Advertisement

ಅಡಿಪಾಯ ಹಂತದಲ್ಲಿರುವ ಸುಳ್ಯದ ಇಂದಿರಾ ಕ್ಯಾಂಟೀನ್‌ಗೆ ಮರು ಜೀವ!

02:50 AM Jul 07, 2018 | Karthik A |

ಸುಳ್ಯ: ಈ ಹಿಂದಿನ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನನ್ನು ಮುಂದುವರಿಸುವುದಾಗಿ ಗುರುವಾರ ಬಜೆಟ್‌ ಮಂಡನೆ ವೇಳೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಘೋಷಿಸಿದ್ದು ಬಡ ಹಾಗೂ ಶ್ರಮಿಕ ವರ್ಗದವರಿಗೆ ಸಮಾಧಾನ ತಂದಿದೆ. ಆದರೆ ಸುಳ್ಯದಲ್ಲಿ ಕಳೆದ ಸರಕಾರದ ಅವಧಿಯ ಕೊನೆಯಲ್ಲಿ ಆರಂಭವಾಗಿದ್ದ ಕ್ಯಾಂಟೀನ್‌ ನಿರ್ಮಾಣ ಪ್ರಕ್ರಿಯೆ ಅಡಿಪಾಯ ಹಂತದಲ್ಲೇ ನಿಂತುಹೋಗಿದೆ.

Advertisement

ಮಿನಿ ವಿಧಾನಸೌಧದ ಹಿಂಭಾಗದಲ್ಲಿ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ನೆಲ ಸಮತಟ್ಟು ಆಗಿ, ಅಡಿಪಾಯ ಕಾಮಗಾರಿ ಪೂರ್ಣಗೊಂಡಿದೆ. ಮೂರು ತಿಂಗಳ ಹಿಂದೆ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಅನಂತರ ಕಾಮಗಾರಿ ಸ್ಥಗಿತಗೊಂಡಿತ್ತು. ಮತ್ತೆ ಆರಂಭವಾಗಿಲ್ಲ. ಹಾಗಾಗಿ ಕಡಿಮೆ ದರದಲ್ಲಿ ಉಪಾಹಾರ, ಊಟ ಪೂರೈಸುವ ಯೋಜನೆ ಯಾವಾಗ ಕಾರ್ಯಗತವಾಗುವುದೋ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.

ನಿರ್ವಹಣೆ ಹೇಗೆ?
ಕ್ಯಾಂಟೀನ್‌ ನಿರ್ಮಿಸಲು ಸ್ಥಳ, ಕುಡಿಯುವ ನೀರು, ತ್ಯಾಜ್ಯ ಸಂಗ್ರಹಕ್ಕೆ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ಸ್ಥಳೀಯಾಡಳಿತಕ್ಕೆ ಸೇರಿದೆ. ಕಾರ್ಯಾರಂಭದ‌ ಬಳಿಕ ನಿರ್ವಹಣೆ ಹೊಣೆ ಸ್ಥಳೀಯಾಡಳಿತದ್ದು. ನಗರದಲ್ಲಿ ಕ್ಯಾಂಟೀನ್‌ ಸ್ಥಾಪನೆಗೆ ಸುಳ್ಯ ನ.ಪಂ. ಸ್ಥಳ ಒದಗಿಸಿದೆ. ಪ್ರಾಥಮಿಕ ಹಂತದ ಮೂಲಸೌಕರ್ಯ ಕಲ್ಪಿಸಿದೆ. ಕಟ್ಟಡ ನಿರ್ಮಾಣ, ಆಹಾರ ಪೂರೈಕೆಗೆ ರಾಜ್ಯ ಮಟ್ಟದಲ್ಲೇ ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ಪಡೆದ ಸಂಸ್ಥೆ ಅದರ ಜವಾಬ್ದಾರಿ ವಹಿಸಲಿದೆ. ಪ್ರತಿ ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ 32 ಲಕ್ಷ ರೂ. ವೆಚ್ಚ ತಗಲುತ್ತದೆ ಅನ್ನುವುದು ಸರಕಾರದ ಅಂದಾಜು.

ಮುಂದೇನು?
ಚುನಾವಣೆ ಘೋಷಣೆ ಕಾರಣದಿಂದ ನೀತಿ ಸಂಹಿತೆ ನೆಪದಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಹಳೆ ಸರಕಾರ ಬದಲಾಗಿದೆ. ಈಗ ಹೊಸ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಗುರುವಾರ ಮಂಡಿಸಿದ ಬಜೆಟ್‌ನಲ್ಲಿ ಇಂದಿರಾ ಕ್ಯಾಂಟೀನ್‌ ಮುಂದುವರಿಸುವುದಾಗಿ ಕುಮಾರಸ್ವಾಮಿ ಘೋಷಿಸಿದ್ದಾರೆ. 47 ಕಡೆಗಳಲ್ಲಿ ಹೊಸದಾಗಿ ಕ್ಯಾಂಟೀನ್‌ ತೆರೆಯುವುದಾಗಿಯೂ ತಿಳಿಸಿದ್ದಾರೆ. ಹೀಗಾಗಿ, ಹಳೆಯ ಕಾಮಗಾರಿ ಶೀಘ್ರದಲ್ಲೇ ಮುಂದುವರಿಯುವ ನಿರೀಕ್ಷೆ ವ್ಯಕ್ತವಾಗಿದೆ.

10 ರೂ.ಗೆ ಊಟ
ಇಂದಿರಾ ಕ್ಯಾಂಟೀನ್‌ ನಲ್ಲಿ 10 ರೂ.ಗೆ ಊಟ, 5 ರೂ.ಗೆ ತಿಂಡಿ ನೀಡಲಾಗುತ್ತದೆ. ಸುತ್ತೋಲೆಯಲ್ಲಿ ಇರುವ ಮೆನು ಪ್ರಕಾರ, ಬೆಳಗ್ಗೆ ಉಪಾಹಾರ, ಇಡ್ಲಿ ಸಾಂಬಾರ್‌, ರೈಸ್‌ ಬಾತ್‌, ಅವಲಕ್ಕಿ, ಉಪ್ಪಿಟ್ಟು, ಖಾರ ಪೊಂಗಲ್‌ (ವಾರದಲ್ಲಿ ಒಂದರಂತೆ), ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಾರು, ಉಪ್ಪಿನಕಾಯಿ, ಹಪ್ಪಳ, ರವಿವಾರ ಬಿಸಿಬೇಳೆ ಬಾತ್‌, ತರಕಾರಿ, ಅನ್ನ, ಪುಳಿಯೊಗರೆ (ವಾರದಲ್ಲಿ ಒಂದು ದಿನ). ಇಲ್ಲಿಗೆ ಕೇಂದ್ರೀಕೃತ ಅಡುಗೆ ಮನೆ ಮೂಲಕ ಆಹಾರ ಪೂರೈಸಲಾಗುತ್ತದೆ. ಬೆಂಗಳೂರು ಸಹಿತ ಜಿಲ್ಲಾ ಕೇಂದ್ರಗಳಲ್ಲಿ ಕ್ಯಾಂಟೀನ್‌ ಆರಂಭಗೊಂಡಿದೆ. ಊಟ – ಉಪಾಹಾರ ವಿತರಣೆ ನಡೆಯುತ್ತಿದೆ. ಚುನಾವಣೆ ಕೊನೆ ಹಂತದಲ್ಲಿ ತಾಲೂಕು ಕೇಂದ್ರದಲ್ಲಿ ನಿರ್ಮಾಣದ ಬಗ್ಗೆ ಘೋಷಣೆ ಹೊರಡಿಸಿದ ಕಾರಣ, ಅನುಷ್ಠಾನ ಹಂತದಲ್ಲೇ ಹೆಣಗಾಡುತ್ತಿದೆ.

Advertisement

ಸ್ಥಳ ಒದಗಿಸಿದ್ದೇವೆ
ಸರಕಾರದ ಸೂಚನೆಯ ಪ್ರಕಾರ ಇಂದಿರಾ ಕ್ಯಾಂಟೀನ್‌ ಗೆ ಸ್ಥಳ ಒದಗಿಸಿದ್ದೇವೆ. ಅಗತ್ಯ ಸೌಕರ್ಯ ಒದಗಿಸುವ ಜವಾಬ್ದಾರಿ ಹಂತ ಹಂತವಾಗಿ ಈಡೇರಿಸುವಂಥದ್ದು. ಕಟ್ಟಡ ನಿರ್ಮಾಣ, ಕ್ಯಾಂಟೀನ್‌ ಆರಂಭ ಗುತ್ತಿಗೆ ಸಂಸ್ಥೆಗೆ ಸಂಬಂಧಿಸಿದ ವಿಚಾರ. ನ.ಪಂ. ಮೂಲ ಸೌಕರ್ಯ ನೀಡಲಷ್ಟೇ ಜವಾಬ್ದಾರಿ ಹೊಂದಿದೆ.
– ಶಿವಕುಮಾರ್‌, ಎಂಜಿನಿಯರ್‌, ನ.ಪಂ. ಸುಳ್ಯ

— ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next