ನಗರದ ಬಡವರಿಗೆ ರಿಯಾಯಿತಿ ದರದಲ್ಲಿ ಅನ್ನಾಹಾರ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದ್ದ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಬಿಬಿಎಂಪಿ ವ್ಯವಸ್ಥಿತವಾಗಿ ಜಾರಿಗೊಳಿಸಿದ್ದು, 2017ರ ಆಗಸ್ಟ್ 16ರಿಂದ ಕ್ಯಾಂಟೀನ್‌ಗಳಲ್ಲಿ 5 ರೂ.ಗೆ ಬೆಳಗಿನ ಉಪಹಾರ, 10 ರೂ.ಗೆ ಮಧ್ಯಾಹ್ನ ಹಾಗೂ ರಾತ್ರಿಯ ಊಟ ಲಭ್ಯವಾಗುತ್ತಿದೆ.
ಇಂದಿರಾ ಕ್ಯಾಂಟೀನ್ ಯೋಜನೆಗೆ ನಗರದ ಜತೆಯಿಂದ ಅಭೂತಪೂರ್ವ ಸ್ಪಂದನೆಯ ಕೂಡ ದೊರೆತಿದೆ. ಕ್ಯಾಂಟೀನ್ ಸ್ಥಾಪನೆ ವೇಳೆ ಎದುರಾದ ಡೆತಡೆಗಳನ್ನು ನಿವಾರಿಸಿದ ಬಿಬಿಎಂಪಿ, ಪ್ರಸ್ತುತ ಪಾಲಿಕೆ ವ್ಯಾಪ್ತಿಯ 198 ವಾರ್ಡ್‌ಗಳ ಪೈಕಿ 170 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿ ಬಡವರಿಗೆ ಆಹಾರ ಒದಗಿಸುತ್ತಿದೆ.
ಇಂದಿರಾ ಕ್ಯಾಂಟೀನ್‌ಗಳಲ್ಲಿ ನಿತ್ಯ ಒಂದು ಲಕ್ಷಕ್ಕೂ ಹೆಚ್ಚು ಮಂದಿ ತಿಂಡಿ-ಊಟ ಸೇವಿಸುತ್ತಿದ್ದು, ಬಡ ಹಾಗೂ ಮಧ್ಯಮ ವರ್ಗದವರಿಗೆ ಹೆಚ್ಚು ಅನುಕೂಲವಾಗಿದೆ. ಅದರಂತೆ ಕ್ಯಾಂಟೀನ್‌ನಲ್ಲಿ ಸ್ವತ್ಛತೆ ಹಾಗೂ ನೈರ್ಮಲ್ಯಕ್ಕೆ ಮಹತ್ವ ನೀಡಿದ್ದು, ಭದ್ರತೆ ದೃಷ್ಟಿಯಿಂದ ಪ್ರತಿ ಕ್ಯಾಂಟೀನ್ ಹಾಗೂ ಅಡುಗೆ ಮನೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.
ಹೆಚ್ಚು ಜನ ಆಗಮಿಸುವ ಕ್ಯಾಂಟೀನ್‌ಗಳಲ್ಲಿ ವಿತರಿಸುವ ತಿಂಡಿ, ಊಟದ ಪ್ಲೇಟ್‌ಗಳ ಸಂಖ್ಯೆ ಹೆಚ್ಚಿಸಿದ್ದು, ಕೆಲ ಭಾಗಗಳಲ್ಲಿ ಒಂದು ಹೊತ್ತಿಗೆ 1000ಕ್ಕೂ ಹೆಚ್ಚು ಊಟ, ತಿಂಡಿ ವಿತರಿಸಲಾಗುತ್ತಿದೆ. ಈ ಮೂಲಕ ಬೆಂಗಳೂರಿನಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು 25 ರೂ. ಇದ್ದರೆ ಸಾಕು ಎಂಬ ನಂಬಿಕೆಯನ್ನು ಬಡವರಲ್ಲಿ ಮೂಡಿಸಲು ಇಂದಿರಾ ಕ್ಯಾಂಟೀನ್ ಯಶಸ್ವಿಯಾಗಿದೆ.
ಪಾಲಿಕೆಯ 20ಕ್ಕೂ ಅಧಿಕ ವಾರ್ಡ್‌ಗಳಲ್ಲಿ ಕ್ಯಾಂಟೀನ್ ನಿರ್ಮಾಣಕ್ಕೆ ಜಾಗ ದೊರೆಯದ ಹಿನ್ನೆಲೆಯಲ್ಲಿ ಮೊಬೈಲ್ ಕ್ಯಾಂಟೀನ್ ಆರಂಭಕ್ಕೆ ಪಾಲಿಕೆ ಮುಂದಾಗಿದೆ. ಈಗಾಗಲೇ ಮೊಬೈಲ್ ಕ್ಯಾಂಟೀನ್ ವಿನ್ಯಾಸ ಹಾಗೂ ಸ್ಥಳ ಗುರುತಿಸುವ ಕಾರ್ಯದಲ್ಲಿ ಅಧಿಕಾರಿಗಳು ತೊಡಗಿದ್ದಾರೆ.