Advertisement

4 ತಿಂಗಳಿನಿಂದ ಪಾವತಿಯಾಗದ ಇಂದಿರಾ ಕ್ಯಾಂಟೀನ್‌ ಬಿಲ್‌

10:07 AM Aug 21, 2019 | Sriram |

ವಿಶೇಷ ವರದಿ-ಉಡುಪಿ: ಬಡವರಿಗೆ ಕಡಿಮೆ ಬೆಲೆಯಲ್ಲಿ ಆಹಾರ ಒದಗಿಸುವ ನಿಟ್ಟಿನಲ್ಲಿ ಪ್ರಾರಂಭಿಸಿದ ಜಿಲ್ಲೆಯ ಇಂದಿರಾ ಕ್ಯಾಂಟೀನ್‌ಗಳಿಗೆ ಕಳೆದ ನಾಲ್ಕು ತಿಂಗಳಿನಿಂದ ಬಿಲ್‌ ಪಾವತಿಯಾಗಿಲ್ಲ.

Advertisement

2018ರಲ್ಲಿ ಉಡುಪಿ, ಕುಂದಾಪುರ, ಮಣಿಪಾಲ, ಕಾರ್ಕಳದಲ್ಲಿ ತಲಾ ಒಂದರಂತೆ 4 ಇಂದಿರಾ ಕ್ಯಾಂಟೀನ್‌ ತೆರೆಯಲಾಗಿದೆ. ಎರಡು ವರ್ಷಗಳ ಅವಧಿಗೆ ಬೆಂಗಳೂರಿನ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಿದ್ದು, ಪ್ರಾರಂಭದಲ್ಲಿ ಸರಿಯಾದ ಸಮಯಕ್ಕೆ ಬಿಲ್‌ ಪಾವತಿಯಾಗಿತ್ತು. ಇದೀಗ ಕಳೆದ ನಾಲ್ಕು ತಿಂಗಳಿನಿಂದ ಸರಿಯಾದ ಸಮಯಕ್ಕೆ ಬಿಲ್‌ ಪಾವತಿಯಾಗುತ್ತಿಲ್ಲ.

40 ಲ.ರೂ. ಮೊತ್ತದ ಬಿಲ್‌ ಬಾಕಿ
ಉಡುಪಿ ಹಾಗೂ ಮಣಿಪಾಲದ ಇಂದಿರಾ ಕ್ಯಾಂಟೀನ್‌ ಅಕ್ಟೋಬರ್‌ನಲ್ಲಿ ಪ್ರಾರಂಭವಾಗಿದೆ. ಕುಂದಾಪುರ, ಕಾರ್ಕಳದಲ್ಲಿ ನವೆಂಬರ್‌ 2018ರಲ್ಲಿ ಪ್ರಾರಂಭವಾಗಿದ್ದು ಫೆಬ್ರವರಿ ವರೆಗೆ ಬಿಲ್‌ ಪಾವತಿಯಾಗಿದೆ. ನಾಲ್ಕು ಕ್ಯಾಂಟೀನ್‌ನಲ್ಲಿ ಸುಮಾರು 40 ಲ.ರೂ. ವರೆಗೆ ಬಿಲ್‌ ಬಾಕಿಯಿದೆ. ನಾಲ್ಕೂ ಕ್ಯಾಂಟೀನ್‌ಗಳ ಎರಡು ತಿಂಗಳ ಬಿಲ್‌ ಪಾವತಿಗೆ ಪ್ರಕ್ರಿಯೆ ನಡೆಯುತ್ತಿರುವುದರಿಂದ ಹಣ ಪಾವತಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುಂದಾಪುರ ಕ್ಯಾಂಟೀನ್‌ನ ಎರಡು ತಿಂಗಳ ಬಿಲ್‌ ಇನ್ನೂ ನಗರಾಭಿವೃದ್ಧಿ ಕೋಶಕ್ಕೆ ಹೋಗಿಲ್ಲ.

ಕಡಿಮೆ ಬೆಲೆಗೆ ಉಪಾಹಾರ
ಇಂದಿರಾ ಕ್ಯಾಂಟೀನ್‌ನಲ್ಲಿ ಗ್ರಾಹಕರಿಗೆ 5 ರೂ.ಗೆ ಉಪಾಹಾರ ಹಾಗೂ 10 ರೂ.ಗೆ ಊಟ ನೀಡಲಾಗುತ್ತಿದೆ. ನಗರಾಭಿವೃದ್ಧಿ ಕೋಶ ಉಪಾಹಾರಕ್ಕೆ 11.66 ರೂ. ಮತ್ತು ಊಟಕ್ಕೆ 23.33 ರೂ. ನಂತೆ ಗುತ್ತಿಗೆದಾರರ ಮೊತ್ತವನ್ನು ಭರಿಸುತ್ತಿದೆ. ಆಯಾ ತಾಲೂಕು ನೋಡಲ್‌ ಅಧಿಕಾರಿಗಳು ಬಿಲ್‌ಗ‌ಳನ್ನು ನಗರಾಭಿವೃದ್ಧಿ ಕೋಶಕ್ಕೆ ಸಲ್ಲಿಸಿದ ಅನಂತರ ಜಿಲ್ಲಾಧಿಕಾಗಳು ಅಂಕಿತ ನೀಡಬೇಕು.

ಉಡುಪಿ-ಕುಂದಾಪುರ
ಉತ್ತಮ ಸ್ಪಂದನೆ
ಉಡುಪಿ ಕ್ಯಾಂಟೀನ್‌ನಲ್ಲಿ ಪ್ರತಿನಿತ್ಯ ಬೆಳಗ್ಗೆ 300, ರವಿವಾರ 150-250 ಮಂದಿ ಉಪಾಹಾರ ಸೇವಿಸುತ್ತಾರೆ. ಮಧ್ಯಾಹ್ನ 400 ಮಂದಿ ಊಟ ಮಾಡುತ್ತಾರೆ. ಸಾಯಂಕಾಲ 120ರಿಂದ 130 ಮಂದಿ ಊಟ ಮಾಡುತ್ತಾರೆ. ಮಣಿಪಾಲದಲ್ಲಿ ಬೆಳಗ್ಗೆ 200 ಮಂದಿ ಉಪಾಹಾರ, ಮಧ್ಯಾಹ್ನ 300ಮಂದಿ ಹಾಗೂ ರಾತ್ರಿ ಊಟ 150 ಮಂದಿ ಊಟ ಮಾಡುತ್ತಾರೆ. ಕುಂದಾಪುರದಲ್ಲಿ ಬೆಳಗ್ಗೆ 300 ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ತಲಾ 300 ಮಂದಿ ಊಟ ಮಾಡುತ್ತಾರೆ.

Advertisement

ಒತ್ತಡ ತಂತ್ರ
ಅಧಿಕಾರಿಗಳಿಂದ ಇಂದಿರಾ ಕ್ಯಾಂಟೀನ್‌ಗೆ ಜಿಲ್ಲಾಡಳಿತ ನಿಗದಿ ಪಡಿಸಿದ ಗುರಿಯನ್ನು ಕಡಿತಗೊಳಿಸುವಂತೆ ಒತ್ತಡ ಬರುತ್ತಿದೆ. ಇತರೆ ಹೊಟೇಲ್‌ಗ‌ಳು ಅಧಿಕಾರಿಗಳಿಗೆ ಗುರಿ ಕಡಿಮೆ ಮಾಡುವಂತೆ ಒತ್ತಾಯ ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಂತ್ರಿಕ ಕಾರಣ
ತಾಂತ್ರಿಕ ಕಾರಣದಿಂದ ಬಿಲ್‌ಗ‌ಳನ್ನು ಕಳುಹಿಸಲು ತಡವಾಗಿದೆ. ಕುಂದಾಪುರದಲ್ಲಿ ಕ್ಯಾಂಟೀನ್‌ನಲ್ಲಿ ನೀಡಿರುವ ಗುರಿಗಿಂತ ಕಡಿಮೆ ಊಟ ಹೋಗುತ್ತಿದೆ. ಆದರೆ ಬಿಲ್‌ ಮಾಡುವಾಗ ಸರಕಾರ ನಿಗದಿ ಮಾಡಿದ ಗುರಿಯನ್ನು ತೋರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ 2 ತಿಂಗಳ ಬಿಲ್‌ಗ‌ಳನ್ನು ಸಂಪೂರ್ಣ ಪರಿಶೀಲನೆ ನಡೆಸಿದ ಅನಂತರ ಬಿಲ್‌ ಮಂಜೂರಾತಿಗೆ ಕಳುಹಿಸಲಾಗುತ್ತದೆ.
-ಗೋಪಾಲಕೃಷ್ಣ ಶೆಟ್ಟಿ,
ಪುರಸಭಾ ಮುಖ್ಯಾಧಿಕಾರಿ. ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next