Advertisement
ದಶಕದಿಂದ ಗಲ್ಫ್ ನಲ್ಲಿದ್ದು ಇಲ್ಲಿ ಕಾನೂನು ಪಾಲನೆ ಎಷ್ಟು ಅನಿವಾರ್ಯ, ಎಷ್ಟು ಕಠಿನ, ಹೇಗೆ ಶಿಕ್ಷೆ ಎನ್ನುವ ಅರಿವಿದೆ. ಮಾ. 19ರಿಂದ ಮನೆಯೊಳಗೇ ಇದ್ದೇನೆ. ಮಾಳಿಗೆ ಇಳಿದು ಕೆಳಗೆ ಕೂಡ ಹೋಗಿಲ್ಲ. ಇಷ್ಟು ಸಣ್ಣ ದೇಶದಲ್ಲಿ ಪ್ರತಿದಿನ 400ರಂತೆ ಪ್ರಕರಣಗಳು ಹೆಚ್ಚುತ್ತಿರುವುದು ಭಯ ತರಿಸುತ್ತಿದೆ. ಇಲ್ಲಿನ ಆಡಳಿತದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ನೀಡುವುದು, ಕಡಿವಾಣ ಹಾಕುವುದು, ಕಠಿನ ಕಾನೂನು ಪಾಲನೆ ಸುಲಭ. ಆದರೆ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಜನಸಂಖ್ಯೆ, ವ್ಯಾಪ್ತಿ ಗಮನಿಸಿದರೆ ಕಷ್ಟ. ಇಲ್ಲಿ ದಿನಸಿ, ಮೆಡಿಕಲ್‌ಗೆ ಹೋಗಲು ಇ-ಪಾಸ್ ಬೇಕು. ಇಲ್ಲದೇ ಸಂಚರಿಸುವ ವಾಹನಗಳನ್ನು ರಾಡಾರ್ ಮೂಲಕ ಪತ್ತೆಹಚ್ಚಿ ಎಷ್ಟು ದಂಡ ಹಾಕುತ್ತಾರೆಂಬುದು ಊಹೆಗೂ ನಿಲುಕದು! ನಾನು ಮಧುಮೇಹ ಹೊಂದಿದ್ದು ಟೆಲಿ ಕೌನ್ಸೆಲಿಂಗ್ ಮೂಲಕ ತಪಾಸಣೆ ನಡೆಸಿ ಮನೆಗೇ ಔಷಧ ಸರಬರಾಜಾಗುತ್ತದೆ.
ಭಾರತದಲ್ಲಿ ಕಾನೂನು ಉಲ್ಲಂ ಸುವವರ ವಾಹನ ಮುಟ್ಟುಗೋಲು, ಆನ್‌ಲೈನ್ ಪಾಸ್, ಅಂಗಡಿಗಳಿಗೆ ಸಮಯ ನಿಗದಿ, ಟೆಲಿ ಕೌನ್ಸೆಲಿಂಗ್ ಮೂಲಕ ರೋಗಿಯ ತಪಾಸಣೆ, ಸಾಮಾಜಿಕವಾಗಿ ಅಂತರ ಕಾಪಾಡುವಿಕೆ, ಕಟ್ಟುನಿಟ್ಟಿನ ಕ್ವಾರಂಟೈನ್, ಲಾಕ್‌ಡೌನ್ ಪಾಲನೆ ನಡೆಯುತ್ತಿರುವುದನ್ನು ನೋಡುವಾಗ ಹೆಮ್ಮೆಯಾಗುತ್ತಿದೆ. ವಿದೇಶದ ಮಾದರಿಯಲ್ಲಿ ಭಾರತದಲ್ಲೂ ನಿಯಮಗಳ ಅನುಷ್ಠಾನವಾಗುತ್ತಿರುವುದು ಊಹೆಗೂ ನಿಲುಕದ್ದು. ಜೀವವನ್ನು ಪಣಕ್ಕಿಟ್ಟು ತಾಳ್ಮೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಸಿಬಂದಿಯೂ ಅಭಿನಂದನಾರ್ಹರು.
ನನ್ನ ಗೆಳೆಯ ಕೋಟೇಶ್ವರ ಅಂಕದಕಟ್ಟೆಯ ಅನಿಲ್ ಕುಮಾರ್ ಅವರು ವಿದೇಶದಿಂದ ಊರಿಗೆ ಹೋಗಿದ್ದು 14 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ. ಈ ಅವಧಿಯಲ್ಲಿ ಪಂಚಾಯತ್ ಅಧಿಕಾರಿಗಳು, ಇಲಾಖೆಯವರು ಅವರ ಬಗ್ಗೆ ತೋರಿದ ಕಾಳಜಿ, ಒದಗಿಸಿದ ಸೌಕರ್ಯಗಳು ಅತ್ಯದ್ಭುತ. ಇಂತಹ ಸ್ಪಂದನೆಯನ್ನು ಖಂಡಿತ ನಿರೀಕ್ಷಿಸಿರಲಿಲ್ಲ ಎನ್ನುವ ಗೆಳೆಯನ ಮಾತು ಕೇಳಿ ಹೃದಯತುಂಬಿ ಬಂತು. ಭಾರತದ ಕುರಿತು ಹೆಮ್ಮೆ ಪಡಲು ಇನ್ನೇನು ಬೇಕು ಎನ್ನುತ್ತಾರೆ ಮಹ್ಮದ್ ನಝರ್.
Related Articles
-ಮಹ್ಮದ್ ನಝರ್, ದುಬಾೖ
Advertisement