Advertisement

ಭಾರತದ ಹೊಸ ವಿಕ್ರಮ

11:57 PM Sep 08, 2019 | sudhir |

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ)ಮಹತ್ವಾಕಾಂಕ್ಷೆ ಯ ಚಂದ್ರಯಾನ-2 ಯೋಜನೆ ಅಂತಿಮ ಘಟ್ಟದಲ್ಲಿ ಹಿನ್ನಡೆ ಕಂಡರೂ ದೇಶದ ವಿಜ್ಞಾನಿಗಳ ಪರಿಶ್ರಮ, ಸಂಶೋಧನಾ ಸಾಮರ್ಥ್ಯಕ್ಕೆ ವಿಶ್ವವೇ  ನಿಬ್ಬೆರಗಾಗಿದೆ. ರಾಕೆಟ್‌, ಉಪಗ್ರಹ, ಬಾಹ್ಯಾಕಾಶ ನೌಕೆಯ ಉಡಾ ವಣೆ… ಹೀಗೆ ಪ್ರತಿ ಯೊಂದೂ ಬಾಹ್ಯಾಕಾಶ ಯೋಜನೆಗಳನ್ನು ಎಷ್ಟರ ಮಟ್ಟಿಗೆ ಕಾರ್ಯಗತಗೊಳಿ ಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ ಎಂಬು­ದನ್ನು ಅವಲಂಬಿಸಿರುತ್ತದೆ. ವೈಜ್ಞಾನಿಕ ಅಧ್ಯಯನ, ಸಂಶೋಧನೆಗಳು ಯಾವಾಗಲೂ ಅಧ್ಯಯನ ರೂಪದಲ್ಲಿರುತ್ತವೆಯೇ ಹೊರತು ಯಶಸ್ಸು ಅಥವಾ ವಿಫ‌ಲತೆಗಳನ್ನು ಮಾನದಂಡ ವನ್ನಾಗಿರಿಸಿ ಆ ಯೋಜನೆಗಳ ಸಫ‌ಲತೆಯ ನಿರ್ದಿಷ್ಟ ನಿರ್ಧಾರಕ್ಕೆ ಬರಲಾಗದು.

Advertisement

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆ, ಅಧ್ಯಯನಗಳಿಗೆಲ್ಲ ಪ್ರಯೋಗವೇ ಮೂಲಾಧಾರ. ಈ ಪ್ರಯೋಗಗಳು ಸಫ‌ಲವಾಗಲೀ ಬಿಡಲಿ, ಪ್ರತಿಯೊಂದರಿಂದಲೂ ಕಲಿಯಬೇಕಾಗಿರುವುದು ಸಾಕಷ್ಟಿರುತ್ತದೆ. ಇಸ್ರೋದ ಚಂದ್ರಯಾನ-2 ಯೋಜನೆಯೂ ಇದೇ ಸಾಲಿಗೆ ಸೇರುತ್ತದೆ. ಭೂಮಿಯಿಂದ ಸುಮಾರು 3.84 ಲಕ್ಷ ಕಿ.ಮೀ. ದೂರದಲ್ಲಿರುವ ಚಂದ್ರನಲ್ಲಿಗೆ ಬಹುತೇಕ ತಲುಪಿದ್ದ ವಿಕ್ರಮ್‌ ಲ್ಯಾಂಡರ್‌ ಇನ್ನೇನು ಚಂದ್ರನ ಅಂಗಳದಲ್ಲಿ ಇಳಿಯಬೇಕು ಎನ್ನುವಷ್ಟರಲ್ಲಿ ಅಂದರೆ 2.1ಕಿ. ಮೀ. ದೂರದಲ್ಲಿರುವಾಗ ಇಸ್ರೋ ನಿಯಂತ್ರಣ ಕೊಠಡಿಯಿಂದ ತನ್ನ ಸಂಪರ್ಕವನ್ನು ಕಳೆದುಕೊಂಡಿತು.

ವಿಕ್ರಮ್‌ ಲ್ಯಾಂಡರ್‌ ಮತ್ತೆ ಸಂಪರ್ಕಕ್ಕೆ ಸಿಗುವ ನಿರೀಕ್ಷೆಯಲ್ಲಿ ಇಸ್ರೋದಲ್ಲಿ ಸೇರಿದ್ದ ವಿಜ್ಞಾನಿಗಳ ತಂಡ ಕುತೂಹಲದಿಂದ ಕಾಯತೊಡಗಿತು. ಈ ನಡುವೆ ವಿಕ್ರಮ್‌ ಲ್ಯಾಂಡರ್‌ ಮತ್ತೆ ಸಂಪರ್ಕಕ್ಕೆ ಸಿಕ್ಕಿತಾದರೂ ಕೆಲವೇ ಕ್ಷಣಗಳಲ್ಲಿ ಮತ್ತೆ ಸಂಪರ್ಕ ಕಳೆದುಕೊಂಡಿತು. ಆ ಬಳಿಕ ಸತತ ಪ್ರಯತ್ನದ ಹೊರತಾಗಿಯೂ ವಿಕ್ರಮ್‌ನ ಸಂಪರ್ಕ ಸಾಧ್ಯ ವಾಗಲೇ ಇಲ್ಲ. ಇದರಿಂದ ವಿಜ್ಞಾನಿಗಳು ತೀವ್ರ ನಿರಾಸೆಗೊಳಗಾದರು. ಇಸ್ರೋ ಅಧ್ಯಕ್ಷ ಕೆ. ಶಿವನ್‌ ಅಕ್ಷರಶಃ ಮಗುವಿನಂತೆ ಕಣ್ಣೀರಿಟ್ಟರು.

ವಿಕ್ರಮ್‌ ಲ್ಯಾಂಡರ್‌ ಇಸ್ರೋ ನಿಯಂತ್ರಣ ಕೊಠಡಿಯಿಂದ ಸಂಪರ್ಕ ಕಳೆದುಕೊಂಡಿದ್ದರೂ ಚಂದ್ರಯಾನ-2ರ ಆರ್ಬಿಟರ್‌ ಸುರಕ್ಷಿತವಾಗಿ­ರುವು­ದರಿಂದ ವಿಜ್ಞಾನಿಗಳು ಇನ್ನೂ ಯೋಜನೆಯ ಬಗೆಗೆ ಆಶಾವಾದ ಹೊಂದಿದ್ದಾರೆ. ಇದೇ ಮೊತ್ತಮೊದಲ ಬಾರಿಗೆ ದೇಶವೊಂದರ ಬಾಹ್ಯಾಕಾಶ ನೌಕೆಯನ್ನು ಚಂದ್ರನ ದಕ್ಷಿಣ ಧ್ರುವಕ್ಕೆ ಕಳುಹಿಸಲು ಇಸ್ರೋ ವಿಜ್ಞಾನಿಗಳಿಗೆ ಸಾಧ್ಯ­ವಾಗಿ­ರುವು­ದರಿಂದ ಆರ್ಬಿಟರ್‌ನ ಕಾರ್ಯಾಚರಣೆಯ ಬಗೆಗೆ ಸಹಜವಾಗಿಯೇ ಖಗೋ­ಳಾ­ಸಕ್ತರಲ್ಲಿ ಕುತೂಹಲ ಮೂಡಿದೆ. ಆರ್ಬಿಟರ್‌ ಇಸ್ರೋ ನಿಯಂತ್ರಣ ಕೇಂದ್ರಕ್ಕೆ ರವಾನಿಸಿರುವ ಛಾಯಾಚಿತ್ರದಲ್ಲಿ ವಿಕ್ರಮ್‌ ಲ್ಯಾಂಡರ್‌ ಕಾಣಿಸಿಕೊಂಡಿದ್ದು ಇದು ಮತ್ತೆ ಸಂಪರ್ಕ ಸಾಧಿಸುವ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಒಂದೊಮ್ಮೆ ವಿಕ್ರಮ್‌ ಲ್ಯಾಂಡರ್‌ ಚಂದ್ರನ ನೆಲದಲ್ಲಿ ಇಳಿ­ದಿದ್ದರೆ ಮರು ಸಂಪರ್ಕದ ಸಾಧ್ಯತೆ ಇದೆ. ಆದರೆ ಲ್ಯಾಂಡರ್‌ ಪತನವಾಗಿದ್ದಲ್ಲಿ ಮರು ಸಂಪರ್ಕ ಅಸಾಧ್ಯ. ಆದರೆ ವಿಕ್ರಮ್‌ ರೋವರ್‌ನ ಜೀವಿತಾವಧಿ 14 ದಿನಗಳಾಗಿ­ರು­ವುದರಿಂದ ಅದು ಸುರಕ್ಷಿತವಾಗಿದ್ದಲ್ಲಿ ಅದರ ಜತೆ ಸಂಪರ್ಕ ಸಾಧಿಸುವ ಪ್ರಯತ್ನ­ಗಳನ್ನೂ ವಿಜ್ಞಾನಿಗಳು ನಡೆಸಲಿದ್ದಾರೆ. ಇನ್ನು ಆರ್ಬಿಟರ್‌ ಸುಮಾರು 7.5 ವರ್ಷಗಳ ಜೀವಿತಾವಧಿ ಹೊಂದಿರುವುದರಿಂದ ಅಧ್ಯಯನಕ್ಕೆ ಸಹಕಾರಿಯಾಗಲಿದೆ.

ಕಳೆದ 6 ದಶಕಗಳ ಅವಧಿಯಲ್ಲಿ ವಿವಿಧ ದೇಶಗಳಿಂದ 109 ಚಂದ್ರಯಾನ ಪ್ರಯೋಗಗಳು ನಡೆದಿದ್ದು, 61 ಪ್ರಯತ್ನಗಳು ಯಶಸ್ಸನ್ನು ಕಂಡರೆ 48 ಪ್ರಯತ್ನ­ಗಳು ವಿಫ‌ಲವಾಗಿವೆ. ಭಾರತದ ಚಂದ್ರಯಾನ-2 ಯೋಜನೆ ಒಂದಿಷ್ಟು ಹಿನ್ನಡೆ ಕಂಡರೂ ಈ ಪ್ರಯತ್ನ ಹಲವು ಅಧ್ಯಯನಗಳಿಗೆ ನಾಂದಿ ಹಾಡಲಿದೆ. ಇಸ್ರೋದ ಈ ಸಾಹಸಕ್ಕೆ ದೇಶದ ಪ್ರಧಾನಿಯಾದಿಯಾಗಿ ಪ್ರತಿಯೋರ್ವ ಪ್ರಜೆಯೂ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಭಾರತ ತನ್ನ ಸ್ವಸಾಮರ್ಥ್ಯದಿಂದ ಈ ಮಹತ್ತರ ಬಾಹ್ಯಾಕಾಶ ಯೋಜನೆಯನ್ನು ಕೈಗೆತ್ತಿಕೊಂಡು ಬಹುತೇಕ ಯಶಸ್ಸು ಸಾಧಿಸಿರುವ ಹಿನ್ನೆಲೆಯಲ್ಲಿ ಇಸ್ರೋ ಮುಂದಿನ ಎಂಟು ವರ್ಷಗಳಲ್ಲಿ ಕೈಗೆತ್ತಿಕೊಳ್ಳಲುದ್ದೇಶಿಸಿರುವ ಸೂರ್ಯಯಾನವಾಗಿರುವ ಆದಿತ್ಯ ಎಲ್‌-1, ಮಾನÊ­‌ನನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಗಗನಯಾನ, ಮಂಗಳಯಾನ-2, ಚಂದ್ರಯಾನ-3, ಶುಕ್ರಯಾನ ಮತ್ತು ಭಾರತೀಯ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆ ಯೋಜನೆಗಳಿಗೆ ಮುನ್ನುಡಿಯನ್ನು ಬರೆದಿದೆ. ಅತ್ಯಂತ ಅಗ್ಗದ ಮತ್ತು ಸ್ವಸಾಮರ್ಥ್ಯದ ಬಾಹ್ಯಾಕಾಶ ಯೋಜನೆಯ ಅನುಷ್ಠಾನದಲ್ಲಿ ಮಹತ್ತರ ಸಾಧನೆಗೈದಿರುವ ಇಸ್ರೋದ ಮೇಲೆ ಸಹಜವಾಗಿಯೇ ಜಗತ್ತಿನ ಖಗೋಳ ವಿಜ್ಞಾನಿಗಳು ಬಹಳಷ್ಟು ನಿರೀಕ್ಷೆಯನ್ನು ಹೊಂದಿದ್ದು, ಇದನ್ನು ವಿಜ್ಞಾನಿಗಳು ಹುಸಿಯಾಗಿಸರು ಎಂಬ ದೃಢ ವಿಶ್ವಾಸ ಎಲ್ಲ ಭಾರತೀಯರಲ್ಲಿ ಮೂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next