ಬಾಗಲಕೋಟೆ: ಕಳೆದ ಎರಡು ವರ್ಷಗಳ ಹಿಂದೆಯೇ ಮಂಜೂರಾಗಿ, ಕಟ್ಟಡ ಕಾಮಗಾರಿ ಮುಗಿದಿದ್ದರೂ ಹಲವು ಕಾರಣಗಳಿಂದ ಉದ್ಘಾಟನೆ ಭಾಗ್ಯ ಕಂಡಿರದ ಇಂದಿರಾ ಕ್ಯಾಂಟೀನ್‌ಗಳು ಜೂ. 29ರಿಂದ ಬಡವರ ಸೇವೆಗೆ ಬಾಗಿಲು ತೆರೆಯಲಿವೆ.
ಹೌದು, ಕಳೆದ 2017ರಲ್ಲಿಯೇ ಬಾಗಲಕೋಟೆ ನಗರಕ್ಕೆ ಎರಡು ಇಂದಿರಾ ಕ್ಯಾಂಟೀನ್ ಮಂಜೂರಾಗಿದ್ದವು. ಬೆಂಗಳೂರು ಮೂಲದ ಗುತ್ತಿಗೆ ಸಂಸ್ಥೆ, ನಗರದ ಹಳೆಯ ಬಸ್ ನಿಲ್ದಾಣ ಹಾಗೂ ನವನಗರದ ಬಸ್ ನಿಲ್ದಾಣದಲ್ಲಿ ಕ್ಯಾಂಟೀನ್ ಕಟ್ಟಡ ನಿರ್ಮಾಣ ಕಾರ್ಯ ಆರಂಭಗೊಂಡಿದ್ದವು. ಅದಕ್ಕೂ ಮುಂಚೆ ನಗರದ ಯಾವ ಸ್ಥಳದಲ್ಲಿ ಆರಂಭಿಸಬೇಕು ಎಂಬ ಗೊಂದಲ, ಜಾಗದ ಸಮಸ್ಯೆ ಎದುರಾಗಿತ್ತು. ಅಂತಿಮವಾಗಿ ಎರಡೂ ಕಡೆ, ಬಸ್ ನಿಲ್ದಾಣದಲ್ಲಿಯೇ ಇಂದೀರಾ ಕ್ಯಾಂಟೀನ್ ಆರಂಭಿಸಲು ನಿರ್ಧಾರ ಕೈಗೊಳ್ಳಲಾಗಿತ್ತು.
ಹಳೆಯ ನಗರದ ಬಸ್ ನಿಲ್ದಾಣ ಹಾಗೂ ನವನಗರದ ಬಸ್ ನಿಲ್ದಾಣದಲ್ಲಿ ಒಂದೇ ಮಾದರಿಯ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣಗೊಂಡು, ಸುಮಾರು 8 ತಿಂಗಳು ಕಳೆದಿವೆ. ವಿಧಾನಸಭೆ ಚುನಾವಣೆಗೂ ಮುನ್ನ ಉದ್ಘಾಟಿಸುವ ತಯಾರಿಯಲ್ಲಿದ್ದ ಕಾಂಗ್ರೆಸ್ ಪ್ರಮುಖರಿಗೆ ಅದು ಸಾಧ್ಯವಾಗಲಿಲ್ಲ. ಕೊನೆಗೆ ವಿಧಾನಸಭೆ ಚುನಾವಣೆ ಬಳಿಕ ಉದ್ಘಾಟನೆಗೆ ದಿನ ನಿಗದಿ ಮಾಡಿದ್ದರೂ, ಅಷ್ಟೊತ್ತಿಗೆ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿತ್ತು. ಹೀಗಾಗಿ ಮತ್ತೆ ಕ್ಯಾಂಟೀನ್ ಉದ್ಘಾಟನೆ ದಿನ ಮುಂದೂಡಲಾಗಿತ್ತು.
ಅಂತಿಮವಾಗಿ ನವನಗರ ನೂತನ ಬಸ್ ನಿಲ್ದಾಣ ಹಾಗೂ ಹಳೆ ಬಸ್ ನಿಲ್ದಾಣದಲ್ಲಿ ಸ್ಥಾಪಿಸಲಾದ ಇಂದಿರಾ ಕ್ಯಾಂಟಿನ್ ಉದ್ಘಾಟನೆ ಕಾರ್ಯಕ್ರಮ ಜೂ. 29ರಂದು ಬೆಳಗ್ಗೆ 10-30ಕ್ಕೆ ನಿಗದಿಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಉದ್ಘಾಟಿಸುವರು. ಸಕ್ಕರೆ ಸಚಿವ ಆರ್.ಬಿ. ತಿಮ್ಮಾಪುರ, ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ, ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ ತಿಳಿಸಿದ್ದಾರೆ.
ಉಪಹಾರ-ಊಟ: ಇಂದಿರಾ ಕ್ಯಾಂಟೀನ್‌ನಲ್ಲಿ ನಿತ್ಯ ಬೆಳಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಇರಲಿದೆ. 5 ರೂ.ಗೆ ಉಪಹಾರ ಹಾಗೂ ರೂ. 10ಗೆ ಊಟ (ಉತ್ತರಕರ್ನಾಟಕ ಶೈಲಿಯ ರೊಟ್ಟಿ, ಚಪಾತಿ ಸಹಿತ) ನೀಡಲಾಗುತ್ತಿದೆ. ಬಡ ಜನರು ಇದರ ಪ್ರಯೋಜನ ಪಡೆಯುವಂತೆ ಕೋರಲಾಗಿದೆ.