Advertisement

ಭಾರತದ ರಫೇಲ್‌ v/s ಚೀನದ J-11: ಯಾರದ್ದು ಸ್ಟ್ರಾಂಗ್ – ಇಲ್ಲಿದೆ ಡಿಟೇಲ್ಸ್

08:02 PM Jul 27, 2020 | Karthik A |

ಮಣಿಪಾಲ: ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ಸ್‌ನಿಂದ ಖರೀದಿಸಿರುವ 36 ವಿಮಾನಗಳ ಪೈಕಿ ಮೊದಲ ಬ್ಯಾಚ್‌ನ 5 ವಿಮಾನಗಳು ಬುಧವಾರ ಭಾರತಕ್ಕೆ ಬಂದಿಳಿಯಲಿವೆ.

Advertisement

ಇದರ ಪ್ರಯಾಣ ಸೋಮವಾರ ಫ್ರಾನ್ಸ್‌ನಿಂದ ಆರಂಭವಾಗಿದೆ. ಈ ಅತ್ಯಾಧುನಿಕ ರಫೇಲ್‌ ಫೈಟರ್‌ಗಳನ್ನು ಚೀನ ಗಡಿ ಲಡಾಖ್‌ನಲ್ಲಿ ನಿಯೋಜಿಸಲು ಭಾರತೀಯ ವಾಯುಪಡೆ ಚಿಂತಿಸುತ್ತಿದೆ.

ಉಭಯ ದೇಶಗಳ ಗಡಿ ಸಮಸ್ಯೆ ಪ್ರಕ್ಷ್ಯುಬ್ಧಗೊಂಡಿರುವ ಹಿನ್ನೆಲೆಯಲ್ಲಿ ಇದು ಜಗತ್ತಿನ ಗಮನ ಸೆಳೆದಿದೆ.

ಯುದ್ಧದ ಕಾರ್ಮೋಡ
ಲಡಾಖ್‌ನ ವಾಸ್ತವಿಕ ಗಡಿ ರೇಖೆ ಬಳಿಯ ಗಾಲ್ವಾನ್‌ ಕಣಿವೆ, ಹಾಟ್‌ ಸ್ಪ್ರಿಂಗ್ಸ್‌, ಗೋಗ್ರಾ, ಡೆಪ್ಸಾಂಗ್‌ ಪ್ಲೇನ್ಸ್‌ ಹಾಗೂ ಮುಖ್ಯವಾಗಿ ಪ್ಯಾಂಗಾಂಗ್ಸ್‌ ತ್ಸೋ ಸರೋವರದ ಬಳಿ ಚೀನ ಸೇನೆ ಹೆಚ್ಚಿನ ಸೇನೆಯನ್ನು, ಯುದ್ದೋಪಕರಣಗಳನ್ನು ನಿಯೋಜಿಸುವ ಮೂಲಕ ಉದ್ವಿಗ್ನ ಸ್ಥಿತಿ ಸೃಷ್ಟಿಸಿದೆ. ಪ್ಯಾಂಗಾಂಗ್‌ ತ್ಸೋ ಸರೋವರದ ಬಳಿ ಬಿಕ್ಕಟ್ಟು ಇನ್ನೂ ಶಮನಗೊಂಡಿಲ್ಲ.

ಹೀಗಾಗಿ ಸೇನೆ ಎಲ್ಲ ವಿಧದ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ. ಹಾಗಾಗಿ ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆ ಲಡಾಖ್‌ನ ಚೀನ ಗಡಿಯಲ್ಲಿರುವ ಮುಂಚೂಣಿ ನೆಲೆಗಳಲ್ಲಿ ಹೆಚ್ಚುವರಿ ಸೇನೆಯನ್ನು ಹಾಗೂ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ.

Advertisement

ಚೀನ ಸೇನೆ ಜೆ-11 ಮತ್ತು ಜೆ-8 ಯುದ್ಧ ವಿಮಾನಗಳನ್ನು ಸೇನಾ ನೆಲೆಗಳಲ್ಲಿ ನಿಯೋಜಿಸಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆ ಸುಖೋಯ್-30 ಎಂಕೆಐ, ಮಿರಾಜ್‌ 2000 ಮತ್ತು ಜಾಗ್ವಾರ್‌ ಯುದ್ಧ ವಿಮಾನಗಳನ್ನು ಹಾಗೂ ಇತ್ತೀಚೆಗೆ ವಾಯುಪಡೆಗೆ ಸೇರ್ಪಡೆಯಾಗಿರುವ ಅಪಾಚೆ ಮತ್ತು ಚಿನೋಕ್‌ ಹೆಲಿಕಾಪ್ಟರ್‌ಗಳನ್ನೂ ನಿಯೋಜಿಸಲಾಗಿದೆ. ಇನ್ನು ಅವುಗಳ ಸಾಲಿಗೆ ರಫೇಲ್‌ ಯುದ್ಧ ವಿಮಾನಗಳು ಸೇರಲಿದೆ.

ಚೀನದ ಈ ಜೆ 11 ಅಥವ ಜಿಯಾನ್‌ 11 ಚೀನದ ಅತ್ಯಾಧುನಿಕ ಯುದ್ಧವಿಮಾನವಾಗಿದೆ. ಶೇಯಾಂಗ್‌ ಏರ್‌ಕ್ರಾಫ್ಟ್ ಕಾರ್ಪೋರೇಶನ್‌ (ಎಸ್‌ಎಸಿ) ಇದನ್ನು ಸಿದ್ಧಪಡಿಸಿದೆ. ಚೀನದ ಪೀಪಲ್ಸ್‌ ಲಿಬರೇಶನ್‌ ಆರ್ಮಿ ಏರ್‌ಫೋರ್ಸ್‌ (ಪಿಎಲ್‌ಎಎಎಫ್) ಇದನ್ನು ಆಪರೇಟ್‌ ಮಾಡುತ್ತಿದೆ.

1998ರಲ್ಲಿ ಸುಖೋಯ್‌ ಬಳಿಕ ಚೀನ ಈ ಯುದ್ಧವಿಮಾನ ತಯಾರಿಕೆಗೆ ಮನಸ್ಸು ಮಾಡಿತು. ಪರಿಣಾಮವಾಗಿ ಅದೇ ವರ್ಷ ರಷ್ಯಾದ ಸುಖೋಯ್‌ ಮತ್ತು ಶೇಯಾಂಗ್‌ ಏರ್‌ಕ್ರಾಫ್ಟ್ ಕಾರ್ಪೋರೇಶನ್‌ ಒಟ್ಟು 200 ಯುದ್ಧ ವಿಮಾನ ತಯಾರಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದದ್ದು ರಷ್ಯಾದ ಸುಖೋಯ್‌. ಆದರೆ ಏವಿಯಾನಿಕ್ಸ್‌ ಸಲಕರಣೆಗಳು ಮತ್ತು ಯುದ್ದೋಪಕರಣಗಳು ಚೀನದ್ದು.

ರಫೇಲ್‌ ವರ್ಸಸ್‌ ಜೆ11
ರಫೇಲ್‌ ಬಹುಸಾಮರ್ಥ್ಯ ಹೊಂದಿದ ವಿಮಾನ ಜೆ.11ಗೆ ಹೋಲಿಸಿದರೆ ಇದು ಕಡಿಮೆ ಭಾರ, ಅತಿ ಚುರುಕು. ತತ್‌ಕ್ಷಣದ ದಾಳಿಗೆ ರಫೇಲ್‌ ಸಿದ್ಧ ಶೇ.75ರಷ್ಟು ಯುದ್ಧಕ್ಕೆ ಸನ್ನದ್ಧ ಸ್ಥಿತಿಯಲ್ಲೇ ಇದು ಇರುತ್ತದೆ. ಆದರೆ ಜೆ.11ನಲ್ಲಿ ಯುದ್ಧ ವ್ಯಾಪ್ತಿ ಹೆಚ್ಚು. ಬಹುದೂರಕ್ಕೆ ಹೋಗಿ ದಾಳಿ ಮಾಡಬಲ್ಲದು, ಹೆಚ್ಚು ಇಂಧನ ಹೊಂದಿರುತ್ತದೆ. ಆದರೆ ರಫೇಲ್‌ನಲ್ಲಿ ಇದು ಕಡಿಮೆಯಾದರೂ ರಫೇಲ್‌ನಿಂದ ರಫೇಲ್‌ಗೆ ಇಂಧನ ವರ್ಗಾಯಿಸಲು ಸಾಧ್ಯವಿದೆ. ಇದು ಬೇರೆ ಯುದ್ಧವಿಮಾನಗಳಲ್ಲಿ ಸಾಧ್ಯವಿಲ್ಲ.

ನೆಲದಲ್ಲಿ ದಾಳಿ ನಡೆಸುವ ಪಡೆಗಳ ಬೆಂಗಾವಲಿಗೂ ಇದನ್ನು ಬಳಸಲು ಸಾಧ್ಯವಿದೆ. ಜೆ.11 ಗಿಂತ ತುಸು ಸಣ್ಣ ವಿಮಾನವಾದರೂ ಹೆಚ್ಚು ವೈವಿಧ್ಯಮಯ ಯುದ್ದೋಪಕರಣಗಳನ್ನು ಅಳವಡಿಸಲು ಸಾಧ್ಯವಿದೆ. ಪೈಲಟ್‌ಗೆ ವಿಮಾನ ನಿಯಂತ್ರಣ, ಶತ್ರು ಗುರಿ ಗುರುತಿಸುವಿಕೆ, ಶತ್ರು ವಿಮಾನ ಆಗಮನ ಎಚ್ಚರಿಕೆ ನೀಡಲು ಡಿಜಿಟಲ್‌ ಕಾಕ್‌ಪಿಟ್‌ ಇದೆ. ಸುಧಾರಿತ ಹೋಲೋಗ್ರಾಫಿಕ್‌ (ವಿಮಾನ ಮೇಲ್ಭಾಗದ ಗಾಜಿನ ಹೊದಿಕೆಯಲ್ಲೂ ಮಾಹಿತಿಗಳನ್ನು ನೀಡುತ್ತದೆ). ಒಂದು ಬಾರಿಗೆ ಎಂಟು ಗುರಿಗಳನ್ನು ನಿಗದಿಪಡಿಸಿಕೊಳ್ಳುತ್ತದೆ.

ಲೇಸರ್‌ ವಾರ್ನಿಂಗ್‌, ಕ್ಷಿಪಣಿ ವಾರ್ನಿಂಗ್‌, ಶತ್ರು ವಿಮಾನದ ದಾಳಿ ಸೂಚನೆಗಳನ್ನು ರಫೇಲ್‌ ನೀಡುತ್ತದೆ. ಜೆ.11ಗೆ ಹೋಲಿಸಿದರೆ ಇದು ಅತ್ಯಂತ ಸುಧಾರಿತ ವ್ಯವಸ್ಥೆ. ಸದ್ಯ ಜಗತ್ತಿನ ಅತಿ ಸುಧಾರಿತ ಯುದ್ಧ ವಿಮಾನಗಳಲ್ಲಿ ಮಾತ್ರವೇ ಈ ವ್ಯವಸ್ಥೆ ಇದೆ. ಆದರೆ ರಫೇಲ್‌ ಏವಿಯಾನಿಕ್ಸ್‌ಗೆ ಸರಿಸಾಟಿಯಿಲ್ಲ ಎಂದು ಬಣ್ಣಿಸಲಾಗುತ್ತದೆ.

250 ಕಿ.ಮೀ. ದೂರದ ಗುರಿ ಸಾಧ್ಯ
ರಫೇಲ್‌ ನಭಕ್ಕೆ ನೆಗೆದ ಬಳಿಕ ಸುಮಾರು 250 ಕಿ.ಮೀ. ದೂರದ ನೆಲದಲ್ಲಿರುವ ಗುರಿಯನ್ನು ಬಾಂಬ್‌ ದಾಳಿ ಮಾಡಿ ನಾಶಪಡಿಸಬಲ್ಲದು. 100 ಕಿ.ಮೀ. ದೂರದ ಕಣ್ಣಿಗೆ ಕಾಣದ ಗುರಿ ಛೇದಿಸಬಲ್ಲದು. ಜೆ.11ನಲ್ಲಿ ಈ ಯಾವುದೇ ವ್ಯವಸ್ಥೆಯಿಲ್ಲ. (ಉದಾ ಈ ವ್ಯವಸ್ಥೆಯಿಂದ ಕಾಶ್ಮೀರದ ಗಡಿಯೊಳಗೆ ಇದ್ದುಕೊಂಡೇ ಬಾಲಾಕೋಟ್‌ ಉಗ್ರ ನೆಲೆ ಮೇಲೆ ದಾಳಿ ಮಾಡಬಹುದು). ಭಾರತೀಯ ವಾಯುಪಡೆಗಾಗಿ ಗರಿಷ್ಠ ಸೌಕರ್ಯ, ಅತಿ ಎತ್ತರದ ಪ್ರದೇಶದಲ್ಲೂ ವ್ಯವಸ್ಥಿತವಾಗಿ ಯುದ್ಧ ನಡೆಸಲು ಅನುಕೂಲವಾಗುವಂತೆ ಹಲವು ವ್ಯವಸ್ಥೆಗಳನ್ನು, ಯುದ್ದೋಪಕರಣಗಳನ್ನು ಅಳವಡಿಸಲಾಗಿದೆ. ಜೆ.11 ರಾಡಾರ್‌ಗಳ ಕಣ್ಣಿಗೆ ಬೀಳಬಹುದು. ಆದರೆ ರಫೇಲ್‌ ಹಾಗಲ್ಲ. ಜೆ.11 ವೇಗ ರಫೇಲ್‌ಗಿಂತ ಹೆಚ್ಚು. ಹೆಚ್ಚು ಯುದ್ದೋಪಕರಣಗಳನ್ನು ಕೊಂಡೊಯ್ಯುತ್ತದೆ. ಆದರೆ ಇದರಲ್ಲಿ ಹೆಚ್ಚಿನ ವೈವಿಧ್ಯತೆ ಇಲ್ಲ. ರಫೇಲ್‌ ಸಣ್ಣ ಸಣ್ಣ ನ್ಯೂಕ್ಲಿಯರ್‌ ಬಾಂಬ್‌ಗಳನ್ನು ನಿರ್ದಿಷ್ಟ ಗುರಿಗೆ ಸುರಿಯಬಲ್ಲದು. ಜೆ.11ಗೆ ಇದು ಸಾಧ್ಯವಿಲ್ಲ. ಜೆ.11ರಲ್ಲಿರುವ ಕ್ಷಿಪಣಿ ಮಾದರಿಗಳು ಹಳೆಯವು. ರಫೇಲ್‌ ಸುಧಾರಿತ ಮಾದರಿ ಹೊಂದಿದೆ.

ಡಸಾಲ್ಟ್ ರಫೇಲ್‌
ಫ್ರಾನ್ಸ್‌ನ ಡಸ್ಸಾಲ್ಟ್ ಏವಿಯೇಷನ್‌ ತಯಾರಿಕೆಯ ವಿಮಾನ. ಫ್ರಾನ್ಸ್‌ ಇದನ್ನು ಪ್ರಮುಖವಾಗಿ ಬಳಕೆ ಮಾಡುತ್ತದೆ. ವಾಯು, ನೆಲ, ಜಲದ ಮೇಲಿನ ದಾಳಿಗೆ ಬಳಕೆ ಹೀಗೆ ಬಹೋಪಯೋಗಿಯಾದ ಯುದ್ಧವಿಮಾನ. ಒಟ್ಟು 12 ಮಾದರಿಗಳನ್ನು ಇದು ಹೊಂದಿದ್ದು, ಅತಿ ಸುಧಾರಿತ ವಿನ್ಯಾಸದ್ದಾಗಿದೆ. ಓರ್ವ ಪೈಲಟ್‌ ಮತ್ತು ಇಬ್ಬರು ಪೈಲಟ್‌ ಚಾಲನೆ ಮಾಡಬಹುದಾದ ಮಾದರಿಗಳನ್ನು ಹೊಂದಿದೆ. ಸ್ಟೀಲ್ತ್‌ (ರಾಡಾರ್‌ಗಳ ಕಣ್ಣಿಗೆ) ಸಿಗದ ರೀತಿಯ ತಂತ್ರಜ್ಞಾನ ಇದರಲ್ಲಿದ್ದು, ಆರ್‌ಬಿಇ2 ಸುಧಾರಿತ ರಾಡಾರ್‌ ವ್ಯವಸ್ಥೆ ಇದೆ. ಸಂಪೂರ್ಣ ಗ್ಲಾಸ್‌ ಕಾಕ್‌ಪಿಟ್‌ ಹೊಂದಿದ್ದು, ಕಂಪ್ಯೂಟರೀಕೃತ ವ್ಯವಸ್ಥೆಯಲ್ಲಿ ಮಾಹಿತಿಯನ್ನು ಕೊಡುತ್ತದೆ. ವಿಶ್ವದಲ್ಲೇ ಅತಿ ಸುಧಾರಿತ ಏವಿಯಾನಿಕ್ಸ್‌ಗಳನ್ನು ಹೊಂದಿದೆ. ಎರಡು ಸ್ನೆಕ್ಮಾ ಎಂ‌88-2 ಟರ್ಬೋಫ್ಯಾನ್‌ ಎಂಜಿನ್‌ ಹೊಂದಿದೆ.

ಅತ್ಯಾಧುನಿಕ
ಹಾಗೆ ನೋಡಿದರೆ ಜೆ 11ನ ಬಹುತೇಕ ಸಾಮರ್ಥ್ಯಗಳು ರಫೇಲ್‌ನಲ್ಲಿದೆ. ಡಸಾಲ್ಟ್ ಕಂಪನಿ 1986ರಲ್ಲಿ ಮೊದಲ ರಫೇಲ್‌ ವಿಮಾನವನ್ನು ನಿರ್ಮಿಸಿದೆ. ಇದು ಎರಡು ಎಂಜಿನ್‌ಗಳನ್ನು ಹೊಂದಿದೆ. 2 ಎಕ್ಸ್‌ ಎಸ್‌ಎನ್‌ಇಸಿಎಂಎ ಎಂ88 2 ಟರ್ಬೋಫ್ಯಾನ್ಸ್‌ ಹೊಂದಿದ್ದು, ಯುದ್ಧ ಸಾಮರ್ಥ್ಯ, 24500 ಕೆ.ಜಿ. ಭಾರ ಹೊರುವ ಸಾಮರ್ಥ್ಯ 1850 ಕಿ.ಮೀ. ಹೊಂದಿದೆ. ಗಂಟೆಗೆ 2,222.6 ವೇಗದೊಂದಿಗೆ ಹಾರಾಟ ನಡೆಸಲಿದೆ. 3704 ಕಿ.ಲೋ. ಮೀಟರ್‌ ಹಾರಾಟ ನಡೆಸುವ ಸಾಮರ್ಥ್ಯ ಇದಕ್ಕಿದೆ. 15.27 ಮೀಟರ್‌ ಉದ್ದ ಇದ್ದು, ವಿಂಗ್‌ ಲೆಂಥ್‌ 10.58 ಮೀಟರ್‌, ಎತ್ತರ 5.34 ಮೀ. ಇದೆ. ನಿಮಿಷಕ್ಕೆ 12 ಫೀಟ್‌ ಎತ್ತರಕ್ಕೆ ರಾಕೆಟ್‌ ಮಾದರಿಯಲ್ಲಿ ಚಿಮ್ಮುವ ಸಾಮರ್ಥ್ಯವನ್ನು ಹೊಂದಿದೆ. ಲ್ಯಾಂಡ್‌ ಆಗಲು ವಿಸ್ತಾರವಾದ ರನ್‌ವೇ ಬೇಕಾಗಿಲ್ಲ.

30 ಎಂ.ಎಂ. ಕೆನಾನ್‌ ಗನ್‌, 6 ವಾಯು ದಾಳಿ ನಡೆಸುವ ಕ್ಷಿಪಣಿಗಳು, ನೆಲದಾಳಿಗೆ 3 ಲೇಸರ್‌ ಗೈಡೆಡ್‌ ಬಾಂಬ್‌ಗಳು, 6 ಮೈಕ ಕ್ಷಿಪಣಿಗಳು, ನ್ಯೂಕ್ಲಿಯರ್‌ ದಾಳಿಗೆ 6 ಮೈಕ ಕ್ಷಿಪಣಿಗಳನ್ನು ಹೊಂದಿದೆ. ವೈರಿಗಳನ್ನು ಗುರುತಿಸಲು ರಫೇಲ್‌ ವಿಮಾನದಲ್ಲಿ ಸ್ಪೆಕ್ಟ್ರಾ ಸಿಸ್ಟಂ ಇದೆ. ಥೇಲ್ಸ್‌ ಗ್ರೂಪ್‌ ಈ ಸ್ಪೆಕ್ಟ್ರಾ ಸಿಸ್ಟಂ ಅನ್ನು ಅಭಿವೃದ್ಧಿಪಡಿಸಿದೆ. ರೇಡಿಯೋ ಫಿಕ್ವೆನ್ಸಿ, ರೇಡಾರ್‌ ವಾರ್ನಿಂಗ್‌ ರಿಸೀವರ್‌, ಲೇಸರ್‌ ವಾರ್ನಿಂಗ್‌, ಮಿಸೈಲ್‌ ವಾರ್ನಿಂಗ್‌, ರೇಡಾರ್‌ ಜಾಮರ್‌ಗಳನ್ನು ಸ್ಪೆಕ್ಟ್ರಾ ಸಿಸ್ಟಂನಲ್ಲಿರುವ ಸೆನ್ಸರ್‌ಗಳು ಗ್ರಹಿಸುತ್ತವೆ. 1,800 ಕಿ.ಮಿ. ವ್ಯಾಪ್ತಿ ವಿರೋಧಿಗಳ ಕಾರ್ಯ ಚಟುವಟಿಕೆಯನ್ನು ಗ್ರಹಿಸುವ ಸಾಮರ್ಥ್ಯ ಹೊಂದಿದ್ದು, ಈ ಕಾರಣಕ್ಕಾಗಿಯೇ ರಫೇಲ್‌ ವಿಮಾನ ಬೇರೆ ಯುದ್ಧ ವಿಮಾನಗಳಿಗಿಂತ ಭಿನ್ನ.

ಜೆ 11 ಅಥವ ಜಿಯಾನ್‌ 11
ಜೆ 11 ಸುಖೋಯ್‌ 27 ಎಸ್‌ಕೆ ಅದರ ವಿನ್ಯಾಸವನ್ನು ಹೋಲುತ್ತದೆ. ಇದನ್ನು ಟೈಟಾನಿಯಂ ಮತ್ತು ಅಲ್ಯೂಮಿನಿಯಂನಲ್ಲಿ ಸಿದ್ಧಪಡಿಸಲಾಗಿದೆ. ಜೆ 11 ಸಮರ ವಿಮಾನವು 21.9 ಮೀಟರ್‌ ಉದ್ದ, 14.7 ಮೀ. ವಿಂಗ್ಸ್‌ಪ್ಯಾನ್‌, 5.9 ಮೀ. ಎತ್ತರ, 65 ಮೀಟರ್‌ ವಿಸ್ತೀರ್ಣದ ವಿಂಗ್‌ ಹೊಂದಿದೆ. ಒಟ್ಟು 33 ಸಾವಿರ ಕೆ.ಜಿ. ಹೊರುವ ಸಾಮರ್ಥ್ಯವೂ ಇದೆ.

ಶಸ್ತ್ರಾಸ್ತ್ರ ಸಾಮರ್ಥ್ಯ
30 ಎಂ.ಎಂ.ನ ಜಿಎಸ್‌ಎಚ್‌ 30-1 ಕೆನಾನ್‌, ಪಿಎಲ್‌-12 ರಾಡಾರ್‌ ಗೈಡೆಡ್‌ ವಾಯು ದಾಳಿ ಕ್ಷಿಪಣಿಗಳಿವೆ. ಪಿಎಲ್‌-9 ಅಲ್ಪ ದೂರಗಾಮಿ ಕ್ಷಿಪಣಿಗಳು, ಇನ್‌ಪ್ರಾರೆಡ್‌‌ ವಾಯು ದಾಳಿ ಕ್ಷಿಪಣಿಗಳು, ಪಿಎಲ್‌-8 ವಾಯುದಾಳಿ ಕ್ಷಿಪಣಿ, ವ್ಯಾಪೆಂಲ್‌ ಆರ್‌-77 ಮಧ್ಯಮ ದೂರದ ವಾಯುದಾಳಿ ಕ್ಷಿಪಣಿ, ವ್ಯಾಪೆಂಲ್‌ ಆರ್‌-27 ದೂರಗಾಗಿ ವಾಯುದಾಳಿ ಕ್ಷಿಪಣಿ, ವ್ಯಾಪೆಂಲ್‌ ಆರ್‌-27 ಅಲ್ಪ ದೂರಗಾಮಿ ಕ್ಷಿಪಣಿ ಮತ್ತು ರಾಕೆಟ್‌ ಲಾಂಚರ್‌ಗಳು, ಫ್ರೀಫಾಲ್‌ ಕ್ಲಸ್ಟರ್‌ ಬಾಂಬ್‌ಗಳನ್ನೂ ಇದರಲ್ಲಿ ಲೋಡ್‌ ಮಾಡಬಹುದು.‌ ಜೆ 11 ಕಾಕ್‌ಪಿಟ್‌ನಲ್ಲಿ ಸಿಂಗಲ್‌ ಪೈಲಟ್‌ಗೆ ಮಾತ್ರ ಅವಕಾಶ ಇದೆ. ಗ್ಲಾಸ್‌ ಕಾಕ್‌ಪಿಟ್‌, ಹೆಡ್‌ ಡಿಸ್‌ಪ್ಲೇ ಹೊಂದಿದೆ. ಹೆಲ್ಮೆಂಟ್‌ ಮೌಂಟೆಡ್‌ ಸೈಟ್‌, ಡಿಜಿಟಲ್‌ ಫ್ಲೆçಟ್‌ ಕಂಟ್ರೋಲ್‌ ವ್ಯವಸ್ಥೆ ಹೊಂದಿದೆ. ಕಲರ್‌ ಮಲ್ಟಿಪಂಕ್ಷನಲ್‌ ಡಿಸ್‌ಪ್ಲೇಗಳು, ಹೆಡ್‌ ಅಪ್‌ ಡಿಸ್ಲೇ, ಹೆಲ್ಮೆಟ್‌ ಮೌಟೆಂಟ್‌ ಸೈಟ್‌ ಹೊಂದಿದೆ.

ಎಂಜಿನ್‌ಗಳು
ಜೆ-11 ಒಟ್ಟು ಐದು ಮಾದರಿಗಳಲ್ಲಿ ಲಭ್ಯವಿವೆ. ಜೆ-11ಡಿ ಇದರಲ್ಲಿ ಸುಧಾರಿತ ಆವೃತ್ತಿ. (ಇದು ನಾಲ್ಕು++ ತಲೆಮಾರಿನ ಯುದ್ಧವಿಮಾನ) ಇನ್ನಷ್ಟೇ ಈ ಆವೃತ್ತಿ ತಯಾರಾಗಬೇಕಿದೆ. ಚೀನದ ಬಳಿ ಇರುವ ಹೆಚ್ಚಿನ ಜೆ-11 ವಿಮಾನಗಳು ಮೂರನೇ ತಲೆಮಾರಿನದಾಗಿದೆ.ಜೆ-11 ಬಹೋಪಯೋಗಿ ಯುದ್ಧವಿಮಾನ. ಉದ್ದ 21.9 ಮೀ, ರೆಕ್ಕೆ ಉದ್ದ 14.7 ಮೀ. ಎತ್ತರ 5.9 ಮೀ ಹೊಂದಿದೆ. ಗರಿಷ್ಠ 33 ಸಾವಿರ ಕೆ.ಜಿ ಭಾರ ಹೊರುವ ಸಾಮರ್ಥ್ಯ ಇದಕ್ಕೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next