ಬೆಂಗಳೂರು: ಇಂದಿರಾ ಗಾಂಧಿಯವರು ಗರೀಬಿ ಹಠಾವೋ ಜಾರಿ ಮಾಡಿದ್ದರು. ರೈತರು, ಮಹಿಳೆಯರಿಗೆ ಅನೇಕ ಕಾರ್ಯಕ್ರಮ ಜಾರಿ ಮಾಡಿದ್ದರು. ಉಳುವವನೆ ಭೂಮಿ ಒಡೆಯ ಕಾಯ್ದೆ ಪ್ರಾಮಾಣಿಕವಾಗಿ ಜಾರಿ ಮಾಡಿದರು. ಬ್ಯಾಂಕ್ ರಾಷ್ಟ್ರೀಕರಣ ಮಾಡಿದರು. ಮೊದಲು ಶ್ರೀಮಂತರಿಗೆ ಮಾತ್ರ ಬ್ಯಾಂಕ್ ಅಕೌಂಟ್, ಸಾಲ, ಡಿಪಾಸಿಟ್ ಅವಕಾಶ ಇತ್ತು, ಬ್ಯಾಂಕ್ ರಾಷ್ಟ್ರೀಕರಣ ಮಾಡಿದ ಮೇಲೆ ಬಡವರಿಗೆ ಸೌಲಭ್ಯಗಳು ಸಿಕ್ಕಿದವು. ಇದರಿಂದ ಇಂದಿರಾ ಗಾಂಧಿಯವರು ಎಷ್ಟು ಹೆಸರುವಾಸಿಯಾದರೆಂದರೆ ಜನರ ಮನಸ್ಸಿನಲ್ಲಿ ದೇವರಾಗಿಬಿಟ್ಟರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಇಂದಿರಾಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, 1969ರಲ್ಲಿ ಪಕ್ಷವು ಇಂಡಿಕೇಟ್, ಸಿಂಡಿಕೇಟ್ ಎಂದು ಇಬ್ಭಾಗವಾಯಿತು. ಇಂದಿರಾ ಗಾಂಧಿ ಇಂಡಿಕೇಟ್ ಕಾಂಗ್ರೆಸ್ ಮುಖ್ಯಸ್ಥರಾದರು. ಅಲ್ಲಿಂದ ಬಹಳ ಆದರ್ಶ ರೀತಿಯಲ್ಲಿ ದೇಶವನ್ನು ಮುನ್ನಡೆಸಿದರು. ಬಡತನ ತೊಲಗಿಸಲು ಇಚ್ಚಾಶಕ್ತಿ ಹೊಂದಿದ್ದರು. ಅಸಮಾನತೆ ದೇಶದಲ್ಲಿ ಶತ ಶತಮಾನದಿಂದ ಬೆಳೆದುಕೊಂಡು ಬಂದಿತ್ತು. ಆರ್ಥಿಕ ಅಸಮಾನತೆ ಹೋಗಲಾಡಿಸಲು 20 ಅಂಶಗಳ ಕಾರ್ಯಕ್ರಮ ತಂದರು ಎಂದರು.
ಇದನ್ನೂ ಓದಿ:ಭಾರತವಿಂದು ಆಂತರಿಕ- ಬಾಹ್ಯ ಸವಾಲನ್ನು ಎದುರಿಸಲು ಸಮರ್ಥವಾಗಿದೆ: ಪ್ರಧಾನಿ ಮೋದಿ
ಇಂದು ಇಂದಿರಾ ಗಾಂಧಿ ಹುತಾತ್ಮರಾದ ದಿನ. ಸರ್ದಾರ್ ಪಟೇಲ್ ಜನ್ಮದಿನ. ಇಂದಿರಾ ಗಾಂಧಿ ಉಕ್ಕಿನ ಮಹಿಳೆ, ಪಟೇಲ್ ಉಕ್ಕಿನ ಮನುಷ್ಯ. ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಇಂದಿರಾ ಅವರು ಬಾಲ್ಯದಿಂದಲೂ ದೇಶ ಭಕ್ತಿ ಬೆಳೆಸಿಕೊಂಡಿದ್ದರು. ಸ್ವಾತಂತ್ರ್ಯ ಹೋರಾಟಗಾರರ ಜೊತೆಯೇ ಇಂದಿರಾಗಾಂಧಿ ಬೆಳೆದಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಸಚಿವ ಹೆಚ್ ಎಂ ರೇವಣ್ಣ ಭಾಗಿಯಾಗಿದ್ದರು.