Advertisement

ಇಂದಿರಾ ಕ್ಯಾಂಟೀನ್‌ಗೆ ಗ್ರಾಹಕರ ಸಂಖ್ಯೆ ಇಳಿಮುಖ!

07:29 PM Sep 29, 2020 | mahesh |

ಕಾರ್ಕಳ: ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರಕ್ಕೆ ಬೇಡಿಕೆ ಕುಸಿತವಾಗಿದ್ದು, ಲಾಕ್‌ಡೌನ್‌ ತೆರವುಗೊಂಡು ಜನಜೀವನ ಸಹಜ ಸ್ಥಿತಿಗೆ ಮರಳಿದ ಬಳಿಕವೂ ಕಾರ್ಕಳ ಬಂಡಿಮಠದ ಇಂದಿರಾ ಕ್ಯಾಂಟೀನ್‌ನಲ್ಲಿ ಗ್ರಾಹಕರ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿದೆ. ಲಾಕ್‌ಡೌನ್‌ ಜಾರಿಗೆ ಮೊದಲು ಇಂದಿರಾ ಕ್ಯಾಂಟೀನ್‌ನಲ್ಲಿ ಮೂರು ಹೊತ್ತು ತಲಾ 500ಕ್ಕೂ ಅಧಿಕ ಮಂದಿಯಂತೆ 1,500ಕ್ಕೂ ಅಧಿಕ ಮಂದಿ ಊಟ, ಉಪಾಹಾರ ಮಾಡುತ್ತಿದ್ದರು. ಈಗ ಅದರ ಪ್ರಮಾಣ ಹೊತ್ತು ಒಂದಕ್ಕೆ 100ರ ಆಸುಪಾಸಿಗೆ ಇಳಿದಿದೆ.

Advertisement

ಕೋವಿಡ್ ಸೋಂಕು ವ್ಯಾಪಿಸಿ ರಾಜ್ಯಾದ್ಯಂತ ಲಾಕ್‌ಡೌನ್‌ ಘೋಷಿಸ ಲ್ಪಟ್ಟಾಗ ಇಂದಿರಾ ಕ್ಯಾಂಟೀನ್‌ಗಳ ಊಟಕ್ಕೆ ಬೇಡಿಕೆ ಬಂದಿತ್ತು. ಕ್ಯಾಂಟೀನ್‌ನಲ್ಲಿ ಊಟ ಮಾಡುವವರ ಸಂಖ್ಯೆ ದುಪ್ಪಟ್ಟಾಗಿತ್ತು. ಸಾಮಾಜಿಕ ಅಂತರ ಕಾಪಾಡಿಕೊಂಡು ನಿರ್ದಿಷ್ಟ ಜನಕ್ಕೆ ಆಹಾರ ವಿತರಿಸಲು ಇಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ವಲಸೆ ಕಾರ್ಮಿಕರು, ಊರಿಗೆ ಮರಳಲು ಸಾಧ್ಯವಾಗದೆ ಉಳಿದುಕೊಂಡವರು, ತೊಂದರೆಗೆ ಒಳಗಾದವರು, ಇಂದಿರಾ ಕ್ಯಾಂಟೀನ್‌ನ ಪ್ರಯೋಜನ ಪಡೆದುಕೊಂಡಿದ್ದರು.

ಲಾಕ್‌ ಡೌನ್‌ ಸಂದರ್ಭ ತೊಂದರೆಗೆ ಒಳಗಾದವರಿಗೆ ನಗರದಲ್ಲಿ ಸರಕಾರೇತರ ಸಂಸ್ಥೆಗಳ ಮೂಲಕ ಉಚಿತ ಆಹಾರ ವಿತರಣೆ ಮಾಡಿದ್ದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ಬೇಡಿಕೆ ಇದ್ದು ಪ್ರಯೋಜನ ಪಡೆಯುವವರ ಸಂಖ್ಯೆಯೂ ಹೆಚ್ಚಿತ್ತು.

ಸರಕಾರ ವಲಸೆ ಕಾರ್ಮಿಕರು ಊರಿಗೆ ಮರಳಲು ಅವಕಾಶ ಕಲ್ಪಿಸಿತ್ತು. ಈ ವೇಳೆ ಹೊರ ರಾಜ್ಯ, ಜಿಲ್ಲೆಗಳ ವಲಸೆ ಕಾರ್ಮಿಕರೆಲ್ಲರೂ ಅವರವರ ಊರಿಗೆ ತೆರಳಿದ್ದು. ವಲಸೆ ಕಾರ್ಮಿಕರಿಲ್ಲದೆ ಇಂದಿರಾ ಕ್ಯಾಂಟಿನ್‌ಗೆ ಬರುವ ಗ್ರಾಹಕರ ಸಂಖ್ಯೆ ಈಗ ಕಡಿಮೆಯಾಗಿದೆ. ಒಂದು ಹೊತ್ತಿಗೆ 500ರ ಮಿತಿಯ ಆಹಾರವನ್ನು ಆಹಾರ ಸರಬರಾಜನ್ನು 100ಕ್ಕೆ ಇಳಿಸಿ ಪುರಸಭೆ ಕ್ರಮ ವಹಿಸಿದೆ.

ಇರುವಲ್ಲಿ ಇರುತ್ತಿದ್ದರೆ ಒಳ್ಳೆಯದಿತ್ತು!
ಕಾರ್ಕಳ ಹಳೆ ಬಸ್ಸು ನಿಲ್ದಾಣದ ಬಳಿ ಇಂದಿರಾ ಕ್ಯಾಂಟೀನ್‌ ಇರಬೇಕಾಗಿತ್ತು. ಅಲ್ಲಿ ಇರುತ್ತಿದ್ದರೆ, ಪೇಟೆಗೆ ಬರುವ ಅಸಂಖ್ಯಾತ ಮಂದಿಗೆ ಕ್ಯಾಂಟೀನ್‌ ಪ್ರಯೋಜನಕ್ಕೆ ಬರುತ್ತಿತ್ತು. ಇಲ್ಲಿ ಖಾಸಗಿ, ಸರಕಾರಿ ಬಸ್‌, ಖಾಸಗಿ ವಾಹನಗಳು ಪಾರ್ಕಿಂಗ್‌ ಮಾಡುವುದಲ್ಲದೆ, ಇದೇ ನಿಲ್ದಾಣದಿಂದ ಬಸ್‌ಗಳು ಹೊರಡುವುದು ನಿಲ್ಲುವುದು ಮಾಡುತ್ತದೆ. ಜನಸಂದಣಿ ಹೆಚ್ಚಿರುವುದು ಇಲ್ಲಿಯೇ.

Advertisement

ಸರಕಾರದ ಯೋಜನೆ ದೂರ
ಸ್ಥಳದ ವಿವಾದದಿಂದ ಇಂದಿರಾ ಕಾಂಟೀನ್‌ ಅನ್ನು ಕಾರ್ಕಳ ಹಳೆ ಬಸ್ಸು ನಿಲ್ದಾಣದಿಂದ ಬಂಡೀಮಠಕ್ಕೆ ಶಿಫ್ಟ್ ಮಾಡಲಾಗಿತ್ತು. ಪರಿಣಾಮ ಜನಸಾಮಾನ್ಯರ ಕೈಗೆಟಕುವ ಸರಕಾರದ ಯೋಜನೆಯೊಂದು ಜನರಿಂದ ದೂರವಾಗಿದೆ. ಬಂಡಿಮಠ ಹೊಸ ಬಸ್‌ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆಯಿದೆ. ಇಲ್ಲಿಗೆ ಎಲ್ಲ ಬಸ್‌ಗಳು ಬರುತಿಲ್ಲ. ಇಂದಿರಾ ಕ್ಯಾಂಟೀನ್‌ ಪ್ರಯೋಜನ ಪಡೆಯುವ ಪ್ರಯಾಣಿಕರು ಅಲ್ಲಿ ವಿರಳ. ಬಸ್‌ ಚಾಲಕ-ನಿರ್ವಾಹಕರು, ಕೆಲವು ಪ್ರಯಾಣಿಕರನ್ನು° ಹೊರತುಪಡಿಸಿ ಹೆಚ್ಚಿನವರು ಕ್ಯಾಂಟೀನ್‌ಗೆ ತೆರಳುವುದಿಲ್ಲ. ಇದ್ದ ಅಷ್ಟಿಷ್ಟು ಕಾರ್ಮಿಕರು, ಪರಿಸರದ ಬಡವರು ಮಾತ್ರ ಈಗ ಪ್ರಯೋಜನ ಪಡೆಯುತ್ತಿದ್ದಾರೆ.

ಬದಲಾದ ನಿರ್ಧಾರದಿಂದ ಸ್ಥಳಾಂತರ
ಹಳೆ ಬಸ್ಸು ನಿಲ್ದಾಣದ ಬಳಿ ಇಂದಿರಾ ಕಾಂಟೀನ್‌ ತೆರೆಯುವ ಬಗ್ಗೆ ನಿರ್ಧರಿಸಲಾಗಿತ್ತು. ಅಲ್ಲಿರುವ ಶಿಕ್ಷಣ ಇಲಾಖೆಯ 9 ಸೆಂಟ್ಸ್‌ ಜಾಗವನ್ನು ಆರಂಭದಲ್ಲಿ ಕಾದಿರಿಸಲಾಗತ್ತು. ಆದರೆ 60×60 ಚದರ ಅಡಿಯಷ್ಟು ಜಾಗ ಇಂದಿರಾ ಕಾಂಟೀನ್‌ಗೆ ಅಗತ್ಯವಿದ್ದು, ಅದು ಸಾಕಾಗುವುದಿಲ್ಲ ಎಂದು ಕಾರಣ ನೀಡಿ, ಪ್ರಸ್ತುತ ಬಂಡೀಮಠಕ್ಕೆ ಸ್ಥಳಾಂತರಿಸಲಾಗಿತ್ತು.

ಆಹಾರ ಮೆನು
ಉಪಹಾರಕ್ಕೆ ಇಡ್ಲಿ, ಪುಳಿಯೋಗರೆ, ಖಾರಬಾತ್‌, ಪೊಂಗಲ್‌, ರವಾ ಕಿಚಡಿ, ಚಿತ್ರಾನ್ನ, ವಾಂಗಿಬಾತ್‌, ಖಾರಾಬಾತ್‌, ಕೇಸರಿಬಾತ್‌. ಉಟಕ್ಕೆ ಅನ್ನ, ತರಕಾರಿ ಸಾಂಬಾರ್‌, ಮೊಸರನ್ನ, ಟೊಮ್ಯಾಟೋ ಬಾತ್‌, ಚಿತ್ರಾನ್ನ, ವಾಂಗಿಬಾತ್‌-ಮೊಸರು, ಬಿಸಿಬೇಳೆ ಬಾತ್‌, ಮೆಂತ್ಯೆ ಫ‌ಲಾವ್‌, ಫ‌ಲಾವ್‌ ಇತ್ಯಾದಿಗಳಿರುತ್ತದೆ.

ಬೇಡಿಕೆಗೆ ತಕ್ಕಷ್ಟು ಮಾತ್ರ
ಕಾರ್ಮಿಕರೆಲ್ಲ ಊರಿಗೆ ಹೋಗಿದ್ದರಿಂದ ಹೊಟೇಲ್‌ಗೆ ಗ್ರಾಹಕರು ಕಡಿಮೆ. ಬೇಡಿಕೆಗೆ ತಕ್ಕಂತೆ ಊಟ, ಉಪಹಾರ ವಿತರಣೆಗೆ ಮಾಡುತ್ತಿದ್ದೇವೆ.
-ರೇಖಾ ಶೆಟ್ಟಿ ಮುಖ್ಯಾಧಿಕಾರಿ ಕಾರ್ಕಳ ಪುರಸಭೆ

ಗ್ರಾಹಕರ ಸಂಖ್ಯೆ ಕಡಿಮೆ
ಬಂಡಿಮಠ ಇಂದಿರಾ ಕ್ಯಾಂಟೀನ್‌ಗೆ ಬರುವ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ಈಗ ನಮಗೆ ಆರ್ಡರ್‌ ಕೂಡ ಇಳಿಕೆ ಮಾಡಿ ಮಿತಿಗೊಳಿಸಲಾಗಿದೆ. ಬರುವ ಗ್ರಾಹಕರಿಗೆ ಅದನ್ನು ವಿತರಿಸುತ್ತಿದ್ದೇವೆ.
-ನಟರಾಜ್‌ ಹೆಬ್ಟಾರ್‌, ಇಂದಿರಾ ಕ್ಯಾಂಟೀನ್‌ ನೌಕರ

ಬೆಳಗ್ಗಿನ ಉಪಹಾರ 05ರೂ.
ಮಧ್ಯಾಹ್ನ/ರಾತ್ರಿ ಊಟ 10 ರೂ.

Advertisement

Udayavani is now on Telegram. Click here to join our channel and stay updated with the latest news.

Next