ಬೆಂಗಳೂರು: ಸಾರ್ವಜನಿಕರ ಸಲಹೆಯಂತೆ ಮುಂದಿನ ತಿಂಗಳಿಂದ ಇಂದಿರಾ ಕ್ಯಾಂಟೀನ್ ಮೆನು ಬದಲಿಸಲಾಗುವುದು. ಅದರಂತೆ ಮೊಸರನ್ನ ಬದಲಿಗೆ ಸಿಹಿ ನೀಡಲು ಯೋಜನೆ ರೂಪಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು.
ಇಂದಿರಾ ಕ್ಯಾಂಟೀನ್‌ಗಳಿಗೆ ಬರುವ ಜನರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಬಿಜೆಪಿ ಸದಸ್ಯ ಡಾ.ರಾಜು ಅವರ ಆರೋಪಕ್ಕೆ ಉತ್ತರಿಸಿದ ಆಯುಕ್ತರು, ನಗರದಲ್ಲಿರುವ 174 ಕ್ಯಾಂಟೀನ್‌ಗಳ ಪೈಕಿ 166 ಕ್ಯಾಂಟೀನ್‌ಗಳು ಹಾಗೂ 24 ಮೊಬೈಲ್ ಇಂದಿರಾ ಕ್ಯಾಂಟೀನ್‌ಗಳಲ್ಲಿ ನಿತ್ಯ 2.25 ಲಕ್ಷ ಜನರಿಗೆ ಆಹಾರ ವಿತರಿಸಲಾಗುತ್ತಿದೆ ಎಂದರು.
ಕೆಲವು ಕಡೆಗಳಲ್ಲಿ ಆಹಾರ ರುಚಿಯ ಕುರಿತು ಸಾರ್ವಜನಿಕರಿಂದ ಸಲಹೆಗಳು ಬಂದಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಿಂದ ಮೆನು ಬದಲಾಯಿಸಲು ಮುಂದಾಗಿದ್ದೇವೆ. ಅದರಂತೆ ಜನರನ್ನು ಆಕರ್ಷಿಸಲು ಮುದ್ದೆ, ಸೊಪ್ಪಿನ ಸಾರು ನೀಡಲು ಕ್ರಮಕೈಗೊಳ್ಳಲಾಗಿದ್ದು, ಈಗಾಗಲೇ ನಗರದ 5 ಕ್ಯಾಂಟೀನ್‌ಗಳಲ್ಲಿ ಪ್ರಾಯೋಗಿಕವಾಗಿ ಮುದ್ದೆ ನೀಡಲಾಗುತ್ತಿದೆ ಎಂದು ಹೇಳಿದರು.
ಹಿರಿಯ ನಾಗರಿಕರಿಗೂ ಊಟ: ಪ್ರತಿವಾರ್ಡ್‌ನ 50 ಹಿರಿಯ ನಾಗರಿಕರಿಗೆ ಇಂದಿರಾ ಕ್ಯಾಂಟೀನ್‌ನಿಂದ ಉಚಿತವಾಗಿ ಊಟ ನೀಡಲು ಬಿಬಿಎಂಪಿ ಕೌನ್ಸಿಲ್ ಸಭೆ ಸೋಮವಾರ ಅನುಮೋದನೆ ನೀಡಿದೆ. ಜತೆಗೆ ಪೌರಕಾರ್ಮಿಕರಿಗೆ ಇಸ್ಕಾನ್‌ನ ಅಕ್ಷಯಪಾತ್ರ ಊಟದ ಬದಲಿಗೆ ಇಂದಿರಾ ಕ್ಯಾಂಟೀನ್‌ಗಳಿಂದ ಆಹಾರ ಒದಗಿಸಲು ಸೋಮವಾರ ಬಿಬಿಎಂಪಿ ಕೌನ್ಸಿಲ್ ಅನುಮೋದನೆ ನೀಡಿತು. ಯೋಜನೆ ಜಾರಿಗೂ ಮೊದಲು ಸಾಧಕ-ಬಾಧಕಗಳ ಚರ್ಚೆ ನಡೆಸುವಂತೆಯೂ ವಿಷಯದಲ್ಲಿ ತಿಳಿಸಲಾಗಿದೆ.
ಆಸ್ತಿ ವಶಕ್ಕೆ ಪಡೆಯಿರಿ: ಕೆ.ಪಿ.ಆಗ್ರಹಾರ ವಾರ್ಡ್‌ನಲ್ಲಿ 30 ಗುಂಟೆ ಪಾಲಿಕೆ ಆಸ್ತಿ ಎಂದು ಹೈಕೋರ್ಟ್ ಆದೇಶ ನೀಡಿದರೂ ಪಾಲಿಕೆ ಅಧಿಕಾರಿಗಳು ಆಸ್ತಿ ವಶಕ್ಕೆ ಪಡೆಯಲು ಮುಂದಾಗುತ್ತಿಲ್ಲ ಎಂದು ಆಡಳಿತ ಪಕ್ಷ ನಾಯಕ ಎಂ.ಶಿವರಾಜು ಆರೋಪಿಸಿದರು. ಅದಕ್ಕೆ ಮೇಯರ್ ಕೂಡಲೇ ಆಸ್ತಿ ವಶಕ್ಕೆ ಪಡೆಯುವಂತೆ ದಕ್ಷಿಣ ವಲಯ ಮುಖ್ಯ ಎಂಜಿನಿಯರ್ ಪ್ರಭಾಕರ್ ಅವರಿಗೆ ಸೂಚನೆ ನೀಡಿದರು.