ಹುಬ್ಬಳ್ಳಿ: ಕೇಂದ್ರ ಸರಕಾರದ ಉಡಾನ್ ಯೋಜನೆಯಡಿ ಇಂಡಿಗೋ ಸಹ ಜೂನ್ ದಿಂದ ಹುಬ್ಬಳ್ಳಿಯಿಂದ ದೇಶದ ಐದು ಪ್ರಮುಖ ನಗರಗಳಾದ ಅಹ್ಮದಾಬಾದ್, ಚೆನ್ನೈ, ಕೊಚ್ಚಿನ್ ಗೋವಾ, ಕಣ್ಣೂರಿಗೆ ವಿಮಾನಯಾನ ಸೇವೆ ಕಲ್ಪಿಸಲು ಸಿದ್ಧತೆ ನಡೆಸಿದೆ.
ಇಂಡಿಗೋ ಕಂಪನಿಯು ಹುಬ್ಬಳ್ಳಿಯಿಂದ ಈ ಐದು ನಗರಗಳಿಗೆ ವಾರದ ಎಲ್ಲಾ ದಿನಗಳಲ್ಲೂ ವಿಮಾನ ಸೇವೆ ಒದಗಿಸಲು ಮುಂದಾಗಿದೆ. ಆ ನಿಟ್ಟಿನಲ್ಲಿ ನಿಲ್ದಾಣದಲ್ಲಿ ಜಾಗ ಸಹ ಪಡೆದುಕೊಂಡಿದೆ. ಅದಕ್ಕೆ ಹಣ ಕೂಡ ಪಾವತಿಸಿದೆ ಎಂದು ತಿಳಿದುಬಂದಿದೆ. ಸ್ಟಾರ್ ಏರ್‌ಲೈನ್ಸ್ ಕೂಡ ಸಿದ್ಧತೆ: ಗೋಡಾವತ್‌ನವರ ಸ್ಟಾರ್ ಏರ್‌ಲೈನ್ಸ್ ಕೂಡ ಉಡಾನ್ ಯೋಜನೆಯಡಿ ಹುಬ್ಬಳ್ಳಿಯಿಂದ ದೆಹಲಿ, ಪುಣೆ ಹಾಗೂ ತಿರುಪತಿಗೆ ವಾರದ ಎಲ್ಲಾ ದಿನಗಳಲ್ಲೂ ವಿಮಾನಯಾನ ಸೇವೆ ಒದಗಿಸಲು ಉತ್ಸುಕತೆ ತೋರಿದೆ. ಸ್ಟಾರ್ ಏರ್‌ಲೈನ್ಸ್‌ನ ಅಧಿಕಾರಿಗಳು ಈಗಾಗಲೇ ಹುಬ್ಬಳ್ಳಿ ವಿಮಾನನಿಲ್ದಾಣ ಪರಿಶೀಲಿಸಿ, ವಿಮಾನಯಾನ ಸೇವೆ ಒದಗಿಸುವ ನಿಟ್ಟಿನಲ್ಲಿ ಜಾಗವನ್ನು ಗುರುತಿಸಿ ಖರೀದಿಸಲು ಮುಂದಾಗಿದ್ದಾರೆ. ಇದಕ್ಕೆ ಅವಶ್ಯವಾದ ಹಣ ಪಾವತಿಸುವುದು ಮಾತ್ರ ಬಾಕಿ ಉಳಿದಿದೆ. ಈ ಸಂಸ್ಥೆಯು ಅಕ್ಟೋಬರ್‌ದೊಳಗೆ ನಗರದಿಂದ ವಿಮಾನಯಾನ ಸೇವೆ ಆರಂಭಿಸುವ ಲಕ್ಷಣಗಳಿವೆ.
ಈಗಾಗಲೇ ಸ್ಪೈಸ್ ಜೆಟ್ ಕಂಪನಿಯು ಮೇ 14 ಹಾಗೂ ಅಕ್ಟೋಬರ್ 28ರಿಂದ ಹುಬ್ಬಳ್ಳಿಯಿಂದ ದೇಶದ ಪ್ರಮುಖ ನಗರಗಳಾದ ಕೋಲ್ಕತ್ತಾ, ದೆಹಲಿ, ಜಬಲಪುರ, ಅಹ್ಮದಾಬಾದ್, ಮುಂಬಯಿ, ಪುಣೆ, ಪಾಟ್ನಾ. ಚೆನ್ನೈ, ಹೈದರಾಬಾದ್, ಕೊಚ್ಚಿ, ಬೆಂಗಳೂರು, ಮಂಗಳೂರು ಹಾಗೂ ಕೊಲಂಬೋ ಮತ್ತು ದುಬೈಗೆ ವಿಮಾನಯಾನ ಸೇವೆ ಒದಗಿಸಲು ಮುಂದಾಗಿದೆ. ಜೊತೆಗೆ ತನ್ನ ವೆಬ್‌ಸೈಟ್‌ನಲ್ಲಿ ವೇಳಾಪಟ್ಟಿ ಸಹ ಬಿಡುಗಡೆಗೊಳಿಸಿದೆ.
ನಿರಂತರ ಹಾರಾಟ: ಸದ್ಯ ಏರ್ ಇಂಡಿಯಾ ಹುಬ್ಬಳ್ಳಿಯಿಂದ ಬೆಂಗಳೂರು ಹಾಗೂ ಮುಂಬಯಿಗೆ ವಿಮಾನಯಾನ ಸೇವೆ ಒದಗಿಸುತ್ತಿದೆ. ಮೇದಿಂದ ಸ್ಪೈಸ್‌ಜೆಟ್ ಕಂಪನಿಯು ವಿಮಾನಯಾನ ಸೇವೆ ಆರಂಭಿಸಲು ಸಿದ್ಧತೆ ನಡೆಸಿದೆ. ಜೊತೆಗೆ ಇಂಡಿಗೋ ಕಂಪನಿಯು ಜೂನ್‌ದಿಂದ ವಿಮಾನಯಾನ ಸೇವೆ ಒದಗಿಸಲು ಸಿದ್ಧತೆ ನಡೆಸಿದೆ. ಜೊತೆಗೆ ಗೋಡಾವತ್‌ನವರ ಸ್ಟಾರ್‌ಏರ್‌ಲೈನ್ಸ್‌ನವರು ನಗರದಿಂದ ಪ್ರಮುಖ ಮೂರು ನಗರಗಳಿಗೆ ವಿಮಾನಯಾನ ಸೇವೆ ಒದಗಿಸುವ ಕುರಿತು ಬಿಡ್ ಪಡೆದುಕೊಂಡಿದೆ. ಅಲ್ಲದೆ ಸ್ಥಳೀಯ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಪ್ರಸ್ತಾವನೆ ಕೂಡ ಸಲ್ಲಿಸಿದೆ. ಅವರು ಅದಕ್ಕೆ ಅನುಮತಿ ಕೂಡ ನೀಡಿದ್ದಾರೆ. ನಾಗರಿಕ ವಿಮಾನಯಾನ ನಿರ್ದೇಶಕರ ಅಂತಿಮ ಪರವಾನಗಿಗಾಗಿ ಸಂಸ್ಥೆ ಕಾಯುತ್ತಿವೆ. ಒಂದು ವೇಳೆ ಅಂದುಕೊಂಡಂತೆ ಎಲ್ಲವೂ ಸುಸೂತ್ರವಾಗಿ ನಡೆದರೆ ಮೇ-ಜೂನ್‌ನಿಂದ ಹುಬ್ಬಳ್ಳಿಯಿಂದ ದೇಶದ ವಿವಿಧ ಪ್ರಮುಖ ನಗರಗಳಿಗೆ ವಿಮಾನಯಾನ ಸೇವೆ ನಿರಂತರವಾಗಿ ದೊರೆಯಲಿದೆ.
ಕೇಂದ್ರ ಸರಕಾರದ ಉಡಾನ್ ಯೋಜನೆಯಡಿ ಇಂಡಿಗೋ ಕಂಪನಿಯವರು ಹುಬ್ಬಳ್ಳಿಯಿಂದ ದೇಶದ ಪ್ರಮುಖ ಐದು ನಗರಗಳಿಗೆ ಜೂನ್‌ದಿಂದ ವಿಮಾನಯಾನ ಸೇವೆ ಒದಗಿಸಲು ಮುಂದಾಗಿದ್ದಾರೆ. ಜೊತೆಗೆ ನಿಲ್ದಾಣದಲ್ಲಿ ಜಾಗ ಕೂಡ ಖರೀದಿಸಿ ಸಂಸ್ಥೆಗೆ ಭರಿಸಬೇಕಾದ ಹಣ ಪಾವತಿಸಿದ್ದಾರೆ. ಗೋಡಾವತ್ ನವರ ಸ್ಟಾರ್ ಏರ್ ಲೈನ್ಸ್‌ನವರು ಕೂಡ ನಗರದಿಂದ ದೇಶದ ಪ್ರಮುಖ ಮೂರು ನಗರಗಳಿಗೆ ವಿಮಾನಯಾನ ಸೇವೆ ಒದಗಿಸಲು ಮುಂದಾಗಿದ್ದಾರೆ. ನಿಲ್ದಾಣವನ್ನು ಪರಿಶೀಲಿಸಿ, ತಮ್ಮ ಸಂಸ್ಥೆಗೆ ಅವಶ್ಯವಾದ ಜಾಗವನ್ನು ಗುರುತಿಸಿದ್ದಾರೆ. ಸ್ಪೈಸ್‌ಜೆಟ್ ಕಂಪನಿಯವರು ನಗರದಿಂದ ವಿವಿಧ ಪ್ರದೇಶಗಳಿಗೆ ಮೇದಿಂದ ವಿಮಾನಯಾನ ಸೇವೆ ಆರಂಭಿಸುವುದಾಗಿ ತಿಳಿಸಿದ್ದಾರೆ.
ಶಿವಾನಂದ ಬಿ. ಬೇನಾಳ,
ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ
ಶಿವಶಂಕರ ಕಂಠಿ