Advertisement
ಶುಕ್ರವಾರ ನೆತನ್ಯಾಹು ಎರಡು ನಕ್ಷೆಗಳನ್ನು ತೋರಿಸುತ್ತಾ ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದು ಕಂಡುಬಂತು. ಬಲಕೈಯ್ಯಲ್ಲಿ ಮಧ್ಯಪ್ರಾಚ್ಯ ರಾಷ್ಟ್ರಗಳ ಮ್ಯಾಪ್ ಇದ್ದು, ಅದರಲ್ಲಿ ಇರಾನ್, ಇರಾಕ್, ಸಿರಿಯಾ ಮತ್ತು ಯೆಮನ್‌ಗೆ ಕಪ್ಪು ಬಣ್ಣ ಬಳಿಯಲಾಗಿತ್ತು. ಜತೆಗೆ “ದಿ ಕರ್ಸ್'(ಶಾಪ) ಎಂದು ಬರೆಯಲಾಗಿತ್ತು. ಅದೇ ರೀತಿ, ಎಡಗೈಯ್ಯಲ್ಲಿ ಈಜಿಪ್ಟ್, ಸುಡಾನ್, ಸೌದಿ ಅರೇಬಿಯಾ ಮತ್ತು ಭಾರತದ ನಕ್ಷೆಗಳಿಗೆ ಹಸುರು ಬಣ್ಣ ಬಳಿದು, “ದಿ ಬ್ಲೆಸ್ಸಿಂಗ್'(ವರ) ಎಂದು ಶೀರ್ಷಿಕೆ ನೀಡಲಾಗಿತ್ತು. ಇರಾನ್ ಮತ್ತು ಅದರ ಮಿತ್ರರಾಷ್ಟ್ರಗಳೇ ಈಗ ನಡೆಯುತ್ತಿರುವ ಸಂಘರ್ಷಗಳಿಗೆ ಕಾರಣ ಎಂದು ನೆತನ್ಯಾಹು ಹೇಳಿದರು. ಲೆಬನಾನ್‌ನಲ್ಲಿ ಹೆಜ್ಬುಲ್ಲಾಗೆ, ಗಾಜಾದಲ್ಲಿ ಹಮಾಸ್‌ಗೆ ಮತ್ತು ಯೆಮೆನ್‌ನಲ್ಲಿ ಹೌತಿ ಉಗ್ರರಿಗೆ ಇರಾನ್ ಹಣಕಾಸಿನ ಮತ್ತು ಸೇನಾ ನೆರವು ನೀಡಿದ್ದರಿಂದಲೇ ಈ ಪ್ರದೇಶದಲ್ಲಿ ಈಗ ಅಸ್ಥಿರತೆ ಉಂಟಾಗಿದೆ ಎಂದರು.
ವಿಶೇಷವೆಂದರೆ, ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ನಲ್ಲಿ ನೆತನ್ಯಾಹು ಪ್ರದರ್ಶಿಸಿದ ಎರಡೂ ನಕ್ಷೆಯಲ್ಲೂ “ಪ್ಯಾಲೆಸ್ತೀನ್’ ಅನ್ನು ಸಂಪೂರ್ಣವಾಗಿ ಅಳಿಸಿಹಾಕಲಾಗಿತ್ತು. ಆ ಮೂಲಕ ಅಂಥದ್ದೊಂದು ದೇಶ ಅಸ್ತಿತ್ವದಲ್ಲೇ ಇಲ್ಲ ಎಂಬಂತೆ ಬಿಂಬಿಸುವ ಪ್ರಯತ್ನ ನಡೆಯಿತು. ಇಸ್ರೇಲ್ ಪ್ರಧಾನಿ ನೆತನ್ಯಾಹು ಭಾಷಣದ ವೇಳೆ ಹಲವು ರಾಜತಾಂತ್ರಿಕ ಅಧಿಕಾರಿಗಳು ಪ್ರತಿಭಟನಾರ್ಥವಾಗಿ ಸಭಾತ್ಯಾಗ ಮಾಡಿದ್ದು ಕಂಡುಬಂತು.