್ಗವಾಗಿ ಮರಳಿ ಬರುವಾಗ ಹಿಂಬದಿಯಾಗಿ ಚಲಿಸದೆ ಇನ್ನೊಂದು ಎಂಜಿನ್ ಮೂಲಕ ಮುಂಭಾಗವಾಗಿಯೇ ಇನ್ನೊಂದು ಸ್ಟೇಶನ್‌ಗೆ ಬರುತ್ತೆ. ಇದರಿಂದ ಮಾರ್ಗ ಮಧ್ಯೆ ಮಕ್ಕಳು ಹಳಿ ದಾಟುವುದಾಗಲಿ, ಇಲ್ಲವೆ ರೈಲು ಬರುತ್ತಿರುವುದು ಗೊತ್ತಾಗದೆ ಅಡ್ಡ ಬಂದರೆ ಅವಘಡಗಳು ಉಂಟಾಗುತ್ತವೆ. ಅಲ್ಲದೆ ರೈಲು ಹಿಮ್ಮುಖವಾಗಿ ಬರುತ್ತಿದ್ದರೆ ಹಳಿಗಳ ಮಧ್ಯೆ ಯಾರೇ ಅಡ್ಡಲಾಗಿ ಬಂದರೆ ಗೊತ್ತಾಗಲ್ಲ. ಹೀಗಾಗಿ ಎರಡು ದಿಕ್ಕಿನಲ್ಲಿ ಎಂಜಿನ್ ಇರುವುದರಿಂದ ರೈಲಿನ ಸಂಚಾರ ಸುರಕ್ಷಿತವಾಗಿರುತ್ತದೆ.
ಒಂದು ಬೋಗಿ 16 ಜನರ ಸಾಮರ್ಥ್ಯ ಹೊಂದಿದ್ದು, ಒಟ್ಟು ಮೂರು ಬೋಗಿಗಳಲ್ಲಿ 48 ಜನರು ಏಕಕಾಲಕ್ಕೆ ಪ್ರಯಾಣಿಸಬಹುದು. ಈ ಪುಟಾಣಿ ರೈಲು ಪೂರ್ಣ ಪ್ರಮಾಣದಲ್ಲಿ ಸೋಲಾರ್ ವಿದ್ಯುತ್ ಚಾಲಿತವಾಗಿದೆ. ಒಂದು ಬಾರಿ ಚಾರ್ಜ್ ಆದರೆ ಸಾಕು 10ರಿಂದ 15 ಬಾರಿ (ಟ್ರಿಪ್) ಸಂಚರಿಸುತ್ತದೆ.