ಹೊಸದಿಲ್ಲಿ: ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ನಲುಗಿರುವ ಹಾಗೂ ಖಾಸಗೀಕರಣದತ್ತ ಮುಖ ಮಾಡಿರುವ ಏರ್‌ಇಂಡಿಯಾವನ್ನು ಖರೀದಿಸಲು ವಿಮಾನಯಾನ ಸಂಸ್ಥೆ ಇಂಡಿಗೋ ಉತ್ಸುಕವಾಗಿದೆ.
ಏರ್‌ಇಂಡಿಯಾದ ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನು ನಿರ್ವಹಿಸಲು ಅವಕಾಶ ಕೋರಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಇಂಡಿಗೋ ಸಂಸ್ಥೆ ಪತ್ರ ಬರೆದಿದೆ. ದೇಶದ ಬಿಳಿಯಾನೆ ಎಂದೇ ಕರೆಯಲ್ಪಡುತ್ತಿದ್ದ ಹಾಗೂ ಬರೋಬ್ಬರಿ 52 ಸಾವಿರ ಕೋಟಿ ನಷ್ಟದಲ್ಲಿರುವ ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸಲು ಬುಧವಾರವಷ್ಟೇ ಕೇಂದ್ರ ಸಂಪುಟವು ತಾತ್ವಿಕ ಒಪ್ಪಿಗೆ ನೀಡಿತ್ತು.
ಇದಾದ ಬೆನ್ನಲ್ಲೇ ಪತ್ರ ಬರೆದಿರುವ ಇಂಡಿಗೋ, ‘ಏರ್‌ಇಂಡಿಯಾದ ಷೇರುಗಳನ್ನು ಖರೀದಿಸಲು ನಾವು ಆಸಕ್ತಿ ಹೊಂದಿದ್ದೇವೆ,’ ಎಂದಿದೆ. ಇಂಡಿಗೋ ಮಾತ್ರವಲ್ಲದೇ, ದೇಶೀಯವಾಗಿ ಹಾಗೂ ಅಂತಾರಾಷ್ಟ್ರೀಯವಾಗಿ ಸೇವೆ ನೀಡುತ್ತಿರುವ ಅನೇಕ ಖಾಸಗಿ ಕಂಪನಿಗಳು ನಮ್ಮನ್ನು ಸಂಪರ್ಕಿಸಿವೆ. ಆದರೆ, ಅವೆಲ್ಲವೂ ಅನೌಪಚಾರಿಕ ಮಾತುಕತೆಗಳನ್ನಷ್ಟೇ ನಡೆಸಿವೆ. ಇಂಡಿಗೋ ಮಾತ್ರ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದೆ ಎಂದು ವಿಮಾನಯಾನ ಸಹಾಯಕ ಸಚಿವ ಜಯಂತ್ ಸಿನ್ಹಾ ಹೇಳಿದ್ದಾರೆ.
ಮಾಜಿ ಉದ್ಯೋಗಿಗಳಿಗೆ ಎಚ್ಚರಿಕೆ: ಈ ನಡುವೆ, ಏರ್‌ಇಂಡಿಯಾವನ್ನು ವಿರೋಧಿಸಿ ಯಾವುದೇ ಹೇಳಿಕೆ ನೀಡದಂತೆ ಮಾಜಿ ಉದ್ಯೋಗಿಗಳಿಗೆ ವಿಮಾನಯಾನ ಸಂಸ್ಥೆ ಎಚ್ಚರಿಕೆ ನೀಡಿದೆ. ಯಾರೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಂಸ್ಥೆ ವಿರುದ್ಧ ಹೇಳಿಕೆ ನೀಡುವುದಾಗಲೀ, ಬರೆಯುವುದಾಗಲೀ ಮಾಡಬಾರದು. ಮಾಡಿದ್ದೇ ಆದಲ್ಲಿ, ನಿವೃತ್ತಿ ಸೌಲಭ್ಯ ಗಳನ್ನು ಕಡಿತಗೊಳಿಸಲಾಗುವುದು ಎಂದು ಏರ್‌ಇಂಡಿಯಾ ಎಚ್ಚರಿಸಿದೆ. ವಿಮಾನ ಯಾನ ಸಂಸ್ಥೆಯನ್ನು ಖಾಸಗೀಕರಣಗೊಳಿಸಿದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸುಮಾರು 7 ಕಾರ್ಮಿಕ ಒಕ್ಕೂಟಗಳು ಬೆದರಿಕೆ ಹಾಕಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಏರ್‌ಇಂಡಿಯಾವನ್ನು ಖರೀದಿಸಬೇಕೆಂದರೆ ಸಾಕಷ್ಟು ಧೈರ್ಯವಿರಬೇಕು. ಆದರೆ, ದಯವಿಟ್ಟು ನನ್ನನ್ನು ಕ್ಷಮಿಸಿ. ಅಷ್ಟೊಂದು ಧೈರ್ಯಶಾಲಿ ನಾನಲ್ಲ.
– ಆನಂದ್ ಮಹೀಂದ್ರಾ, ಕೈಗಾರಿಕೋದ್ಯಮಿ
ಏರ್‌ಇಂಡಿಯಾ ಎನ್ನುವುದು ದೇಶದ ಹೆಮ್ಮೆ. ಈಗ ಕೇಂದ್ರ ಸರಕಾರವು ಅದನ್ನು ಸಂಪೂರ್ಣವಾಗಿ ಖಾಸಗಿಗೆ ಮಾರಲು ನಿರ್ಧರಿಸಿದೆ. ನಾವಿದನ್ನು ಬೆಂಬಲಿಸಲ್ಲ.
– ಮಮತಾ ಬ್ಯಾನರ್ಜಿ, ಪ.ಬಂಗಾಲ ಸಿಎಂ