ಎಷ್ಟೇ ಬದ್ಧಿವಂತರಾಗಿದ್ದರೂ ಕೂಡ ಅವರು ವಿಚಾರಶಾಲಿಯಾಗಿಲ್ಲದಿದ್ದರೆ ಎಲ್ಲಾ ಸಂದರ್ಭಗಳನ್ನು ಕೂಡ ಉತ್ತಮ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಿಲ್ಲ. ಅದರಲ್ಲೂ ನಂಬಿಕೆ, ಪ್ರೀತಿ, ವಿಶ್ವಾಸ, ಭಕ್ತಿ ವಿಷಯಗಳಲ್ಲಿ ವ್ಯಕ್ತಿಯ ವಿಚಾರವಂತಿಕೆ ಅತೀ ಮುಖ್ಯವಾಗುತ್ತದೆ. ಸ್ವಾಮಿ ವಿವೇಕಾನಂದರ ಪರಿಚಯ ನಮಗೆಲ್ಲರಿಗೂ ಇದ್ದೇ ಇದೆ. ನರೇಂದ್ರ ಬಾಲ್ಯದ ಹೆಸರು. ಗುಣವಂತರು, ಅಪಾರವಾದ ಜ್ಞಾನ ಸಂಪತ್ತನ್ನು ಹೊಂದಿದ್ದವರಾಗಿದ್ದರು. ಇವರ ಗುರುಗಳು ಶ್ರೀರಾಮಕೃಷ್ಣ ಪರಮಹಂಸರು. ಗುರು ಶಿಷ್ಯರ ಸಂಬಂಧ ಬಹಳ ಗಟ್ಟಿಯಾಗಿತ್ತು. ಒಂದು ಬಾರಿ ರಾಮಕೃಷ್ಣರು ನರೇಂದ್ರನನ್ನು ಪರೀಕ್ಷೆಗೆ ಗುರಿ ಮಾಡಿದರು. ಅವರಿಗೆ ವಿವೇಕಾನಂದರೆಂದರೆ ಪ್ರಾಣ. ಸ್ವಲ್ಪ ದಿನಗಳ ಕಾಲ ಅವರನ್ನು ನೋಡದಿದ್ದರೆ ಹುಚ್ಚು ಹಿಡಿದಂತೆ ಆಗುತ್ತಿತ್ತು. ಆದರೂ ಕೆಲವು ಸಮಯ ನರೇಂದ್ರ ಅವರ ಬಳಿ ಬಂದರೂ ಮುಖ ನೋಡುತ್ತಿರಲಿಲ್ಲ. ಮಾತನಾಡಿಸುತ್ತಿರಲಿಲ್ಲ. ಆದರೆ ನರೇಂದ್ರ ಅವರ ಬಳಿ ಬಂದು ನಮಸ್ಕರಿಸಿ ಹೋಗುತ್ತಿದ್ದನು. ಅವರ ಸಮೀಪದಲ್ಲೇ ಬಂದು ಕುಳಿತುಕೊಳ್ಳುತ್ತಿದ್ದನು.
ಗುರುಗಳು ಆಲೋಚನೆಯಲ್ಲಿ ಮಗ್ನರಾಗಿರಬೇಕೆಂದು ಹೊರಗೆ ಹೋಗಿ ಯಾರಾದರೊಬ್ಬರೊಡನೆ ಮಾತನಾಡುತ್ತಿದ್ದುದು ಕೇಳಿಬರುತ್ತಿತ್ತು. ಪುನಃ ಗುರುಗಳ ಬಳಿ ಬಂದು ಕುಳಿತುಕೊಳ್ಳುತ್ತಿದ್ದನು. ಆಗಲೂ ನರೇಂದ್ರನ ಬಳಿ ಅವರು ಮಾತನಾಡುತ್ತಿರಲಿಲ್ಲ. ಒಂದು ವಾರದ ಬಳಿಕ ನರೇಂದ್ರ ಬಂದ. ಆಗಲೂ ರಾಮಕೃಷ್ಣರು ಆಲಕ್ಷ್ಯದಿಂದಲೇ ಅವನನ್ನು ನೋಡಿದರು. ಇಷ್ಟೆಲ್ಲಾ ನಡೆದರೂ ನರೇಂದ್ರ ಮಾತ್ರ ಬರುವುದನ್ನು ಬಿಡಲಿಲ್ಲ. ಒಂದು ತಿಂಗಳಾದ ಮೇಲೆ ರಾಮಕೃಷ್ಣರು ನರೇಂದ್ರನಿಗೆ “ನಾನು ನಿನ್ನೊಡನೆ ಒಂದು ಮಾತನ್ನೂ ಆಡದೇ ಇದ್ದರು ನೀನು ಏತಕ್ಕೆ ಬರುತ್ತೀಯ?’ ಎಂದು ಕೇಳಿದರು. ಅದಕ್ಕೆ ನರೇಂದ್ರ “ನಾನು ನಿಮ್ಮೊಡನೆ ಬರೀ ಮಾತನಾಡಲು ಮಾತ್ರ ಬರುತ್ತೇನೆಯೇ? ನಿಮ್ಮನ್ನು ಪ್ರೀತಿಸುತ್ತೇನೆ, ನೋಡಬೇಕೆಂಬ ಆಸೆ ಅದಕ್ಕೆ ಬರುತ್ತೇನೆ’ ಎಂದ.
ರಾಮಕೃಷ್ಣರ ಸಂತೋಷ ಮುಗಿಲು ಮುಟ್ಟಿತು. “ನಾನು ನಿನ್ನನ್ನು ಪರೀಕ್ಷೆಗೊಳಪಡಿಸಿ ಈ ರೀತಿ ನಡೆದುಕೊಂಡೆ. ಆಲಕ್ಷ್ಯದಿಂದ ಇದ್ದರೆ, ಪ್ರೀತಿಯನ್ನು ತೋರಿಸದಿದ್ದರೆ ನೀನು ಬರುತ್ತೀಯೋ ಇಲ್ಲವೋ ಎಂಬುದನ್ನು ನೋಡಬೇಕೆಂದಿದ್ದೆ. ಇಷ್ಟೊಂದು ಅನಾದರ ಅಸಡ್ಡೆಯನ್ನು ನಿನ್ನಂತಹ ತತ್ತ್ವಶಾಲಿಗಳು ಮಾತ್ರ ಸಹಿಸುವರು’ ಎಂದು ಹೆಮ್ಮೆ ಪಟ್ಟರು ಶ್ರೀರಾಮಕೃಷ್ಣರು.
ಆಲೋಚನೆಯುಳ್ಳವರು ಎಂತಹ ಸ್ಥಿತಿಯಲ್ಲೂ ತಮ್ಮ ವಿವೇಚನಾ ಶಕ್ತಿಯನ್ನು ಬಿಡುವುದಿಲ್ಲ ಹಾಗೂ ನಂಬಿಕೆ, ಪ್ರೀತಿ ಬಲಾಡ್ಯವಾಗಿದ್ದರೆ ಎಂಥಹ ಸ್ಥಿತಿಯಲ್ಲಿಯೂ ಕೂಡ ಅದು ತನ್ನ ಸ್ವರೂಪವನ್ನು ಕಳೆದುಕೊಳ್ಳುವುದಿಲ್ಲ. ಅದೇನಾದರೂ ನಾಟಕೀಯವಾಗಿದ್ದರೆ ಮಾತ್ರ ಸಂಬಂಧಗಳು ಹಾಳಾಗುತ್ತವೆ ಎಂಬುದಕ್ಕೆ ಇದು ಒಂದು ನಿದರ್ಶನ.
ಸಂಗೀತ ಶ್ರೀ ಕೆ. ತುಮಕೂರು, ವಿಶ್ವವಿದ್ಯಾಲಯ