Advertisement

ಪ್ರಾರಂಭವಾಗದ ಇಂದಿರಾ ಕ್ಯಾಂಟೀನ್‌

04:02 PM Feb 08, 2020 | Suhan S |

ರೋಣ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಬಡವರು ಹಾಗೂ ಹಿಂದಳಿದ ಜನರಿಗೆ ರಿಯಾಯ್ತಿ ದರದಲ್ಲಿ ಊಟೋಪಹಾರ ನೀಡುವ ಉದ್ದೇಶದಿಂದ 2016 ರಲ್ಲಿ ಜಾರಿಗೆ ತಂದ ಇಂದಿರಾ ಕ್ಯಾಂಟೀನ್‌ಗೆ ಸೂಕ್ತ ಜಾಗವಿಲ್ಲವೆಂಬ ಕುಂಟು ನೆಪ ಮುಂದಿಟ್ಟುಕೊಂಡು ಅಧಿಕಾರಿಗಳು ಯೋಜನೆ ಪ್ರಾರಂಭಿಸದೇ ಮಹತ್ವದ ಯೋಜನೆಯೊಂದನ್ನು ಕಾಗದಲ್ಲಿಯೇ ಮುಚ್ಚಿಟ್ಟಿದ್ದಾರೆ.

Advertisement

ಪಟ್ಟಣದ ಪುರಸಭೆಗೆ ಸಂಬಂಧಿಸಿದ ಜಾಗಗಳು ಜನವಸತಿ ಇರುವ ಪ್ರದೇಶದಲ್ಲಿಲ್ಲ. ಕಟ್ಟಡ ನಿರ್ಮಾಣ ಮಾಡಿದರೂ ಜನರಿಗೆ ಉಪಯೋಗ ಆಗುವುದಿಲ್ಲವೆಂದು ಯೋಜನೆ ಪ್ರಾರಂಭ ಮಾಡಿಲ್ಲ. ಇದರಿಂದ ಸುಮಾರು ನಾಲ್ಕು ವರ್ಷಗಳ ಹಿಂದೆ ಜಾರಿಗೆ ಬಂದ ಈ ಯೋಜನೆ ರೋಣ ತಾಲೂಕಿನ ಜನತೆಗೆ ಇನ್ನೂ ದೊರೆಯುತ್ತಿಲ್ಲ.

12 ಲಕ್ಷ ಅನುದಾನ: ಈ ಯೋಜನೆ ಸಫಲತೆಗೆ ರಾಜ್ಯ ಸರ್ಕಾರ ಮಳಿಗೆ ನಿರ್ಮಾಣ ಮಾಡಲು ಈಗಾಗಲೇ 12 ಲಕ್ಷ ಅನುದಾನ ಬಿಡಗಡೆ ಮಾಡಿದೆ. ಕಟ್ಟಡ ನಿರ್ಮಾಣ ಮಾಡಲು ಸೂಕ್ತ ಸ್ಥಳವಿರದೇ ಕಾರಣ ಇಲಾಖೆಯ ಹೆಡ್ಡಿನಲ್ಲಿ ಅನುದಾನ ಕೊಳೆಯುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪ.

ಮೂರು ಬಾರಿ ಪತ್ರ: ರೋಣ ಪುರಸಭೆ ಮುಖ್ಯಾಧಿಕಾರಿ ಸೂಕ್ತ ಜಾಗ ನೀಡುವಂತೆ ಕೋರಿ ರೋಣ ತಹಶೀಲ್ದಾರ್‌ಗೆ ಮೂರ್ನಾಲ್ಕು ಬಾರಿ ಪತ್ರ ಬರೆದಿದ್ದಾರೆ. ಆದರೆ ಕಂದಾಯ ಇಲಾಖೆಯಿಂದ ಜಾಗ ನೀಡಲು ಸಾಧ್ಯವಿಲ್ಲ ಎಂದು ಉತ್ತರ ನೀಡಿದ್ದಾರೆ. ಇದರಿಂದ ನೀ ಕೊಡೆ..ನಾ ಬಿಡೆ.. ಎಂಬಂತೆ ಪುರಸಭೆ ಹಾಗೂ ಕಂದಾಯ ಇಲಾಖೆ ಜಗಳದ ನಡುವೆ ಇಂದಿರಾ ಕ್ಯಾಂಟೀನ್‌ನಿಂದ ವಂಚಿತರಾಗಿದ್ದಾರೆ. ಇಂದಿರಾ ಕ್ಯಾಂಟೀನ್‌ ಕಟ್ಟಡಕ್ಕಾಗಿ ಅನುದಾನ ಬಂದು ಖಜಾನೆಯಲ್ಲಿ ಕೊಳೆಯುತ್ತಿದೆ. ಆದರೆ ಬಡವರಿಗೆ ರಿಯಾಯ್ತಿ ದರದಲ್ಲಿ ಊಟ- ತಿಂಡಿ ವ್ಯವಸ್ಥೆ ಇನ್ನೂ ಮರೀಚಿಕೆಯಾಗಿದೆ. ಇಂದಿರಾ ಕ್ಯಾಂಟೀನ್‌ ಎಲ್ಲ ಕಡೆ ಪ್ರಾರಂಭವಾಗಿ ಆ ಭಾಗದ ಸಾರ್ವಜನಿಕರು ಅದರ ಉಪಯೋಗ ಪಡೆಯುತ್ತಿದ್ದಾರೆ. ಆದರೆ ರೋಣ ತಾಲೂಕಿನ ಜನರಿಗೆ ಕ್ಯಾಂಟೀನ್‌ ಇನ್ನೂ ಲಭಿಸದಿರುವುದು ದೌರ್ಭಾಗ್ಯವೇ ಸರಿ.

ಈಗಾಗಲೇ ನರಗುಂದ ಶಿರಹಟ್ಟಿಯಲ್ಲಿ ಸ್ಥಳದ ಸಮಸ್ಯೆಯಿಂದ ಇಂದಿರಾ ಕ್ಯಾಂಟಿನ್‌ ವಿಳಂಬವಾಗಿತ್ತು. ಅದನ್ನು ಬಗೆಹರಿಸಿ ಪ್ರಾರಂಭ ಮಾಡಿದ್ದೇವೆ. ಅದೇ ರೀತಿ ರೋಣ ಪುರಸಭೆ ಮುಖ್ಯಾಧಿಕಾರಿ ಹಾಗೂ ತಹಶೀಲ್ದಾರ್‌ ಇಬ್ಬರನ್ನು ಕರೆಸಿ ಇಂದಿರಾ ಕ್ಯಾಂಟೀನ್‌ ಜಾಗದ ಸಮಸ್ಯೆ ಬಗೆಹರಿಸಲಾಗುವುದು. ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

Advertisement

 

-ಯಚ್ಚರಗೌಡ ಗೋವಿಂದಗೌಡ್ರ

Advertisement

Udayavani is now on Telegram. Click here to join our channel and stay updated with the latest news.

Next