ಹುನಗುಂದ: ಪಟ್ಟಣದ ಗುರುಭವನದ ಪಕ್ಕ ನಿರ್ಮಿಸಿದ ಇಂದಿರಾ ಕ್ಯಾಂಟೀನ್ ಕಾಮಗಾರಿ ಪೂರ್ಣಗೊಂಡು ಎರಡು ವರ್ಷ ಕಳೆದರೂ ಉದ್ಘಾಟನೆಗೊಂಡಿಲ್ಲ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಸಿವುಮುಕ್ತ ರಾಜ್ಯವನ್ನಾಗಿ ಮಾಡುವ ಉದ್ದೇಶದಿಂದ ಪ್ರತಿ ತಾಲೂಕಿಗೆ ಇಂದಿರಾ ಕ್ಯಾಂಟೀನ್ ಆರಂಭಿಸುವ ಯೋಜನೆ ಜಾರಿಗೊಳಿಸಿತ್ತು.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಗತ್ಯವಿರುವ ಎಲ್ಲ ಉಪಕರಣ ಅಳವಡಿಸಲಾಗಿದೆ. ಇದುವರೆಗೂ ಈ ಕಟ್ಟಡ ಉದ್ಘಾಟಿಸಿ ಕ್ಯಾಂಟೀನ್ ನಡೆಸಲು ಗುತ್ತಿಗೆ ಪ್ರಕ್ರಿಯೆ ನಡೆಸದ ಕಾರಣ ಕಡಿಮೆ ದರದಲ್ಲಿ ಊಟ, ಉಪಾಹಾರ ಸೌಲಭ್ಯದಿಂದ ಇಲ್ಲಿನ ಬಡವರು, ಕೂಲಿಕಾರ್ಮಿಕರು, ವಿದ್ಯಾರ್ಥಿಗಳು ವಂಚಿತವಾಗುತ್ತಿದ್ದಾರೆ. ದೇವರು ವರ ಕೊಟ್ಟರು ಪೂಜಾರಿ ವರ ಕೊಡಲಿಲ್ಲ ಎನ್ನುವಂತಾಗಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವದಿಯಲ್ಲಿ ಮಂಜೂರು ಪಡೆದಿದ್ದ ಈ ಇಂದಿರಾ ಕ್ಯಾಂಟೀನ್ ಕಾಮಗಾರಿ ಕುಂಟುತ್ತಾ ಸಾಗಿ, ಕಳೆದ ಎರಡು ವರ್ಷಗಳ ಹಿಂದೆ ಪೂರ್ಣಗೊಂಡಿದೆ. ಕಾಮಗಾರಿ ಪೂರ್ಣಗೊಂಡು 2-3 ವರ್ಷಗಳು ಕಳೆದರೂ ಇದನ್ನು ಬಳಕೆ ಮಾಡದ ಕಾರಣ ಒಳಗೆ ಜೋಡಿಸಿದ ಉಪಕರಣಗಳು ತುಕ್ಕು ಹಿಡಿಯಲಾರಂಭಿಸಿವೆ. ಕಟ್ಟಡ ಹಾಳಾಗುವ ಸ್ಥಿತಿ ತಲುಪಿದೆ.
ಸರ್ಕಾರ ಇಂದಿರಾ ಕ್ಯಾಂಟಿನ್ ಆರಂಭಿಸಲು ಟೆಂಡರ್ ಕರೆದಿಲ್ಲ. ಹೀಗಾಗಿ ಕ್ಯಾಂಟಿನ್‌ಗೆ ಉದ್ಘಾಟನೆ ಭಾಗ್ಯ ದೊರೆತಿಲ್ಲ. ಇಂದಿರಾ ಕ್ಯಾಂಟೀನ್ ಕಟ್ಟಡದ ಪಕ್ಕದಲ್ಲಿ ಸರಕಾರಿ ಪದವಿ ಪೂರ್ವ ಮತ್ತು ಪದವಿ ಕಾಲೇಜು ಇದ್ದು ನಿತ್ಯ ನೂರಾರು ವಿದ್ಯಾರ್ಥಿಗಳಿಗೆ, ಕ್ಷೇತ್ರ ಶಿಕ್ಷಣಾಧಿ ಕಾರಿಗಳ ಕಾರ್ಯಾಲಯಕ್ಕೆ ಬರುವ ಶಿಕ್ಷಕರಿಗೆ ಮತ್ತು ಸಾರ್ವಜನಿಕರಿಗೆ ಹೆಚ್ಚು ಉಪಯೋಗವಾಗುತ್ತಿತ್ತು.
ಸರ್ಕಾರದ ಮಟ್ಟದಲ್ಲಿ ಟೆಂಡರ್ ಆಗದ ಕಾರಣ ಇಂದಿರಾ ಕ್ಯಾಂಟೀನ್ ಇನ್ನೂ ಆರಂಭಿಸಲು ಆಗಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು.
-ಅಶೋಕ ಪಾಟೀಲ, ಮುಖ್ಯಾಧಿಕಾರಿ, ಪುರಸಭೆ ಹುನಗುಂದ
–ಸುರೇಶ ಪತ್ತಾರ