Advertisement

ಆಮೆಗತಿಯಲ್ಲಿ ಇಂದಿರಾ ಕ್ಯಾಂಟೀನ್‌ ಕಾಮಗಾರಿ

04:14 PM Nov 30, 2018 | |

ಹಾವೇರಿ: ಹಿಂದಿನ ಕಾಂಗ್ರೆಸ್‌ ಸರ್ಕಾರದ ಬಹುನಿರೀಕ್ಷೆಯ ಇಂದಿರಾ ಕ್ಯಾಂಟೀನ್‌ ನೂತನ ಸಮ್ಮಿಶ್ರ ಸರ್ಕಾರ ಬಂದು ನೂರು ದಿನಗಳಾದರೂ ಜಿಲ್ಲಾ ಕೇಂದ್ರದಲ್ಲಿ ಆರಂಭವಾಗದೆ ಇರುವುದು ಜನರ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಬಡವರಿಗೆ, ಜನಸಾಮಾನ್ಯರಿಗೆ, ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬರುವವರಿಗೆ ಅತಿ ಕಡಿಮೆ ದರದಲ್ಲಿ ಊಟ, ಉಪಹಾರ ನೀಡುವ ಉದ್ದೇಶದಿಂದ ‘ಇಂದಿರಾ ಕ್ಯಾಂಟೀನ್‌’ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಆದರೆ, ಯೋಜನೆ ಜಾರಿಗೆ ಬಂದು ಒಂದೂವರೆ ವರ್ಷವಾದರೂ ಜಿಲ್ಲೆಯಲ್ಲಿ ಯೋಜನೆಯ ಅನುಷ್ಠಾನ ಭಾರೀ ವಿಳಂಬವಾಗಿ ಸಾಗುತ್ತಿರುವುದರಿಂದ ರಿಯಾಯಿತಿ ದರದ ಊಟ- ಉಪಹಾರ ಜಿಲ್ಲೆಯ ಜನರಿಗೆ ಇನ್ನೂ ಕನ್ನಡಿಯೊಳಗಿನ ಗಂಟಾಗಿದೆ.

Advertisement

ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭದಲ್ಲಿ ಸ್ಥಳ ಗೊಂದಲಕ್ಕೆ ಸಿಲುಕಿತ್ತು. ಬಡವರಿಗೆ ಅನುಕೂಲವಾಗುವ ಉದ್ದೇಶದಿಂದ ಸ್ಥಾಪನೆ ಮಾಡುವ ಇಂದಿರಾ ಕ್ಯಾಂಟೀನ್‌ ಎಲ್ಲರಿಗೂ ಅನುಕೂಲವಾಗುವ ಸ್ಥಳದಲ್ಲಿಯೇ ಆರಂಭಿಸಬೇಕು. ಅದನ್ನು ಬಿಟ್ಟು ಯಾವುದೋ ಒಂದು ಮೂಲೆಯಲ್ಲಿ ಸ್ಥಾಪಿಸಿದರೆ ಅದರ ಉದ್ದೇಶ ಸಾಕಾರಗೊಳ್ಳುವುದಿಲ್ಲ ಎಂಬ ಬಗ್ಗೆ ಜಿಲ್ಲಾಡಳಿತ ಸಮರ್ಥಿಸಿಕೊಂಡು ಜನನಿಬಿಡ, ಜನಸಂಪರ್ಕಕ್ಕೆ ಸೂಕ್ತವಾಗಿರುವ ಪಶು ಸಂಗೋಪನಾ ಇಲಾಖೆ ಸ್ಥಳವೇ ಸೂಕ್ತ ಎಂದು ಜಿಲ್ಲಾಡಳಿತ ತೀರ್ಮಾನಿಸುವ ಮೂಲಕ ಸ್ಥಳ ಗೊಂದಲ ಅಂತ್ಯಕಂಡಿತು.

ಸ್ಥಳ ಗೊಂದಲ ಸಮಸ್ಯೆ ನಿವಾರಿಸಿ, ನಗರದ ಕೆಇಬಿ ಎದುರಿನ ಪಶುಸಂಗೋಪನಾ ಇಲಾಖೆಯ ಆವರಣದಲ್ಲಿ ಕ್ಯಾಂಟೀನ್‌ ಕಟ್ಟಡ ನಿರ್ಮಾಣಕ್ಕೆ ನಿರ್ಧರಿಸಲಾಯಿತು. ಆದರೆ, ಕಟ್ಟಡ ಕಾಮಗಾರಿಯೂ ಸಹ ಆಮೆಗತಿಯಲ್ಲಿ ಸಾಗಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿಗೆ ರಾಜ್ಯ ಮಟ್ಟದಲ್ಲಿಯೇ ಟೆಂಡರ್‌ ನೀಡಲಾಗಿದ್ದು ಏಕ ನೀಲನಕ್ಷೆ ಆಧರಿಸಿ ಸಿದ್ಧವಾದ ಸಿಮೆಂಟ್‌ ಹಲಗೆಗಳನ್ನು ಜೋಡಿಸುವ ಆಧುನಿಕ ತಂತ್ರಜ್ಞಾನದೊಂದಿಗೆ ಕಟ್ಟಡ ನಿರ್ಮಾಣವಾಗಿದೆ. ಇನ್ನುಳಿದಂತೆ ಕಟ್ಟಡಕ್ಕೆ ಬಣ್ಣ, ಇನ್ನಿತರ ಕೊನೆಯ ಹಂತದ ಸಣ್ಣಪುಟ್ಟ ಕೆಲಸಗಳು ಮಾತ್ರ ಬಾಕಿ ಉಳಿದಿವೆ. ಆದರೆ, ಈ ಕಾಮಗಾರಿ ಪೂರ್ಣಗೊಳಿಸಿ ಕಟ್ಟಡವನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸುವ ಕಾರ್ಯ ಆಗಿಲ್ಲ. ಗುತ್ತಿಗೆದಾರರ ಈ ವಿಳಂಬ ನೀತಿ ಜಿಲ್ಲಾಡಳಿತಕ್ಕೂ ತಲೆನೋವಾಗಿದೆ. ಒಟ್ಟಾರೆ ಇಂದಿರಾ ಕ್ಯಾಂಟೀನ್‌ ಯಾವಾಗ ಪೂರ್ಣಗೊಂಡು, ಜನರಿಗೆ ಯಾವಾಗ ರಿಯಾಯಿತಿ ದರದಲ್ಲಿ ಊಟ-ಉಪಹಾರ ಸಿಗುತ್ತದೆಯೋ ಎಂದು ಬಡವರು ಕಾಯುವಂತಾಗಿದೆ.

ವಾರದ ಗಡುವು
ಕಟ್ಟಡ ನಿರ್ಮಾಣದ ಏಜೆನ್ಸಿಯವರಿಂದಾಗಿ ಕಟ್ಟಡ ನಿರ್ಮಾಣ ಕಾರ್ಯ ವಿಳಂಬವಾಗುತ್ತಿದೆ. ಕಾರಣ ಕೇಳಿದರೆ ಸಾಮಗ್ರಿಗಳ ಪೂರೈಕೆ ಇಲ್ಲ ಎಂದು ಹೇಳುತ್ತಿದ್ದಾರೆ. ಅವರಿಗೆ ಈಗಾಗಲೇ ಈ ಬಗ್ಗೆ ನೊಟೀಸ್‌ ಸಹ ನೀಡಲಾಗಿದೆ. ಒಂದು ವಾರದಲ್ಲಿ ಕಟ್ಟಡ ಪೂರ್ಣಗೊಳಿಸಿ ಹಸ್ತಾಂತರಿಸದಿದ್ದರೆ ಗುತ್ತಿಗೆದಾರರ ವಿರುದ್ಧ ಶಿಸ್ತುಕ್ರಮಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಕ್ಯಾಂಟೀನ್‌ ಆರಂಭಕ್ಕೆ ಬೇಕಾದ ಆಹಾರ ಪೂರೈಕೆ ಟೆಂಡರ್‌ನ್ನು ಆರು ತಿಂಗಳ ಹಿಂದೆಯೇ ಕರೆಯಲಾಗಿದೆ. ಕಟ್ಟಡ ಹಸ್ತಾಂತರಕ್ಕಾಗಿ ಕಾಯುತ್ತಿದ್ದೇವೆ.
 ಡಾ. ವೆಂಕಟೇಶ್‌ ಎಂ.ವಿ., ಜಿಲ್ಲಾಧಿಕಾರಿ

ಎಚ್‌.ಕೆ. ನಟರಾಜ

Advertisement
Advertisement

Udayavani is now on Telegram. Click here to join our channel and stay updated with the latest news.

Next