ಮುಂಬಯಿ : ಮಿತವ್ಯಯಕ್ಕೆ ಹೆಸರಾಗಿರುವ ಇಂಡಿಗೋ ವಿಮಾನಯಾನ ಸಂಸ್ಥೆ ಮುಂದಿನ ತಿಂಗಳಿಂದ ಗೋವೆಯಿಂದ ಹುಬ್ಬಳ್ಳಿ ಮತ್ತು ಕೊಚ್ಚಿಗೆ ತನ್ನ ವಿಮಾನಯಾನ ಸೇವೆಯನ್ನು ಆರಂಭಿಸಲಿದೆ.ಇದಕ್ಕಾಗಿ ಅದು ಎಟಿಆರ್ ಪ್ಲೇನ್ ಬಳಸಲಿದೆ.
ಜೂನ್ 28ರಂದು ಹುಬ್ಬಳ್ಳಿಗೆ ಆರಂಭವಾಗುವ ಇಂಡಿಗೋ ವಿಮಾನ ಯಾನ ಸೇವೆಯು ಅದರ 52ನೇ ಗಮ್ಯತಾಣವಾಗಿದೆ. ಇದರೊಂದಿಗೆ ಇಂಡಿಗೋ ದಕ್ಷಿಣ ಭಾರತದ ವಾಯು ಯಾನ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಲಿದೆ.
ಹುಬ್ಬಳ್ಳಿ – ಚೆನ್ನೈ, ಹುಬ್ಬಳ್ಳಿ – ಬೆಂಗಳೂರು ಮತ್ತು ಹುಬ್ಬಳ್ಳಿ -ಅಹ್ಮದಾಬಾದ್ ವಾಯು ಯಾನ ಸೇವೆಯನ್ನು ಇಂಡಿಗೋ ಏರ್ ಲೈನ್ಸ್ ಜುಲೈ 1ರಿಂದ ಆರಂಭಿಸಲಿದೆ.
ಗುರುಗ್ರಾಮದಲ್ಲಿ ತನ್ನ ಪ್ರಧಾನ ಕಾರ್ಯಾಲಯವನ್ನು ಹೊಂದಿರುವ ಇಂಡಿಗೋ ದಿನಕ್ಕೆ 50 ಗಮ್ಯ ತಾಣಗಳಿಗೆ 1,086 ಹಾರಾಟಗಳನ್ನು ಕೈಗೊಳ್ಳುತ್ತಿದೆ. ಇವುಗಳಲ್ಲಿ ಎಂಟು ಅಂತಾರಾಷ್ಟ್ರೀಯ ಯಾನಗಳೂ ಸೇರಿವೆ. ಇಂಡಿಗೋ ಬಳಿ 160 ವಿಮಾನಗಳಿವೆ. ಇವುಗಳಲ್ಲಿ ಪ್ರಾದೇಶಿಕ ಎಟಿಆರ್ ಜೆಟ್ ವಿಮಾನಗಳೂ ಸೇರಿವೆ.
ತಿರುಚಿನಾಪಳ್ಳಿಯನ್ನು ಈಗಾಗಲೇ ತನ್ನ 51ನೇ ಗಮ್ಯ ತಾಣವಾಗಿ ಪ್ರಕಟಿಸಿರುವ ಇಂಡಿಗೋ, ಜೂನ್ 1ರಿಂದ ಬೆಂಗಳೂರು ಮತು ಕೊಚ್ಚಿಯನ್ನು ಸಂಪರ್ಕಿಸುವ ವಾಯು ಯಾನ ಆರಂಭಿಸಲಿದೆ.