ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್ ತೆರೆಯುವ ಸಂಬಂಧ ಶೀಘ್ರದಲ್ಲೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಹಿಂದೆ ಟೆಂಡರ್ ಪಡೆದವರೇ ಮತ್ತೆ ಮುಂದೆ ಬಂದಿದ್ದಾರೆ. 8 ವಲಯದಲ್ಲೂ ಟೆಂಡರ್ ಪ್ರಕ್ರಿಯೆಯನ್ನು ನಡೆಸಲಾಗುವುದು. ಪ್ರತಿಯೊಬ್ಬರಿಗೆ 2 ವಲಯದ ಟೆಂಡರ್ ಕರೆಯಲು ಅವಕಾಶ ಕಲ್ಪಿಸಲಾಗುವುದು. ಈ ಬಗ್ಗೆ ಶೀಘ್ರದಲ್ಲೇ ಸೂಕ್ತವಾದ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪಾಲಿಕೆಯ ಪ್ರೀ ನರ್ಸರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ನೇಮಿಸಿಕೊಂಡಿರುವ ಶಿಕ್ಷಕರ ಪೈಕಿ ಹಲವರು ನಿಗದಿತ ಅರ್ಹತೆ ಪಡೆಯದೆ ಇರುವುದು ಬೆಳಕಿಗೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ 50 ರಿಂದ 80 ಮಂದಿ ಶಿಕ್ಷಕಿಯರನ್ನು ಕೈಬಿಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ಗುತ್ತಿಗೆ ನೀಡಿರುವ ಏಜೆನ್ಸಿಗೂ ಮಾಹಿತಿ ನೀಡಲಾಗಿದೆ. ಹೊಸ ಶಿಕ್ಷಕರು ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು ಅಲ್ಲಿಯವರೆಗೂ ಈ ಶಿಕ್ಷಕರೇ ಮುಂದುವರಿಯಲಿದ್ದಾರೆ ಎಂದು ತಿಳಿಸಿದರು.
ಬಾಕಿ ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಪ್ರತಿಭಟನೆ ಮಾಡಿದ್ದು ಈ ಬಗ್ಗೆ ಸಂಬಂಧ ಪಟ್ಟವರ ಜತೆಗೆ ಚರ್ಚಿಸಲಾಗಿದೆ. ಶೀಘ್ರವೇ ಸಮಸ್ಯೆ ಇತ್ಯರ್ಥವಾಗಲಿದೆ ಎಂದರು.
ಬಿಬಿಎಂಪಿ ಹಣಕಾಸು ಆಯುಕ್ತರ ಭೇಟಿ : ಒಣ ತ್ಯಾಜ್ಯ ಸಂಗ್ರಹ ಕೇಂದ್ರಗಳ ಬಾಕಿ ವೇತನ ಸಂಬಂಧ ಪಾಲಿಕೆ ಹಣಕಾಸು ಆಯುಕ್ತರನ್ನು ಬೆಂಗಳೂರು ನವನಿರ್ಮಾಣ ಪಕ್ಷ ಭೇಟಿ ಮಾಡಿ ಸಮಾಲೋಚನೆ ನಡೆಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಎನ್‌ಪಿ ಮುಖಂಡರಾದ ಲಲಿತಾಂಬ ಬಿ.ವಿ. ಮತ್ತು ಸೌಮ್ಯ ರಾಘವನ್, ಈ ಸಂಬಂಧ ಪಾಲಿಕೆ ಹಣಕಾಸು ಅಧಿಕಾರಿ ಜಯರಾಂ ರಾಯಪುರ ಅವರನ್ನು ಭೇಟಿ ಮಾಡಿ ವೇತನ ಬಿಡುಗಡೆ ಬಗ್ಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.