Advertisement
1974ರಲ್ಲಿ ಸಂಸದರಾಗಿದ್ದ ಧರ್ಮರಾವ್ ಅಫಜಲಪುರಕರ್ ನಿಧನರಾದ ನಂತರ ನಡೆದ ಲೋಕಸಭೆ ಉಪ ಚುನಾವಣೆ ವೇಳೆಯಲ್ಲಿ ಜನಸಂಘದ ಅಭ್ಯರ್ಥಿಯಾಗಿದ್ದ ವೇಳೆ ಡಿ.ಎಚ್. ಇಲ್ಲಾಳ ಪರ ಚುನಾವಣೆ ಪ್ರಚಾರ ಕೈಗೊಳ್ಳಲು ಕುಶಾಬಾವು ಠಾಕ್ರೆ, ಸುಂದರಸಿಂಗ್ ಭಂಡಾರಿ, ಜಗನ್ನಾಥರಾವ್ ಜೋಶಿ ಆಗಮಿಸಿದ್ದರು.
ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಹಾಗೂ ಆಗಿನ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರು 1976ರಲ್ಲಿ ವಿಧಾನಸಭೆಗೆ ಚುನಾವಣೆ ನಡೆಯುವ ಸಂದರ್ಭದಲ್ಲಿ ಸೇಡಂನಿಂದ ಬೀದರಗೆ ಹೋಗುವ ಮಾರ್ಗ ಮಧ್ಯದಲ್ಲಿ ಪಟ್ಟಣಕ್ಕೆ ರಾತ್ರಿ ವೇಳೆ ಆಗಮಿಸಿ ಈಗಿನ ಸರಕಾರಿ ಕನ್ಯಾ ಕಾಲೇಜು (ಪೊಲೀಸ್ ಪರೇಡ್) ಮೈದಾನದಲ್ಲಿ ಆಗಿನ ಕಾಂಗ್ರೆಸ್ ಅಭ್ಯರ್ಥಿ ದೇವೇಂದ್ರಪ್ಪ ಘಾಳಪ್ಪ ಜಮಾದಾರ ಪರ ಹಾತ್ ನಿಶಾನ್ ಕೋ ವೋಟ್ ಡಾಲಿಯೇ ಎಂದು ಮಾತನಾಡಿ ನೆರೆದ ಜನರ ಗಮನ ಸೆಳೆದಿದ್ದರು. ಇಂದಿರಾಗಾಂಧಿ ಅವರನ್ನು ನೋಡಲು ತಾಲೂಕಿನ ಅನೇಕ ಗ್ರಾಮಗಳಿಂದ ಜನರು ಆಗಮಿಸಿದ್ದರು. ಇದೇ ವೇಳೆ ಅವರ ಜೊತೆ ಕಾಂಗ್ರೆಸ್ ಮುಖಂಡ ಗುಂಡೂರಾವ್ ಆಗಮಿಸಿದ್ದರು. ಮಲ್ಲಿಕಾರ್ಜುನ ಖರ್ಗೆ ಜತೆಯಲ್ಲಿದ್ದರು. ಅಂದಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ 1985ರಲ್ಲಿ ಚಿಂಚೋಳಿ ಕ್ಷೇತ್ರದಿಂದ ಶಾಸಕರಾಗಿದ್ದ ಹಿರಿಯರಾದ ಎಂ. ವೀರಯ್ಯ ಸ್ವಾಮಿ ಈ ಕುರಿತು ಮಾಹಿತಿ ನೀಡಿದ್ದಾರೆ.
Related Articles
Advertisement
1980ರಲ್ಲಿ ಧರ್ಮಸಿಂಗ್ ಪ್ರಥಮಬಾರಿ ಲೋಕಸಭೆ ಚುನಾವಣೆಗೆ ನಿಂತಾಗ ಆಂಧ್ರಪ್ರದೇಶದ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಚೆನ್ನಾರೆಡ್ಡಿ ಅವರು ಆಗಮಿಸಿದ್ದರು. ನಂತರ ಕೇರಳದ ಕಾಂಗ್ರೆಸ್ ನಾಯಕ, ಇಂದಿರಾಗಾಂಧಿ ಅವರ ಆಪ್ತ ಸಿ.ಎಂ. ಸ್ಟೀಫನ್ ಲೋಕಸಭೆ ಚುನಾವಣೆಗೆ ನಿಂತಿದ್ದರು. ಆಗ ಧರ್ಮಸಿಂಗ್ ರಾಜೀನಾಮೆ ನೀಡಿದ್ದರು.
ಚಿಂಚೋಳಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದವರಲ್ಲಿ ವೀರೇಂದ್ರ ಪಾಟೀಲ ಎರಡು ಸಲ ಮುಖ್ಯಮಂತ್ರಿಗಳಾಗಿದ್ದರು. ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದ ದೇವೇಂದ್ರಪ್ಪ ಘಾಳಪ್ಪ ಜಮಾದಾರ ಎರಡು ಸಲ ಮತ್ತು 1994ರಲ್ಲಿ ವೈಜನಾಥ ಪಾಟೀಲ ಒಂದು ಸಲ ಸಚಿವರಾಗಿದ್ದರು. ಇವರೆಲ್ಲರ ಪರ ಪ್ರಚಾರ ಕೈಗೊಳ್ಳಲು ಅನೇಕ ರಾಷ್ಟ್ರೀಯ ನಾಯಕರು ಆಗಮಿಸಿದ್ದರು. 1983ರಲ್ಲಿ ಅಂದಿನ ಬಿಜೆಪಿ ಹಿರಿಯ ನಾಯಕರಾಗಿದ್ದ ಅಟಲಬಿಹಾರಿ ವಾಜಪೇಯಿ ಪಟ್ಟಣಕ್ಕೆ ಆಗಮಿಸಿ ಪಟ್ಟಣದ ಭೀಮಶೆಟ್ಟಿ ಪಾಟೀಲ ಅವರಿಗೆ ಸೇರಿದ ಅಂಬ್ರಾಯಿ (ಮಾವಿನ ಗಿಡಗಳ ಜಾಗ)ಯಲ್ಲಿ ಪಕ್ಷದ ಪ್ರಚಾರವನ್ನು ಮಾಡಿದ್ದರು.
ಈ ವೇಳೆ ಆರ್‌ಎಸ್‌ಎಸ್‌ನ ಹಿರಿಯರಾದ ಅನಂತಶರ್ಮಾ, ಅಶೋಕ ಪಾಟೀಲ, ಶ್ಯಾಮಸುಂದರ ಮೂಲಿ, ಮಧುಸೂಧನಕಾಟಾಪುರ ಇವರ ಜತೆಯಲ್ಲಿದ್ದರು. 2012ರಲ್ಲಿ ಸುನೀಲ ವಲ್ಯಾಪುರೆ ಬಿಜೆಪಿ ಆಡಳಿತದಲ್ಲಿ ಕೇವಲ ಆರು ತಿಂಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಈಗಿನ ವಿಧಾನಸಭೆಚುನಾವಣೆ ಸಂದರ್ಭದಲ್ಲಿ ಇವರ ಪರವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಚಾರಕ್ಕೆ ಆಗಮಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಡಾ| ಉಮೇಶ ಜಾಧವ್ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿ ಪ್ರಚಾರ ನಡೆಸಿದ್ದರು.