Advertisement

ಕಲ್ಲರಳಿ ಶಿಲೆಯಾಗಿ…

01:54 PM May 27, 2017 | Team Udayavani |

 ಬುಡಕಟ್ಟು ಜನರಲ್ಲೂ ಸ್ವಾತಂತ್ರ್ಯ ಹೋರಾಟಗಾರರು ಇದ್ದರೆಂಬ ವಿಚಾರ ಎಷ್ಟೋ ಜನರಿಗೆ ಗೊತ್ತೇ ಇಲ್ಲ. ಕರುನಾಡ ಶಿಲ್ಪಿಗಳಿಗೆ ಈ ವೀರಕಲಿಗಳು ಕಂಡಿದ್ದಾರೆ. ಮಧ್ಯಪ್ರದೇಶದ ಇಂದಿರಾಗಾಂಧಿ ನ್ಯಾಶನಲ್‌ ಟ್ರೈಬಲ್‌ ಯೂನಿವರ್ಸಿಟಿಯ ಆವರಣದಲ್ಲಿ ಬುಡಕಟ್ಟು ಕಲಿಗಳನ್ನು ಶಿಲೆಗಳಲ್ಲಿ ಅರಳಿಸಿದ್ದಾರೆ…

Advertisement

ಬೆಂಕಿ ಜ್ವಾಲೆ ಭಗತ್‌ ಸಿಂಗ್‌, ಸಿಡಿಲ ಕಿಡಿ ಚಂದ್ರಶೇಖರ್‌ ಆಜಾದ್‌, ಸಮರ ಕಲಿ ಸುಭಾಶ್‌ಚಂದ್ರ ಬೋಸ್‌… ಇವರೆಲ್ಲ ಸ್ವಾತಂತ್ರ್ಯ ಚಳವಳಿಯಲ್ಲಿ ಕ್ರಾಂತಿಯ ನೆರಳನ್ನು ಬಿಟ್ಟುಹೋದವರು. ಬ್ರಿಟಿಷರಿಗೆ ರಾತ್ರಿಹಗಲೂ ಕಾಡಿದವರು. ಆದರೆ, ಬ್ರಿಟಿಷರ ನಿದ್ದೆಗೆಡಿಸಿದ ಕ್ರಾಂತಿಪುರುಷರು ಇವರು ಮಾತ್ರವೇ ಅಲ್ಲ. ಅಲ್ಲೆಲ್ಲೋ ಕಾಡಿನಲ್ಲಿ ಅಡಗಿ, ಬ್ರಿಟಿಷರ ಬಂದೂಕಿಗೆ ಪ್ರತ್ಯುತ್ತರ ನೀಡಿದ ಬುಡಕಟ್ಟು ಜನಾಂಗದ ಹೀರೋಗಳೂ ಇದ್ದಾರೆ. ಅವರನ್ನು ದೇಶಕ್ಕೆ ಪರಿಚಯಿಸಿಕೊಡುವ ಕೆಲಸವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡಿದೆ.

ಕರುನಾಡಿನ 25 ಶಿಲ್ಪಿಗಳು ಟ್ರೈಬಲ್‌ ಫ್ರೀಡಂ ಫೈಟರ್‌ಗಳನ್ನು ಮರು ನೆನಪಿಸಿದ್ದಾರೆ. ಆದರೆ, ಈ ಶಿಲಾ ಸಾಹಸ ಜರುಗಿದ್ದು ಕರ್ನಾಟಕದಲ್ಲಲ್ಲ, ದೂರದ ಮಧ್ಯಪ್ರದೇಶದಲ್ಲಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಧ್ಯಪ್ರದೇಶದ ಅಮರ್‌ ಕಂಟಕ್‌ನ ಇಂದಿರಾಗಾಂಧಿ ನ್ಯಾಶನಲ್‌ ಟ್ರೈಬಲ್‌ ಯೂನಿವರ್ಸಿಟಿ ಜಂಟಿಯಾಗಿ ವಿವಿಯ ಆವರಣದಲ್ಲಿ ಆದಿವಾಸಿಗಳ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಏರ್ಪಡಿಸಿತ್ತು. ಕನ್ನಡದ ಶಿಲ್ಪಿಗಳು ಸಿಮೆಂಟಿನಿಂದ 15 ಬೃಹತ್‌ ಶಿಲ್ಪಗಳನ್ನು ನಿರ್ಮಿಸಿ, ಬುಡಕಟ್ಟು ಸ್ವಾತಂತ್ರÂ ಹೋರಾಟಗಾರರನ್ನು ಶಿಲೆಗಳಲ್ಲಿ ಎದ್ದು ನಿಲ್ಲಿಸಿದ್ದಾರೆ. ಅವರ ಜೀವನ ಸಂಸ್ಕೃತಿ, ಉಡುಗೆ- ತೊಡುಗೆ, ಆಹಾರ- ವಿಹಾರಗಳನ್ನು ಕಲಾಕೃತಿಗಳಲ್ಲಿ ಪ್ರತಿಬಿಂಬಿಸಿದ್ದಾರೆ.

ಅಂದಹಾಗೆ, ಇವು 16 ಅಡಿಗಳಿಗೂ ಎತ್ತರದ ಶಿಲಾಕೃತಿಗಳು. ಇಲ್ಲಿ ಇಬ್ಬರು ಬುಡಕಟ್ಟು ನಾಯಕರನ್ನು ಭಾರತ ಎಂದಿಗೂ ಮರೆಯುವಂತೆಯೇ ಇಲ್ಲ. ಒಬ್ಬ ತಿಲಕಾಮಾಜಿ. ಮತ್ತೂಬ್ಬ ಬಿರಸಾಮುಂಡ!

Advertisement

ಮೂವತ್ತು ವರುಷದ ತಿಲಕಾಮಾಜಿ ಗೆರಿಲ್ಲಾ ತಂತ್ರವನ್ನು ಬ್ರಿಟಿಷರ ಮೇಲೆ ಪ್ರಯೋಗಿಸಿ, ಬುಡಕಟ್ಟು ಮಂದಿಯ ಎದೆಯಲ್ಲೂ ಸ್ವಾತಂತ್ರ್ಯದ ಕಿಚ್ಚಿದೆ ಎಂದು ತೋರಿಸಿಕೊಟ್ಟವನು. ಮಧ್ಯಪ್ರದೇಶದ ಕಾಡಿನಲ್ಲಿ ಅವಿತು, ನೂರಾರು ಬ್ರಿಟಿಷ್‌ ಸೈನಿಕರಿಗೆ ಈತ ಸಾವಿನ ಹಾದಿಯನ್ನು ತೋರಿಸಿದ್ದ. ಕೊನೆಗೆ ಈತನನ್ನು ನಿಯಂತ್ರಿಸಲು ಬ್ರಿಟಿಷರು, ಇವನ ಕುಟುಂಬದ ಮಂದಿಯನ್ನು ಅಪಹರಿಸುತ್ತಾರೆ. ಕುಟುಂಬಸ್ಥರನ್ನು ಬಿಡಿಸಲು ಹೋಗಿ, ಈತ ಬ್ರಿಟಿಷರಿಗೆ ಸೆರೆ ಆಗುತ್ತಾನೆ. 30ನೇ ವರುಷದಲ್ಲೇ ಈತನನ್ನು ನೇಣುಗಂಬಕ್ಕೇರಿಸುತ್ತಾರೆ.

ಛತ್ತೀಸ್‌ಗಢ ಅರಣ್ಯದಲ್ಲಿ ಬಿರಸಾಮುಂಡ ಕೂಡ ಇಂಥದ್ದೇ ಕ್ರಾಂತಿ ಎಬ್ಬಿಸಿದವನು. ಗೇಣಿದಾರರು, ಶ್ರೀಮಂತರು, ಬ್ರಿಟಿಷರು ಅರಣ್ಯ ಸಂಪತ್ತಿನ ಲೂಟಿಗೆ ಇಳಿದಾಗ, ಅವರುಗಳ ಮೇಲೆ ಗೆರಿಲ್ಲಾ ತಂತ್ರ ಪ್ರಯೋಗಿಸಿದ ಬಿರಸಾಮುಂಡ, ಸ್ವಾತಂತ್ರ್ಯದ ಪುಟಗಳಲ್ಲಿ ಚಿರಪರಿಚಿತನಾಗಲೇ ಇಲ್ಲ. ಗೆರಿಲ್ಲಾ ಪ್ರಯೋಗವನ್ನು ಈತನಷ್ಟು ಪರಿಣಾಮಕಾರಿಯಾಗಿ ಪ್ರಯೋಗಿಸಿದ ಮತ್ತೂಬ್ಬ ನಾಯಕ ಭಾರತದಲ್ಲಿ ಸಿಗುವುದಿಲ್ಲ. ಅವರೆಲ್ಲರನ್ನೂ ಸ್ಮರಿಸುವ ಕೆಲಸವನ್ನು ನಮ್ಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡಿದೆ.

ಇವರುಗಳೊಂದಿಗೆ ಆ ಶಿಲಾವನದಲ್ಲಿ ಧ್ಯಾನಸ್ಥ ಬುದ್ಧ, ಮಹಾವೃಕ್ಷ ಅಂಬೇಡ್ಕರ್‌ ಕೂಡ ಕಲಾಕೃತಿಗಳಲ್ಲಿ ಕಾಣಿಸುತ್ತಾರೆ. ಆದಿವಾಸಿ ಯುವಕ, ಮಹಿಳೆ, ಮಗುವಿನ ಆಕೃತಿಗಳೂ ಅಲ್ಲಿ ಮಾತನಾಡಿಸುತ್ತವೆ. ಶಿಬಿರ ಸಂಚಾಲಕ ಶ್ರೀಕುಮಾರ್‌ ನೇತೃತ್ವದಲ್ಲಿ, ಶಿವಪ್ರಸಾದ್‌ ನಿರ್ದೇಶನದಲ್ಲಿ ಈ ಕಲಾಕೃತಿಗಳು ಅರಳಿವೆ.

“ನಮ್ಮ ಕರ್ನಾಟಕದಲ್ಲೂ ಸೋಲಿಗರ, ಜೇನುಕುರುಬರ ಸಾಧನೆ ಬಿಂಬಿಸುವ ಶಿಲ್ಪ ಕಲಾಕೃತಿಗಳು ಅರಳಿ ನಿಲ್ಲಿಸುವ ಕೆಲಸ ಆಗಬೇಕು’ ಎನ್ನುವುದು ಶಿವಪ್ರಸಾದ್‌ ಅವರ ಮಾತು. 

ಬಳಕೂರು ವಿ.ಎಸ್‌. ನಾಯಕ್‌

Advertisement

Udayavani is now on Telegram. Click here to join our channel and stay updated with the latest news.

Next