Advertisement

ವಿದೇಶಿಯರಿಗಿರುವ ಸಂಸ್ಕೃತ ಭಾಷೆ ಆಸಕ್ತಿ ಸ್ವದೇಶಿಗರಲ್ಲಿ ಇಲ್ಲ

09:21 PM Jul 23, 2019 | Lakshmi GovindaRaj |

ಮೈಸೂರು: ಕನ್ನಡ ಪತ್ರಿಕೆಗಳೇ ಕಷ್ಟದ ಪರಿಸ್ಥಿತಿಯಲ್ಲಿರುವಾಗ ಸಂಸ್ಕೃತ ಪತ್ರಿಕೆಯೊಂದು 50 ವರ್ಷಗಳ ಕಾಲ ಬೆಳೆದು ಬಂದಿರುವುದು ಸಂತಸ ತಂದಿದೆ ಎಂದು ಸುಧರ್ಮಾ ಸಂಸ್ಕೃತ ದಿನಪತ್ರಿಕೆ ಸಂಪಾದಕ ಸಂಪತ್‌ಕುಮಾರ್‌ ಹೇಳಿದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಏರ್ಪಡಿಸಿದ್ದ ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

Advertisement

1970ರಲ್ಲಿ ನನ್ನ ತಂದೆಯವರು ಸಂಸ್ಕೃತ ದಿನಪತ್ರಿಕೆಯನ್ನು ಆರಂಭಿಸಿ 20 ವರ್ಷಗಳ ಕಾಲ ಮುನ್ನಡೆಸಿದರು. ತಂದೆಯವರಿಗೆ ಕೊಟ್ಟ ಮಾತಿನಂತೆ ಅವರ ನಿಧನಾನಂತರ ಕಳೆದ 30 ವರ್ಷಗಳಿಂದ ಎಷ್ಟೇ ಕಷ್ಟವಾದರೂ ಪತ್ರಿಕೆ ಹೊರತರುತ್ತಿದ್ದೇನೆ ಎಂದರು.

ಸಂಸ್ಕೃತ ಕಲಿತರೆ ದೇಶದೆಲ್ಲೆಡೆ ಮಾನ್ಯತೆ ಸಿಗುತ್ತೆ. ಸಂಸ್ಕೃತವನ್ನು ಭಾರತೀಯರು ಮರೆಯುತ್ತಿದ್ದರೂ ವಿದೇಶಿಯರು ಸಂಸ್ಕೃತವನ್ನು ಪೂಜ್ಯಭಾವನೆಯಿಂದ ಕಲಿಯುತ್ತಿದ್ದಾರೆ. ನಮ್ಮಲ್ಲಿ ಅಂಕಗಳಿಕೆಗೆ ಮಾತ್ರ ಸಂಸ್ಕೃತವನ್ನು ಒಂದು ವಿಷಯವಾಗಿ ಕಲಿಯಲಾಗುತ್ತಿದೆ. ಅಂಕಗಳಿಕೆಗೆ ಮಾತ್ರ ಸಂಸ್ಕೃತವನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದು ಬೇಸರದ ಸಂಗತಿ. ಸಂಸ್ಕೃತ ಕಲಿತ ಮೇಲೆ ಅದನ್ನು ಬೆಳೆಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಸಂಸ್ಕೃತದಲ್ಲಿ ಪ್ರಮಾಣ: 17ನೇ ಲೋಕಸಭೆಯಲ್ಲಿ ಸುಮಾರು 50 ಜನ ಸಂಸದರು ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿರುವುದು ಸಂತಸದ ಸಂಗತಿ. ಆದೆ, ಸಂಸ್ಕೃತವನ್ನು ಕೇವಲ ತಮ್ಮ ಪ್ರಮಾಣ ವಚನಕ್ಕೆ ಸೀಮಿತಗೊಳಿಸದೆ, ಭಾಷೆಯ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು ಎಂದರು.

ಭಾರತೀಯ ವಿಜ್ಞಾನ ಕಾಂಗ್ರೆಸ್‌ ಅಧ್ಯಕ್ಷ ಪ್ರೊ.ಕೆ.ಎಸ್‌.ರಂಗಪ್ಪ ಮಾತನಾಡಿ, ಇಂದು ಅಂತರ್ಜಾಲದಲ್ಲಿ ಎಷ್ಟೇ ವಿಚಾರಗಳು ವಿನಿಮಯವಾದರೂ ಬೆಳಗ್ಗೆ ಎದ್ದು ಪತ್ರಿಕೆ ಓದಿದಾಗಲೇ ಸಮಾಧಾನ. ಮಾಧ್ಯಮಗಳು ದೇಶದ ಪ್ರಗತಿಗೆ ಮೂಲ ಕಾರಣ. ಪತ್ರಕರ್ತರು ನ್ಯಾಯಾಧೀಶರಿದ್ದಂತೆ ಎಲ್ಲವನ್ನೂ ವಿಮರ್ಶೆ ಮಾಡಿ ಉತ್ತಮ ತೀರ್ಪು ಕೊಡಬೇಕು ಎಂದರು.

Advertisement

ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿಯನ್ನು ವರ್ಷಕ್ಕೆ ಒಬ್ಬರ ಬದಲಿಗೆ, ಐದು ಜನರಿಗೆ ಕೊಡುವಂತಾದರೆ ಪತ್ರಿಕೋದ್ಯಮ ಬೆಳೆದು, ಶುದ್ಧಿಯಾಗುತ್ತೆ ಎಂದು ಅಭಿಪ್ರಾಯಪಟ್ಟರು. ಜೆಎಸ್‌ಎಸ್‌ ಮಹಾ ವಿದ್ಯಾಪೀಠದ ಕಾರ್ಯದರ್ಶಿ ಪ್ರೊ.ಎಸ್‌.ಪಿ.ಮಂಜುನಾಥ್‌ ಪ್ರಶಸ್ತಿ ಪ್ರದಾನ ಮಾಡಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್‌ಬಾಬು ಉಪಸ್ಥಿತರಿದ್ದರು.

ಸಂಸ್ಕೃತ ಪತ್ರಿಕೆಗೆ ನೆರವು ನೀಡದ ವಿವಿ, ಅಕಾಡೆಮಿ: ಅಮೆರಿಕದ ವಿವಿಯೊಂದು ಸುಧರ್ಮಾ ಪತ್ರಿಕೆಯನ್ನು ತರಿಸಿಕೊಳ್ಳುತ್ತಿತ್ತು. ಇಡೀ ತಿಂಗಳ ಪತ್ರಿಕೆಯನ್ನು ಒಂದು ಬಾರಿಗೆ ಕಳುಹಿಸಿ, ತಲುಪುವುದು ತಡವಾಗುತ್ತಿದ್ದರಿಂದ ಅಂತರ್ಜಾಲ ಆವೃತ್ತಿಯನ್ನು ಆರಂಭಿಸಲಾಯಿತು.

ಇನ್ನು ಶ್ರೀಲಂಕಾದ ವಿಶ್ವವಿದ್ಯಾನಿಲಯವೊಂದು ಸುಧರ್ಮಾ ಪತ್ರಿಕೆಯನ್ನು ತರಿಸಿಕೊಳ್ಳುತ್ತಿದ್ದು, ತಮ್ಮ ವಿದ್ಯಾರ್ಥಿಗಳಿಂದ ಸಂಸ್ಕೃತ ಪತ್ರಿಕೆಯನ್ನು ಓದಿಸುತ್ತಿದ್ದಾರೆ. ಆದರೆ, ಭಾರತದಲ್ಲಿ ಸಂಸ್ಕೃತ ವಿಶ್ವವಿದ್ಯಾನಿಲಯಗಳು, ಸಂಸ್ಕೃತ ಅಭಿವೃದ್ಧಿ ಅಕಾಡೆಮಿಗಳಿದ್ದರೂ ಸಂಸ್ಕೃತ ದಿನಪತ್ರಿಕೆಯೊಂದರ ಬೆಳವಣಿಗೆಗೆ ಪ್ರೋತ್ಸಾಹ ಸಿಗುತ್ತಿಲ್ಲ.

ಈ ಬಗ್ಗೆ ಪ್ರಧಾನಮಂತ್ರಿ, ಕೇಂದ್ರ ಗೃಹ ಸಚಿವರು, ಎಲ್ಲ ವಿಶ್ವವಿದ್ಯಾನಿಲಯಗಳ ಕುಲ ಸಚಿವರಿಗೂ ಪತ್ರ ಬರೆದಿದ್ದೆ, ಯಾರಿಂದಲೂ ಪ್ರೋತ್ಸಾಹ ಸಿಗಲಿಲ್ಲ. ಸಂಸ್ಕೃತ ದಿನಪತ್ರಿಕೆಯೊಂದು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ ಎಂಬುದನ್ನು ಬಿಟ್ಟರೆ, ಪತ್ರಿಕೆಯ ಬೆಳವಣಿಗೆಗೆ ಬೇರ್ಯಾವ ಪ್ರೋತ್ಸಾಹವೂ ಸಿಗುತ್ತಿಲ್ಲ ಎಂದು ಸುಧರ್ಮಾ ಸಂಸ್ಕೃತ ದಿನಪತ್ರಿಕೆ ಸಂಪಾದಕ ಸಂಪತ್‌ಕುಮಾರ್‌ ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next