Advertisement

ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್‌ ಸೇವೆ

12:39 PM Aug 29, 2017 | Team Udayavani |

ಹುಬ್ಬಳ್ಳಿ: ಬಡವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಶೀಘ್ರದಲ್ಲೇ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುವುದು ಎಂದು ಎಂದು ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ ಹೇಳಿದರು. 

Advertisement

ಹುಬ್ಬಳ್ಳಿ-ಧಾರವಾಡ ಮಹಾನಗರ ಹಾಗೂ ಧಾರವಾಡ ಗ್ರಾಮೀಣ ಕಾಂಗ್ರೆಸ್‌ ಸಮಿತಿಗಳ ಆಶ್ರಯದಲ್ಲಿ ಗೋಕುಲ ಗಾರ್ಡನ್‌ನಲ್ಲಿ ಸೋಮವಾರ ನಡೆದ ಬೂತ್‌ ಮಟ್ಟದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. 

ಈಗಾಗಲೇ ಬೆಂಗಳೂರಿನ ವಿವಿಧೆಡೆ ಆರಂಭಿಸಲಾದ ಇಂದಿರಾ ಕ್ಯಾಂಟೀನ್‌ಗಳಿಂದ ಬಡವರಿಗೆ ಅನುಕೂಲವಾಗಿದೆ. ಕಡಿಮೆ ಹಣದಲ್ಲಿ ತಿಂಡಿ, ಊಟ ನೀಡಲಾಗುತ್ತಿದೆ. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಬೆಂಗಳೂರಿನಲ್ಲಿ ಪ್ರತಿ ದಿನ 3 ಲಕ್ಷ ಜನರು ಇಂದಿರಾ ಕ್ಯಾಂಟೀನ್‌ ಗಳಲ್ಲಿ ಊಟ ಮಾಡುತ್ತಿದ್ದಾರೆ. ಇದನ್ನು ರಾಜ್ಯಾದ್ಯಂತ ವಿಸ್ತರಿಸಲಾಗುತ್ತಿದ್ದು, ಎಲ್ಲ ಬಡವರಿಗೂ ಸೌಲಭ್ಯ ಒದಗಿಸುವುದು ಸರ್ಕಾರದ ಉದ್ದೇಶ ಎಂದರು. 

ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿರುವ ಕಾಂಗ್ರೆಸ್‌ ಸರ್ಕಾರ 2018ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಚುನಾವಣೆಗೆ ಮುನ್ನ ನೀಡಿದ 165 ಭರವಸೆಗಳನ್ನೆಲ್ಲ ಈಡೇರಿಸಲಾಗಿದೆ. ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದು ಹೇಳಿದರು. 

ಬಿಜೆಪಿಗೆ ಸವಾಲು: ನಾವು ಮೂವರು ಮುಖ್ಯಮಂತ್ರಿಗಳನ್ನು ಮಾಡಲಿಲ್ಲ. 5 ವರ್ಷಗಳಿಗೂ ಸಿದ್ದರಾಮಯ್ಯ ಒಬ್ಬರೇ ಮುಖ್ಯಮಂತ್ರಿ. ಬಿಜೆಪಿ ಸರ್ಕಾರದ ಅವಧಿಗಿಂತ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಉತ್ತಮ ಆಡಳಿತ ನೀಡಲಾಗಿದೆ ಎಂದು ಘಂಟಾಘೋಷವಾಗಿ ಹೇಳಬಲ್ಲೆ. ಈ ಕುರಿತು ಬಿಜೆಪಿ ಮುಖಂಡರು ಚರ್ಚೆಗೆ ಬರುವುದಾದರೆ ಬರಲಿ ಎಂದು ಸವಾಲು ಹಾಕಿದರು. 

Advertisement

ಕಾಂಗ್ರೆಸ್‌ ಸರ್ಕಾರ ಉತ್ಕೃಷ್ಟ ಆಡಳಿತ ನೀಡುತ್ತಿದೆ. 4 ವರ್ಷಗಳಲ್ಲಿ ನೀರಾವರಿ ಯೋಜನೆಗೆ 62,000 ಕೋಟಿ ರೂ. ವ್ಯಯಿಸಲಾಗಿದೆ. ಸತತ 5ನೇ ವರ್ಷ ರೈತರು ಬರಗಾಲದಿಂದ ತೊಂದರೆಗೀಡಾಗಿದ್ದು, ಸಹಕಾರಿ ಬ್ಯಾಂಕ್‌ಗಳಲ್ಲಿದ್ದ ರೈತರ 8,556 ಕೋಟಿ ರೂ. ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಿದೆ. ಇದರಿಂದ 22 ಲಕ್ಷ ರೈತರಿಗೆ ಅನುಕೂಲವಾಗಿದೆ.

ರೈತರಿಗಾಗಿ 1ಲಕ್ಷ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ ಎಂದರು. ರಾಜ್ಯದಲ್ಲಿ ಒಟ್ಟು 5 ಕೋಟಿ ಜನರು ಒಂದಿಲ್ಲೊಂದು ಯೋಜನೆಯ ಫ‌ಲಾನುಭವಿಗಳಾಗಿದ್ದಾರೆ. 63ಲಕ್ಷ ಬಡ ಮಕ್ಕಳಿಗೆ ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟ ನೀಡಲಾಗುತ್ತಿದೆ. 47 ಲಕ್ಷ ಮಕ್ಕಳಿಗೆ ಹಾಲು  ವಿತರಿಸಲಾಗುತ್ತಿದೆ.

ಪಠ್ಯ-ಪುಸ್ತಕಗಳು, ಶೂಗಳು ಹಾಗೂ 1.5 ಲಕ್ಷ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ನೀಡಲಾಗಿದೆ ಎಂದರು. ಸರ್ಕಾರ 4 ವರ್ಷಗಳಲ್ಲಿ 4 ಲಕ್ಷ ಮನೆಗಳನ್ನು ನಿರ್ಮಿಸಿದೆ. ಅನ್ನಭಾಗ್ಯ ಯೋಜನೆ 1ಕೋಟಿ ಕುಟುಂಬಗಳ ಮೂರೂವರೆ ಕೋಟಿ ಜನರಿಗೆ ಅಕ್ಕಿ ನೀಡಲಾಗುತ್ತಿದೆ. ರಾಜ್ಯಾದ್ಯಂತ 10,000 ಶುದ್ಧ ನೀರಿನ ಘಟಕಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next