Advertisement

ಇಂದು 2ನೇ ಟಿ20:  ಸೋಲೇ ಭಾರತದ ಗೆಲುವಿಗೆ ಸೋಪಾನವಾಗಲಿ

08:54 AM Mar 14, 2021 | Team Udayavani |

ಅಹ್ಮದಾಬಾದ್‌: ಸೋಲೇ ಗೆಲುವಿನ ಸೋಪಾನ ಎಂಬ ಮಾತಿದೆ. ಟೀಮ್‌ ಇಂಡಿಯಾ ಪಾಲಿಗೆ ಇದು ಎಷ್ಟೋ ಸಲ ನಿಜವಾಗಿ ಪರಿಣಮಿಸಿದೆ. ತಾಜಾ ಉದಾಹರಣೆಯೆಂದರೆ ಇಂಗ್ಲೆಂಡ್‌ ಎದುರಿನ ಕಳೆದ ಟೆಸ್ಟ್‌ ಸರಣಿ. ಮೊದಲ ಪಂದ್ಯದಲ್ಲಿ ಮುಗ್ಗರಿಸಿಯೂ ಗೆಲುವಿನ ಹ್ಯಾಟ್ರಿಕ್‌ ಮೂಲಕ 3-1ರಿಂದ ಜಯಭೇರಿ ಮೊಳಗಿಸಿದ್ದು ಈಗ ಇತಿಹಾಸ.

Advertisement

ಟಿ20 ಸರಣಿಯಲ್ಲೂ ಇಂಥದೇ ಪರಿಸ್ಥಿತಿ ಎದುರಾಗಿದೆ. ಶುಕ್ರವಾರದ ಮೊದಲ ಪಂದ್ಯದಲ್ಲಿ ಎಲ್ಲ ವಿಭಾಗಗಳಲ್ಲೂ ಹಿನ್ನಡೆ ಅನುಭವಿಸಿದ ವಿರಾಟ್‌ ಕೊಹ್ಲಿ ಪಡೆ ಇಂಗ್ಲೆಂಡಿಗೆ ದೊಡ್ಡ ಅಂತರದಿಂದ ಶರಣಾಗಿತ್ತು. ರವಿವಾರ ಇದೇ ಟ್ರಾಕ್‌ನಲ್ಲಿ ದ್ವಿತೀಯ ಪಂದ್ಯ ನಡೆಯಲಿದೆ. ಭಾರತ ಗೆಲುವಿನ ಖಾತೆ ತೆರೆಯಲೇಬೇಕಾದ ಅಗತ್ಯವಿದೆ. ಇಲ್ಲವಾದರೆ ಕೊನೆಯ 3 ಪಂದ್ಯಗಳಲ್ಲಿ ಟೀಮ್‌ ಇಂಡಿಯಾದ ಮೇಲೆ ಒತ್ತಡ ಬೀಳುವುದು ಖಂಡಿತ.

ಮೊದಲೇ ಪ್ರಯೋಗ ಸಲ್ಲದು

ಭಾರತ ಸರಣಿಯ ಮೊದಲ ಪಂದ್ಯದಲ್ಲೇ ಕೆಲವು ಅನಗತ್ಯ ಪ್ರಯೋಗಗಳನ್ನು ಮಾಡಿ ಕೈ ಸುಟ್ಟುಕೊಂಡಿದೆ. ತಂಡದ ಪ್ರಧಾನ ಓಪನರ್‌ ರೋಹಿತ್‌ ಶರ್ಮ ಅವರಿಗೆ ವಿಶ್ರಾಂತಿ ನೀಡುವ ಅಗತ್ಯವಿತ್ತೇ ಎಂಬುದು ಎಲ್ಲರ ಪ್ರಶ್ನೆ. ಹಾಗೆಯೇ ತ್ರಿವಳಿ ಸ್ಪಿನ್‌ ಕಾಂಬಿನೇಶನ್‌ ಕೂಡ ಕೈಕೊಟ್ಟಿದೆ. ಟೆಸ್ಟ್‌ ನಲ್ಲಿ ಇದು ಭಾರತದ ಟ್ರಂಪ್‌ಕಾರ್ಡ್‌ ಆದರೂ ಚುಟುಕು ಕ್ರಿಕೆಟ್‌ನಲ್ಲಿ ಮೂವರು ಸ್ಪಿನ್ನರ್‌ಗಳ ಆಟ ನಡೆಯದು ಎಂಬುದು ಮನವರಿಕೆಯಾಗಿದೆ.

ಇನ್ನೊಂದೆಡೆ ಇಂಗ್ಲೆಂಡ್‌ ಏಕಮಾತ್ರ ಸ್ಪೆಷಲಿಸ್ಟ್‌ ಸ್ಪಿನ್ನರ್‌ನನ್ನು ಬಳಸಿಕೊಂಡು ಯಶಸ್ಸು ಸಾಧಿಸಿದ ನಿದರ್ಶನ ಕಣ್ಮುಂದಿದೆ. ಆಂಗ್ಲರ ಪಾಳೆಯದಲ್ಲಿ ವೇಗಿಗಳೇ ಭರಪೂರ ಯಶಸ್ಸು ಸಾಧಿಸಿ ಭಾರತವನ್ನು ಬರೀ 124ಕ್ಕೆ ಕಟ್ಟಿ ಹಾಕಿದ್ದನ್ನು ಮರೆಯುವಂತಿಲ್ಲ. ಇದನ್ನೆಲ್ಲ ಗಮನಿಸಿ ಟೀಮ್‌ ಇಂಡಿಯಾ ದ್ವಿತೀಯ ಪಂದ್ಯದ ಗೆಲುವಿನ ಯೋಜನೆಗೂ ಮುನ್ನ ಸಶಕ್ತ ತಂಡವೊಂದನ್ನು ಕಟ್ಟಬೇಕಿದೆ. ಮುಖ್ಯವಾಗಿ ಆರಂಭಕಾರ ರೋಹಿತ್‌ ಶರ್ಮ ಕಣಕ್ಕಿಳಿಯಬೇಕಾದ ಅಗತ್ಯ ಹೆಚ್ಚಿದೆ. ಆಗ ಎದುರಾಳಿ ಮೇಲೂ ಮಾನಸಿಕ ಒತ್ತಡ ಬೀಳಲಿದೆ. ರೋಹಿತ್‌ಗಾಗಿ ಶಿಖರ್‌ ಧವನ್‌ ಹೊರಗುಳಿಯಬೇಕಾದುದು ಅನಿವಾರ್ಯ.

Advertisement

ಒಂದು ಸ್ಪಿನ್‌ ಕಡಿತ?

ರವಿವಾರದ ಪಂದ್ಯಕ್ಕಾಗಿ ಭಾರತದ ಬೌಲಿಂಗ್‌ ವಿಭಾಗದಲ್ಲಿ, ಅದರಲ್ಲೂ ಸ್ಪಿನ್‌ ಡಿಪಾರ್ಟ್‌ಮೆಂಟ್‌ ನಲ್ಲಿ ಒಂದು ಬದಲಾವಣೆ ಸಂಭವಿಸುವುದು ಖಚಿತ. ಒಬ್ಬ ಸ್ಪಿನ್ನರ್‌ನನ್ನು ಕೈಬಿಟ್ಟು ನವದೀಪ್‌ ಸೈನಿ ಅಥವಾ ದೀಪಕ್‌ ಚಹರ್‌ ಅವರನ್ನು ಆಡಿಸಬಹುದು. ಹೊರಹೋಗುವ ಸ್ಪಿನ್ನರ್‌ ಯಾರಿರಬಹುದು ಎಂಬುದು ಸದ್ಯದ ಪ್ರಶ್ನೆ. ದುಬಾರಿ ಚಹಲ್‌ ಆದರೂ ಅಚ್ಚರಿ ಇಲ್ಲ!

ಇಂಗ್ಲೆಂಡ್‌ ಟಿ20 ಸ್ಪೆಷಲಿಸ್ಟ್‌

ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಶೋಚನೀಯ ಪ್ರದರ್ಶನ ನೀಡಿರಬಹುದು, ಆದರೆ ಆಂಗ್ಲರ ಟಿ20 ತಂಡ ಮಾತ್ರ ಅಸಾಮಾನ್ಯ ಮಟ್ಟದ್ದೇ ಆಗಿದೆ. ಇಲಿ ಒಬ್ಬರಿಗಿಂತ ಒಬ್ಬರು ದೈತ್ಯರು. 7ನೇ ಕ್ರಮಾಂಕದತನಕ ಬ್ಯಾಟಿಂಗ್‌ ವಿಸ್ತಾರ ಹೊಂದಿದೆ. ಸಮರ್ಥ ಆಲ್‌ರೌಂಡರ್ ಇದ್ದಾರೆ. ಬೌಲಿಂಗ್‌ ವಿಭಾಗ ಹೆಚ್ಚು ಘಾತಕವಾಗಿದೆ. ಹೀಗಾಗಿ ಅದು ವಿಶ್ವದ ನಂಬರ್‌ ವನ್‌ ತಂಡವಾಗಿದೆ. ಇದನ್ನು ಭಾರತ ಮರೆತರೆ ದೊಡ್ಡ ಬೆಲೆಯನ್ನೇ ತೆರಬೇಕಾಗುತ್ತದೆ.

ಬ್ಯಾಟಿಂಗ್‌ ಜೋಶ್‌ ಅಗತ್ಯ

ಮೊದಲ ಪಂದ್ಯದಲ್ಲಿ ರಾಹುಲ್‌, ಕೊಹ್ಲಿ ಸಿಡಿಯಲು ಸಂಪೂರ್ಣ ವಿಫಲರಾಗಿದ್ದರು. ಶ್ರೇಯಸ್‌ ಅಯ್ಯರ್‌ ಅರ್ಧ ಶತಕ ಬಾರಿಸಿ ಮುನ್ನುಗ್ಗಿದರೂ ಉಳಿದವರಿಂದ ಬೆಂಬಲ ಸಿಗಲಿಲ್ಲ. ಪಂತ್‌, ಪಾಂಡ್ಯ ಎಂದಿನ ಜೋಶ್‌ ತೋರಬೇಕಿದೆ. ಹೆಚ್ಚು ಬೇಡ, ಒಂದು ಜೋಡಿ ಕ್ರೀಸ್‌ ಆಕ್ರಮಿಸಿಕೊಂಡು ರನ್‌ ಸುರಿಮಳೆಗೈದರೆ ಪಂದ್ಯದ ದಿಕ್ಕೇ ಬದಲಾಗಲಿದೆ.

ಸಂಭಾವ್ಯ ತಂಡಗಳು

ಭಾರತ: ರೋಹಿತ್‌ ಶರ್ಮ/ ಶಿಖರ್‌ ಧವನ್‌, ಕೆ.ಎಲ್. ರಾಹುಲ್‌, ವಿರಾಟ್‌ ಕೊಹ್ಲಿ (ನಾಯಕ), ಅಯ್ಯರ್‌, ರಿಷಭ್‌ ಪಂತ್‌, ಹಾರ್ದಿಕ್‌, ಅಕ್ಷರ್‌ ಪಟೇಲ್‌, ವಾಷಿಂಗ್ಟನ್‌ ಸುಂದರ್‌, ಭುವನೇಶ್ವರ್‌, ಶಾರ್ದೂಲ್‌, ಚಹಲ್‌/ ಸೈನಿ.

ಇಂಗ್ಲೆಂಡ್‌: ಜಾಸನ್ ರಾಯ್‌, ಜಾಸ್‌ ಬಟ್ಲರ್‌, ಜಾನಿ ಬೇರ್‌ಸ್ಟೊ, ಮಾಲನ್‌, ಇಯಾನ್‌ ಮಾರ್ಗನ್‌ (ನಾಯಕ), ಬೆನ್‌ ಸ್ಟೋಕ್ಸ್‌, ಮೊಯಿನ್‌ ಅಲಿ, ಜೋರ್ಡನ್‌, ಆದಿಲ್‌ ರಶೀದ್‌, ಸ್ಯಾಮ್‌ ಕರನ್‌, ಜೋಫ್ರಾ ಆರ್ಚರ್‌.

Advertisement

Udayavani is now on Telegram. Click here to join our channel and stay updated with the latest news.

Next