Advertisement

ಚೀನಿ ಕಂಪೆನಿಗಳ ಕುತಂತ್ರಕ್ಕೆ ಭಾರತದ ‍FDI ಚಾಟಿ!

12:51 PM Apr 22, 2020 | Hari Prasad |

ಕೋವಿಡ್ 19 ವೈರಸ್ ಕಾರಣದಿಂದಾಗಿ ಜಗತ್ತು ತತ್ತರಿಸಿರುವಾಗ, ಚೀನದ ಕಂಪೆನಿಗಳು ವಿವಿಧ ದೇಶಗಳಲ್ಲಿ ಹೂಡಿಕೆ ಹೆಚ್ಚು ಮಾಡುತ್ತಿವೆ. ಇಲ್ಲವೇ, ಅಲ್ಲಿನ ದುರ್ಬಲ ಕಂಪೆನಿಗಳನ್ನು ಖರೀದಿಸಲಾರಂಭಿಸಿವೆ.

Advertisement

ಇಂಥ ಸನ್ನಿವೇಶವನ್ನು ತಡೆಯಲು ಭಾರತ ಸರಕಾರವು ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿಯಲ್ಲಿ ಕೆಲವು ಗಮನಾರ್ಹ ಬದಲಾವಣೆ ತಂದಿದೆ.

ಇನ್ಮುಂದೆ ಯಾವ ದೇಶಗಳು ಭಾರತದೊಂದಿಗೆ ಭೂಗಡಿಗಳನ್ನು ಹೊಂದಿವೆಯೋ ಆ ದೇಶಗಳು ಯಾವುದೇ ವ್ಯವಹಾರದಲ್ಲಿ ಅಥವಾ ಕಂಪೆನಿಯಲ್ಲಿ ಹೂಡಿಕೆ ಮಾಡಬೇಕೆಂದರೆ, ಮೊದಲು ಭಾರತ ಸರಕಾರದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಲಿದೆ.

ಮೊದಲೆಲ್ಲ ಈ ನಿರ್ಬಂಧ ಕೇವಲ ಪಾಕಿಸ್ಥಾನ ಮತ್ತು ಬಾಂಗ್ಲಾದೇಶಕ್ಕಷ್ಟೇ ಇತ್ತು. ಈಗ ಇದು ತನಗೂ ಅನ್ವಯವಾಗುವುದರಿಂದಾಗಿ ಚೀನ ವ್ಯಗ್ರವಾಗಿದೆ!

ಭಾರತದಲ್ಲಿ ಬಹಳಷ್ಟಿದೆ ಚೀನ ಕಂಪೆನಿಗಳ ಹೂಡಿಕೆ
ಭಾರತದಲ್ಲಿ ಚೀನದ ‘ಪ್ರಸಕ್ತ’ ಹಾಗೂ ‘ಪ್ರಸ್ತಾವಿತ’ ಹೂಡಿಕೆಯ ಪ್ರಮಾಣ 26 ಶತಕೋಟಿ ಡಾಲರ್‌ ದಾಟಿದೆ. ಭಾರತದಲ್ಲಿ ಹೂಡಿಕೆ ಮಾಡಿರುವ ಅನೇಕ ಕಂಪೆನಿಗಳು ಚೀನಿ ಸರಕಾರದ ಸಹಭಾಗಿತ್ವದಲ್ಲಿ ಕೆಲಸ ಮಾಡುತ್ತಿವೆ.

Advertisement

2014ರವರೆಗೂ ಭಾರತದಲ್ಲಿ ಚೀನದ ನಿವ್ವಳ ಹೂಡಿಕೆ 1.6 ಶತಕೋಟಿ ಡಾಲರ್‌ಗಳಷ್ಟಿತ್ತು. ಮುಂದಿನ ಐದು ವರ್ಷಗಳಲ್ಲಿ ಅದು 8 ಶತಕೋಟಿ ಅಮೆರಿಕನ್‌ ಡಾಲರ್‌ಗೆ ಏರಿತು.

ಭಾರತದಲ್ಲಿ ಚೀನಿ ಹೂಡಿಕೆ ಅಧಿಕೃತ ಅಂಕಿಅಂಶಗಳಿಗಿಂತಲೂ 25 ಪ್ರತಿಶತ ಅಧಿಕವಿರಬಹುದು ಎಂಬ ಅಂದಾಜಿದೆ. ಇನ್ನು ಘೋಷಣೆಯಾದ ಯೋಜನೆಗಳು, ಮತ್ತು ಪ್ಲ್ಯಾನ್‌ ಮಾಡಲಾದ ಹೂಡಿಕೆಗಳನ್ನು ಪರಿಗಣಿಸಿದರೆ, ಈ ಪ್ರಮಾಣ 26 ಶತಕೋಟಿ ಡಾಲರ್‌ಗೂ ಅಧಿಕವಾಗುತ್ತದೆ!

ಚೀನದಿಂದ ಒತ್ತಡ ತಂತ್ರ
ಭಾರತದ ಈ ನಿರ್ಧಾರದಿಂದಾಗಿ ಕುಪಿತವಾಗಿರುವ ಚೀನ ಈಗ ಒತ್ತಡ ತಂತ್ರ ಹೇರಲು ಮುಂದಾಗಿದೆ. ಕೇಂದ್ರ ಸರಕಾರದ ಈ ನಡೆಯನ್ನು ತಾರತಮ್ಯದ ಕ್ರಮ ಎಂದು ಅದು ಜರಿದಿದೆ. ಭಾರತದಲ್ಲಿನ ಚೀನ ರಾಯಭಾರಿ, ‘ಚೀನಿ ಹೂಡಿಕೆಯು ಭಾರತದ ಔದ್ಯೋಗಿಕ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ’ ಎಂದು ಹೇಳುತ್ತಿದ್ದಾರೆ.

ಚೀನ ದೂತವಾಸದ ವಕ್ತಾರ ಜೀ ರೋಂಗ್‌ ‘ಭಾರತ ಸರಕಾರವು ಈ ತಾರತಮ್ಯದ ನೀತಿಯಲ್ಲಿ ಬದಲಾವಣೆ ಮಾಡಬೇಕು ಮತ್ತು ನಿಷ್ಪಕ್ಷ, ಪಾರದರ್ಶಕ ಹಾಗೂ ಸಮಾನ ಅವಕಾಶಗಳನ್ನು ನೀಡುವ ವ್ಯಾಪಾರ ವಾತಾವರಣವನ್ನು ಬೆಳೆಸುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡುತ್ತಿದ್ದಾರೆ!

ಹದಗೆಡುವುದೇ ಸಂಬಂಧ?
ನೇರ ಬಂಡವಾಳ ಹೂಡಿಕೆಯ ವಿಚಾರದಲ್ಲಿನ ಈ ಬದಲಾವಣೆಯು ಭವಿಷ್ಯದಲ್ಲಿ ಭಾರತ ಮತ್ತು ಚೀನ ನಡುವಿನ ಸಂಬಂಧದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು ಎಂದು ಪರಿಣತರು ಎಚ್ಚರಿಸುತ್ತಿದ್ದಾರೆ.

ಇನ್ನೊಂದೆಡೆ ಚೀನ ತನ್ನ ಹೂಡಿಕೆಯಿಂದಾಗಿ ಭಾರತದಲ್ಲಿ ಅನೇಕ ಉದ್ಯೋಗಗಳು ಸೃಷ್ಟಿಯಾಗಿವೆ ಮತ್ತು ಅಭಿವೃದ್ಧಿಯಾಗಿದೆ ಎಂದು ಹೇಳುತ್ತದೆ. ಇದಕ್ಕೆ ಅದು ಉದಾಹರಣೆಯಾಗಿ ಎದುರಿಡುವುದು – ಮೊಬೈಲ್‌ಫೋನ್‌, ಗೃಹೋಪಯೋಗಿ ಇಲೆಕ್ಟ್ರಿಕ್‌ ಉಪಕರಣಗಳು, ಮೂಲಸೌಕರ್ಯ ಹಾಗೂ ಆಟೊಮೊಬೈಲ್‌ ಸಂಬಂಧಿ ಉದ್ಯೋಗಗಳನ್ನು.

HDFCಯಲ್ಲಿ ಪಾಲುದಾರಿಕೆ ಹೆಚ್ಚಳ
ಭಾರತದಲ್ಲಿ ಕೋವಿಡ್ 19 ವೈರಸ್ ಹಾವಳಿ ಹೆಚ್ಚಾಗುತ್ತಿದ್ದಂತೆಯೇ ಪೀಪಲ್ಸ್‌ ಬ್ಯಾಂಕ್‌ ಆಫ್ ಚೀನ, HDFC ಬ್ಯಾಂಕ್‌ನಲ್ಲಿನ ತನ್ನ ಪಾಲುದಾರಿಕೆಯನ್ನು 0.8 ಪ್ರತಿಶತದಿಂದ ಏಕಾಏಕಿ 1.01 ಪ್ರತಿಶತಕ್ಕೆ ಏರಿಸಿಬಿಟ್ಟಿತ್ತು.

ಗಮನಾರ್ಹ ಸಂಗತಿಯೆಂದರೆ, HDFCಯಲ್ಲಿ ಚೀನ ಬ್ಯಾಂಕ್‌ನ ಪಾಲುದಾರಿಗೆ ಅಧಿಕವಾಗುತ್ತಿದ್ದಂತೆಯೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೂಡ ಈ ವಿಚಾರದಲ್ಲಿ ಎಚ್ಚರಿಸಿದ್ದರು.

‘ಭಾರೀ ಆರ್ಥಿಕ ಕುಸಿತದಿಂದಾಗಿ ದೇಶದ ಅನೇಕ ಕಾರ್ಪೊರೇಟ್‌ಗಳು ದುರ್ಬಲವಾಗಿವೆ. ಸ್ವಾಧೀನ ಪ್ರಕ್ರಿಯೆಗೆ ಅವು ಆಕರ್ಷಕ ಗುರಿಯಾಗಿ ಬದಲಾಗಿವೆ.

ಹೀಗಾಗಿ, ರಾಷ್ಟ್ರೀಯ ಬಿಕ್ಕಟ್ಟಿನ ಈ ಸಮಯದಲ್ಲಿ ಯಾವುದೇ ವಿದೇಶಿ ಹಿತಾಸಕ್ತಿಯೂ ಕೂಡ ಭಾರತದ ಕಂಪೆನಿಗಳ ಮೇಲೆ ಹಿಡಿತ ಸಾಧಿಸದಂತೆ ಭಾರತ ಸರಕಾರ ನೋಡಿಕೊಳ್ಳಬೇಕು’ ಎಂದಿದ್ದರು ರಾಹುಲ್‌.

ಎಪ್ರಿಲ್‌ 18ರಂದು ಭಾರತ ಸರಕಾರದ ಉದ್ಯೋಗ ಮತ್ತು ಆಂತರಿಕ ವ್ಯಾಪಾರ ಪ್ರೋತ್ಸಾಹ ವಿಭಾಗದ ಪತ್ರಿಕಾಗೋಷ್ಠಿಯಲ್ಲೂ ‘ವಿದೇಶಿ ಹೂಡಿಕೆದಾರರು ಕೋವಿಡ್ ನಿಂದ ಲಾಭ ಪಡೆಯುವುದನ್ನು ತಡೆಯುವ ಬಗ್ಗೆ’ ಮಾತನಾಡಲಾಗಿತ್ತು.

ಆಸ್ಟ್ರೇಲಿಯಾ, ಜರ್ಮನಿಯಲ್ಲೂ ಬದಲಾವಣೆ!
ಕೋವಿಡ್ ಜಗತ್ತಿನಾದ್ಯಂತ ಹರಡಿ, ವಿವಿಧ ದೇಶಗಳ ಆರ್ಥಿಕತೆ ಕುಂಠಿತವಾಗುತ್ತಿರುವಂತೆಯೇ ಚೀನ ಇದರಿಂದ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಚೀನದ ಕಂಪೆನಿಗಳು, ಅನ್ಯ ದೇಶಗಳ ಕಂಪೆನಿಗಳನ್ನು ಅಥವಾ ಅವುಗಳಲ್ಲಿ ಪಾಲನ್ನು ಅಗ್ಗದ ದರದಲ್ಲಿ ಖರೀದಿಸಲಾರಂಭಿಸಿವೆ ಎಂಬ ಅಸಮಾಧಾನ ಜಗತ್ತಿನಾದ್ಯಂತ ಭುಗಿಲೆದ್ದಿದೆ.

ಈ ಕಾರಣಕ್ಕಾಗಿಯೇ, ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ಮತ್ತು ಜರ್ಮನಿ ಕೂಡ, ತಮ್ಮ ಕಂಪೆನಿಗಳನ್ನು ಉಳಿಸಿಕೊಳ್ಳುವ ಸಲುವಾಗಿ ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿಯನ್ನು ಬಿಗಿಗೊಳಿಸಿವೆ.

ಚೀನ ಜಾಗತಿಕ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸುವುದಕ್ಕಾಗಿ ಕೋವಿಡ್ ಸಾಂಕ್ರಾಮಿಕವನ್ನು ಬಳಸಿಕೊಳ್ಳುತ್ತಿರುವುದು ತೀವ್ರ ಟೀಕೆಗೆ ಒಳಗಾಗುತ್ತಿದೆ.

ಆದರೂ, ಚೀನ ಕಂಪೆನಿಗಳು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ, ಅದರಲ್ಲೂ ಆಫ್ರಿಕನ್‌ ರಾಷ್ಟ್ರಗಳಲ್ಲಿನ ಕಂಪೆನಿಗಳಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಲಾರಂಭಿಸಿವೆ, ಇಲ್ಲವೇ ಅವುಗಳನ್ನು ಖರೀದಿಸಲಾರಂಭಿಸಿವೆ.

– ಇಲ್ಲಿಯವರೆಗಿನ FDI ನಿಯಮವು ಕೇವಲ ಬಾಂಗ್ಲಾದೇಶ – ಪಾಕಿಸ್ಥಾನಕ್ಕೆ ಸೀಮಿತವಾಗಿತ್ತು. ಹೊಸ ನಿಯಮದ ವ್ಯಾಪ್ತಿಯಲ್ಲಿ ಚೀನ, ನೇಪಾಳ, ಭೂತಾನ್‌ ಮತ್ತು ಮ್ಯಾನ್ಮಾರ್‌ ಕೂಡ ಬರುತ್ತವೆ.

– ಪ್ರಸಕ್ತ ಭಾರತದಲ್ಲಿ ಎರಡು ಮಾರ್ಗದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಮಾಡಬಹುದು.

– ಒಂದು ಆಟೊಮೆಟಿಕ್‌ ಆಗಿ (ಸರಕಾರದ ಅನುಮತಿ ಬೇಕಿಲ್ಲ) ಮತ್ತು ಎರಡನೆಯದು, ಸರಕಾರದ ಅನುಮತಿ ಪಡೆಯುವ ಮೂಲಕ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next