Advertisement
ಬಡ ಹಾಗೂ ಮಧ್ಯಮ ವರ್ಗದವರಿಗೆ ಕಡಿಮೆ ಬೆಲೆಗೆ ಮೂರು ಹೊತ್ತಿನ ಊಟ ನೀಡುವ ಉದ್ದೇಶವಿರುವ ಇಂದಿರಾ ಕ್ಯಾಂಟೀನ್ ಯೋಜನೆಗೆ ರಾಜಕೀಯ ಬಣ್ಣ ಲೇಪಿಸಿ, ಅದರ ಅನುಷ್ಠಾನ ನಿಗದಿತ ಅವಧಿಯೊಳಗೆ ಕೈಗೊಳ್ಳದೆ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಪ್ರತಿಯೊಂದು ಸರಕಾರವೂ ತನ್ನ ಆಡಳಿತ ಅವಧಿಯಲ್ಲಿ ಬಡ ಹಾಗೂ ಮಧ್ಯಮ ವರ್ಗದವರಿಗಾಗಿ ಒಂದಲ್ಲ ಒಂದು ಜನಪ್ರಿಯ ಯೋಜನೆ ಘೋಷಿಸುತ್ತದೆ. ಅಂತೆಯೇ ಕಾಂಗ್ರೆಸ್ ಸರಕಾರ ಸಹ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೆಸರಿನಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೆ ತಂದಿದೆ. ಜನರಿಗೆ ನೇರವಾಗಿ ತಲುಪಿ ಅನುಕೂಲವಾಗುವ ಇಂತಹ ಯೋಜನೆಗಳು ಶೀಘ್ರ ಅನುಷ್ಠಾನವಾಗಿ ಜನಪರ ಯೋಜನೆಗಳಾಗಿ ಮಾರ್ಪಡಬೇಕೇ ಹೊರತು, ಯೋಜನೆ ತಂದಿದ್ದು ಬೇರೊಂದು ಪಕ್ಷ ಎಂಬ ಕಾರಣಕ್ಕೆ ಅದರ ಅನುಷ್ಠಾನದಲ್ಲಿಯೂ ರಾಜಕೀಯ ತಂದು ವಿಳಂಬ ಧೋರಣೆ ಅನುಸರಿಸುವುದು ಸೂಕ್ತವಲ್ಲ.
Related Articles
Advertisement
ಯೋಜನೆಗೆ ಚಾಲನೆ ದೊರೆತು ವರ್ಷ ಕಳೆದಿದೆ. ಆದರೆ, ಈವರೆಗೆ ಶೇ.50ರಷ್ಟು ಅನುಷ್ಠಾನವಾಗಿಲ್ಲ. ಸಮ್ಮಿಶ್ರ ಸರಕಾರ ಬಂದ ಅನಂತರ ಯೋಜನೆ ಅನುಷ್ಠಾನ ವೇಗ ಕಡಿಮೆಯಾಗಿದೆ. ಒಂದು ವೇಳೆ ಕಾಂಗ್ರೆಸ್ ಜಾರಿಗೆ ತಂದ ಯೋಜನೆ ಎಂಬ ಕಾರಣಕ್ಕಾಗಿ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಜೆಡಿಎಸ್ ನಿರ್ಲಕ್ಷಿಸಿದರೆ, ಅದು ರಾಜ್ಯದ ಜನರಿಗೆ ಮಾಡಿದ ಅನ್ಯಾಯವಾಗುತ್ತದೆ.
ಜನಪ್ರಿಯ ಯೋಜನೆಗಳನ್ನು ಸಿದ್ದರಾಮಯ್ಯ ಮಾತ್ರವೇ ಜಾರಿಗೊಳಿಸಿಲ್ಲ. ಈ ಹಿಂದಿನ ಪ್ರತಿಯೊಂದು ಸರಕಾರವೂ ಆಯಾ ಸಂದರ್ಭಕ್ಕೆ ಅನುಗುಣವಾಗಿ ಯೋಜನೆಗಳನ್ನು ಜಾರಿಗೊಳಿಸಿರುವ ಹಲವಾರು ನಿದರ್ಶನಗಳಿವೆ. ಹಿಂದೆ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೋಡಿಯ ಸರಕಾರ ಲಾಟರಿ ಹಾಗೂ ಸಾರಾಯಿಯಿಂದ ಸಂಸಾರಗಳು ಹಾಳಾಗಬಾರದೆಂದು ರಾಜ್ಯದಲ್ಲಿ ಅವುಗಳನ್ನು ನಿಷೇಧಿಸಿದೆ.
ಜತೆಗೆ, ಹೆಣ್ಣು ಮಕ್ಕಳು ಶಾಲೆಗಳಿಗೆ ಬರುವುದನ್ನು ಪ್ರೋತ್ಸಾಹಿಸಲು ಪ್ರೌಢಶಾಲೆಗೆ ಬರುವ ಹೆಣ್ಣು ಮಕ್ಕಳಿಗೆ ಸೈಕಲ್ ನೀಡುವ ಬಿ.ಎಸ್. ಯಡಿಯೂರಪ್ಪ ಅವರ ಯೋಜನೆ ಇಂದಿಗೂ ಜನಪ್ರಿಯ. ಸೈಕಲ್ ನೀಡುವ ಯೋಜನೆಯಿಂದಾಗಿ ಲಕ್ಷಾಂತರ ಹೆಣ್ಣು ಮಕ್ಕಳು ವಿದ್ಯಾವಂತರಾಗಿದ್ದು, ತಮ್ಮ ಜೀವನ ರೂಪಿಸಿಕೊಂಡಿದ್ದಾರೆ. ಇದು ಬಿಜೆಪಿ-ಜೆಡಿಎಸ್ ತಂದ ಯೋಜನೆ ಎಂಬ ಕಾರಣಕ್ಕೆ ಮುಂದೆ ಹೆಣ್ಣು ಮಕ್ಕಳಿಗೆ ಸೈಕಲ್ ನೀಡುವುದನ್ನು ನಿಲ್ಲಿಸಲು ಸಾಧ್ಯವೇ? ಅಥವಾ ಭ್ರೂಣ ಹತ್ಯೆ ತಡೆಯಲು ಜಾರಿಗೊಳಿಸಿದ ಭಾಗ್ಯಲಕ್ಷ್ಮೀ ಯೋಜನೆ ನಿಲ್ಲಿಸಲಾಗುತ್ತದೆಯೇ? ಅಂತಹ ಯೋಜನೆಗಳ ಸಾಲಿಗೆ ಇಂದಿರಾ ಕ್ಯಾಂಟೀನ್ ಸೇರಿದ್ದು, ಇಂದಿರಾ ಎಂಬ ಹೆಸರಿದೆ ಎಂಬ ಕಾರಣಕ್ಕಾಗಿ ಯೋಜನೆಯನ್ನು ನಿರ್ಲಕ್ಷಿಸುವುದು ಉಚಿತವಲ್ಲ.