ಮುಂಬೈ: ವಿದೇಶಿ ಸಾಂಸ್ಥಿಕ ಹೂಡಿಕೆಯ ಹರಿವು ಈ ವಾರವಿಡೀ ಷೇರು ಪೇಟೆಯನ್ನು ಸಂಭ್ರಮದಲ್ಲಿರಿಸಿದೆ. ಶುಕ್ರವಾರವೂ ಹೂಡಿಕೆದಾರರು ಭಾರೀ ಆಸಕ್ತಿಯಿಂದ ಷೇರುಗಳ ಖರೀದಿಯಲ್ಲಿ ತೊಡಗಿದ ಪರಿಣಾಮ, ಬಿಎಸ್‌ಇ ಮತ್ತು ನಿಫ್ಟಿ ಹೊಸ ಎತ್ತರಕ್ಕೆ ಏರಿ, ದಾಖಲೆ ನಿರ್ಮಿಸಿವೆ. ಷೇರುಪೇಟೆಯ ನಾಗಾಲೋಟ ಹೀಗಿಯೇ ಮುಂದು ವರಿದರೆ ಕೆಲವೇ ದಿನಗಳಲ್ಲಿ ಸೆನ್ಸೆಕ್ಸ್ 50 ಸಾವಿರದ ಗಡಿ ದಾಟುವ ನಿರೀಕ್ಷೆಯಿದೆ.
ಆರಂಭಿಕ ವಹಿವಾಟಿನಲ್ಲಿ ಷೇರುಗಳ ಖರೀದಿ ಭಾರೀ ಪ್ರಮಾಣದಲ್ಲಿ ಹೆಚ್ಚಳ ವಾಗಿ, ನಂತರದಲ್ಲಿ ಸ್ವಲ್ಪಮಟ್ಟಿಗೆ ಉತ್ಸಾಹ ಕುಂಠಿತವಾಯಿತು. ಪರಿಣಾಮ, ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಶುಕ್ರವಾರ 70.35 ಅಂಕಗಳ ಏರಿಕೆ ಕಂಡು, ದಾಖಲೆಯ 46,960. 69ರಲ್ಲಿ ವಹಿವಾಟು ಅಂತ್ಯಗೊಳಿಸಿತು. ಒಂದು ಹಂತದಲ್ಲಿ ಇದು 47,026.02ಕ್ಕೆ ತಲುಪಿತ್ತು. ಇದೇ ವೇಳೆ, ನಿಫ್ಟಿ 19.85 ಅಂಕ ಏರಿಕೆಯಾಗಿ, 13,760.55ರಲ್ಲಿ ಕೊನೆಗೊಂಡಿತು. ಇದು ನಿಫ್ಟಿಯ ದಿನಾಂತ್ಯದ ದಾಖಲೆಯಾಗಿದೆ.
ಐಟಿ ಷೇರುಗಳು ಏರಿಕೆ: ಆ್ಯಕ್ಸೆಂಚರ್‌ನ ನಿರೀಕ್ಷೆಗೂ ಮೀರಿದ ಫಲಿತಾಂಶವು ಐಟಿ ಷೇರುಗಳ ಏರಿಕೆಗೆ ಕಾರಣವಾಯಿತು. ಇನ್ಫೋಸಿಸ್ ಷೇರುಗಳು ಶೇ.2.64ರಷ್ಟು ಏರಿಕೆ ದಾಖಲಿಸಿದರೆ, ಬಜಾಜ್ ಆಟೋ, ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಎಚ್‌ಸಿಎಲ್ ಟೆಕ್, ಟೈಟಾನ್, ಏಷ್ಯನ್ ಪೈಂಟ್ಸ್ ಮತ್ತು ಟಿಸಿಎಸ್ ಕೂಡ ಭಾರೀ ಲಾಭ ಗಳಿಸಿದವು. ಇನ್ನೊಂದೆಡೆ, ಇಂಡಸ್‌ಇಂಡ್ ಬ್ಯಾಂಕ್, ಒಎನ್‌ಜಿಸಿ, ಎಚ್‌ಡಿಎಫ್ಸಿ ಬ್ಯಾಂಕ್, ಮಾರುತಿ, ಬಜಾಜ್ ಫಿನ್‌ಸರ್ವ್ ಮತ್ತು ಭಾರ್ತಿ ಏರ್‌ಟೆಲ್ ಷೇರುಗಳು ನಷ್ಟ ಅನುಭವಿಸಿದವು.
ಈ ವಾರದಲ್ಲಿ ಸೆನ್ಸೆಕ್ಸ್ 861.68 ಅಂಕ ಏರಿಕೆ ಕಂಡರೆ, ನಿಫ್ಟಿ 246.70 ಅಂಕಗಳ ಏರಿಕೆ ದಾಖಲಿಸಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು 2,355.25 ಕೋಟಿ ರೂ. ಮೌಲ್ಯದ ಷೇರು ಖರೀದಿಸಿದ್ದಾರೆ.
ಚಿನ್ನದ ದರ ಏರಿಕೆ, ಬೆಳ್ಳಿ ಇಳಿಕೆ
ದೆಹಲಿ ಚಿನಿವಾರ ಪೇಟೆಯಲ್ಲಿ ಶುಕ್ರವಾರ ಚಿನ್ನದ ದರ 21 ರೂ.ಗಳ ಅಲ್ಪ ಏರಿಕೆ ಕಂಡಿದ್ದು, 10 ಗ್ರಾಂಗೆ 49,644 ರೂ.ಗೆ ತಲುಪಿದೆ. ಆದರೆ, ಬೆಳ್ಳಿ ದರದಲ್ಲಿ 259 ರೂ. ಇಳಿಕೆಯಾಗಿ, 1 ಕೆಜಿಗೆ 66,784 ರೂ. ಆಗಿದೆ. ಇದೇ ವೇಳೆ, ಡಾಲರ್ ಎದುರು ರೂಪಾಯಿ ಮೌಲ್ಯ 3 ಪೈಸೆ ಏರಿಕೆಯಾಗಿ, 73.56 ತಲುಪಿದೆ.