ಪ್ರೇಗ್: ಆಟೋಮೊಬೈಲ್ ಉತ್ಪಾದನಾ ಕ್ಷೇತ್ರದಲ್ಲಿ 2027ರ ವೇಳೆಗೆ ಚೀನಾ ಅನ್ನು ಹಿಂದಿಕ್ಕಿ ವಿಶ್ವದ ನಂಬರ್ 1 ಸ್ಥಾನಕ್ಕೆ ಏರಲು ಭಾರತ ಗುರಿ ಹೊಂದಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.
ಜೆಕ್ ಗಣರಾಜ್ಯದ ರಾಜಧಾನಿ ಪ್ರೇಗ್‌ನಲ್ಲಿ ನಡೆಯುತ್ತಿರುವ “27ನೇ ವಿಶ್ವ ರಸ್ತೆ ಸಮಾವೇಶ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“9 ವರ್ಷಗಳ ಹಿಂದೆ ಭಾರತದ ಆಟೋಮೊಬೈಲ್ ಕ್ಷೇತ್ರವು 4.5 ಲಕ್ಷ ಕೋಟಿ ರೂ. ಮೌಲ್ಯ ಹೊಂದಿತ್ತು. ಈಗ ಅದರ ಮೌಲ್ಯವು 12.5 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಆಟೋಮೊಬೈಲ್ ಉತ್ಪಾದನಾ ಕ್ಷೇತ್ರದಲ್ಲಿ ಕಳೆದ ವರ್ಷ ಜಪಾನ್ ಅನ್ನು ಹಿಂದಿಕ್ಕಿ ಭಾರತ ಮೂರನೇ ಸ್ಥಾನಕ್ಕೆ ಏರಿತು. 2027ರ ವೇಳೆಗೆ ನಂಬರ 1 ಸ್ಥಾನ ಹೊಂದುವ ಗುರಿಯನ್ನು ನಾವು ಹೊಂದಿದ್ದೇವೆ’ ಎಂದರು.
“ಇನ್ನೊಂದೆಡೆ, ಮುಂದಿನ 2-3 ತಿಂಗಳಲ್ಲಿ ದೆಹಲಿಯಲ್ಲಿ ವರ್ತುಲ ರಸ್ತೆ ಯೋಜನೆ-“ಅರ್ಬನ್ ಎಕ್ಸ್‌ಟೆನ್ಶನ್ ರೋಡ್ 2′ ಸಂಚಾರಕ್ಕೆ ಮುಕ್ತವಾಗಲಿದೆ. ಇದರಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣ ಸಮಯ ಕಡಿತವಾಗಲಿದೆ’ ಎಂದು ನಿತಿನ್ ಗಡ್ಕರಿ ತಿಳಿಸಿದರು