ನವದೆಹಲಿ: ನಾಪತ್ತೆಯಾಗಿರುವ ಖಲಿಸ್ತಾನಿ ನಾಯಕ ಅಮೃತ್‌ಪಾಲ್ ಸಿಂಗ್‌ಗಾಗಿ ತನಿಖೆ ಮುಂದುವರಿದಿರುವಂತೆಯೇ ಕೇಂದ್ರ ಗೃಹ ಸಚಿವಾಲಯ ವಿದೇಶಗಳಲ್ಲಿ ತಲೆಮರಿಸಿಕೊಂಡಿರುವ 28 ಅಗ್ರ ಪ್ರತ್ಯೇಕತಾವಾದಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಈ ಪೈಕಿ ಹೆಚ್ಚಿನವರು ಖಲಿಸ್ತಾನಿ ಪ್ರತ್ಯೇಕವಾದಿ ಹೋರಾಟದಲ್ಲಿ ಗುರುತಿಸಿಕೊಂಡಿದ್ದಾರೆ.ಸತೀಂದ್ರಜಿತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ಅಮೆರಿಕದಲ್ಲಿ ತಲೆಮರೆಸಿಕೊಂಡಿದ್ದಾನೆ. ಬ್ರಾಬ್ ಮತ್ತು ಲಾರೆನ್ಸ್ ಬಿಷ್ಣಾಯ್ ಪಂಜಾಬಿ ಗಾಯಕ ಸಿಧು ಮೂಸೇವಾಲ ಕೊಲೆಯ ಮಾಸ್ಟರ್‌ಮೈಂಡ್ ಗಳಾಗಿದ್ದಾರೆ.
ಮತ್ತೊಬ್ಬ ಗ್ಯಾಂಗ್‌ಸ್ಟರ್ ಅನ್ಮೋಲ್ ಬಿಷ್ಣಾಯ್ ಅಲಿಯಾಸ್ ಭಾನು ಕೂಡ ಅಮೆರಿಕದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಇದೇ ರೀತಿ ನಟೋರಿಯಸ್ ಗ್ಯಾಂಗ್‌ಸ್ಟರ್‌ಗಳಾದ ಹರ್ಜೋತ್ ಸಿಂಗ್ ಗಿಲ್, ಅಮೃತ್ ಬಾಲ್, ಸ್ನೋವರ್ ಧಲ್ಲಾನ್, ಲಖೀರ್ ಸಿಂಗ್ ಅಲಿಯಾಸ್ ಲಂಡಾ ಸೇರಿದಂತೆ ಒಟ್ಟು 28 ಮಂದಿ ಅಮೆರಿಕ, ಕೆನಡಾ, ದುಬೈ, ಐರೋಪ್ಯ ಒಕ್ಕೂಟ, ಅರ್ಮೇನಿಯಾ, ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳಲ್ಲಿ ತಲೆಮರೆಸಿಕೊಂಡಿದ್ದಾರೆ.
ಅಸ್ಸಾಂ ಸಿಎಂಗೆ ಬೆದರಿಕೆ:
ಈ ನಡುವೆ, ಖಲಿಸ್ತಾನಿ ಬೆಂಬಲಿಗರು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮ ಅವರಿಗೆ ಬೆದರಿಕೆ ಹಾಕಿದ್ದಾರೆ. “ತಲೆಮರೆಸಿಕೊಂಡಿರುವ ಅಮೃತ್‌ಪಾಲ್ ಸಿಂಗ್‌ನ ಆರು ಸಹಚರರನ್ನು ಅಸ್ಸಾಂ ಸರ್ಕಾರ ಬಂಧಿಸಿ, ಜೈಲಿನಲ್ಲಿ ಅವರಿಗೆ ಕಿರುಕುಳ ನೀಡುತ್ತಿದೆ. ಇದು ಖಲಿಸ್ತಾನಿ ಬೆಂಬಲಿಗರು ಮತ್ತು ಭಾರತದ ವಿರುದ್ಧ ಹೋರಾಟ. ಇದರಲ್ಲಿ ನೀವು(ಶರ್ಮ) ಮಧ್ಯಪ್ರವೇಶಿಸಿ ಕುತ್ತು ತಂದುಕೊಳ್ಳದಿರಿ,’ ಎಂದು ಸಿಖ್ ಫಾರ್ ಜಸ್ಟಿಸ್ ಸಂಘಟನೆಯ ಉಗ್ರ ಗುರುಪತ್ವಾನ್ ಸಿಂಗ್ ಪನ್ನು ಬೆದರಿಕೆ ಹಾಕಿದ್ದಾನೆ.
ಇನ್ನೊಂದೆಡೆ, ಅಹ್ಮದಾಬಾದ್‌ನಲ್ಲಿ ಮಾ.8ರಂದು ನಡೆದಿದ್ದ ಕ್ರಿಕೆಟ್ ಪಂದ್ಯ ವೀಕ್ಷಿಸಲು ಆಗಮಿಸಬಾರದು ಎಂದು ಸಾರ್ವಜನಿಕರಿಗೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ಖಲಿಸ್ತಾನಿ ಬೆಂಬಲಿಗರನ್ನು ಉತ್ತರ ಪೊಲೀಸರು ಬಂಧಿಸಿದ್ದಾರೆ. ಅವರ ಬಳಿ ಇದ್ದ ಹಲವು ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.