Advertisement

ಕ್ಲೀನರ್,ಚಾಲಕನಾಗಿದ್ದ ಹುಡುಗ ಹೊಸಅಲೆ ಸಿನಿಮಾದ ನಿರ್ದೇಶಕರಾಗಿಬಿಟ್ಟರು

01:19 PM Nov 22, 2018 | Sharanya Alva |

ಕನ್ನಡ ಚಿತ್ರರಂಗ ಕಂಡ ಅಪ್ರತಿಮ ನಿರ್ದೇಶಕ. ಕನ್ನಡ ಮಾತ್ರವಲ್ಲ ಹಿಂದಿ, ಮಲಯಾಳಂ ಸಿನಿಮಾಗಳನ್ನೂ ನಿರ್ದೇಶಿಸಿ ಸೈ ಎನ್ನಿಸಿಕೊಂಡಿದ್ದರು ಸುಬ್ರವೇಷ್ಠಿ ರಾಮಸ್ವಾಮಯ್ಯ ಸೀತಾರಾಮ ಶರ್ಮಾ! ಅರೇ ಇದ್ಯಾರಪ್ಪ ಅಂತ ಹುಬ್ಬೇರಿಸಬೇಡಿ. ಇವರು ಬೇರಾರು ಅಲ್ಲ…ಅವರೇ ಚಿತ್ರ ಬ್ರಹ್ಮ..ಎಸ್.ಆರ್.ಪುಟ್ಟಣ್ಣ ಕಣಗಾಲ್. ಭಾರತೀಯ ಸಿನಿಮಾರಂಗದ ಅತ್ಯದ್ಭುತ ನಿರ್ದೇಶಕರಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದವರು ಕಣಗಾಲ್. ಪಿರಿಯಾಪಟ್ಟಣ ತಾಲೂಕಿನ ಕಣಗಾಲ್ ನಲ್ಲಿ ಜನಿಸಿದ್ದ ಪುಟ್ಟಣ್ಣ ಕನ್ನಡ ಚಿತ್ರರಂಗದ ಮೇರು ನಿರ್ದೇಶಕನಾಗಿ ಬೆಳೆದ ಸಾಧನೆಯ ಹಿಂದೆ ಅಪಾರ ಶ್ರಮವಿದೆ.

Advertisement

ಕ್ಲೀನರ್ ಆಗಿದ್ದ ಹುಡುಗ ನಿರ್ದೇಶಕನಾಗಿಬಿಟ್ಟಿದ್ದ!

ಕನ್ನಡ ಚಿತ್ರರಂಗದ ಚಿತ್ರಬ್ರಹ್ಮ, ಪ್ರಸಿದ್ಧ, ಶ್ರೇಷ್ಠ ನಿರ್ದೇಶಕ ಎಂಬ ಬಿರುದಾವಳಿಯಿಂದ ಕರೆಯಿಸಿಕೊಳ್ಳುತ್ತಿದ್ದ ಕಣಗಾಲ್ ಅವರು ಚಿಕ್ಕಂದಿನಲ್ಲಿ ತುಂಬಾ ಕಷ್ಟದ ಜೀವನ ನಡೆಸಿದ್ದರು. ಹೊಟ್ಟೆಪಾಡಿಗಾಗಿ ಕಂಪನಿ ನಾಟಕದ ಪ್ರಚಾರದ ಹುಡುಗನಾಗಿ ಊರೂರು ಸುತ್ತುತ್ತಿದ್ದರಂತೆ. ಅದೂ ಅಲ್ಲದೇ ಹೋಟೆಲ್ ಕ್ಲೀನರ್ ಕೆಲಸ, ಸೇಲ್ಸ್ ಮೆನ್ ಆಗಿಯೂ ಪುಟ್ಟಣ್ಣ ದುಡಿದಿದ್ದರು. ಹೀಗೆ ನಾಟಕದ ಪ್ರಚಾರ ಮಾಡುತ್ತಿದ್ದ ಹುಡುಗ ನಿಧಾನಕ್ಕೆ ನಾಟಕ ಕಂಪನಿ ಮತ್ತು ಸಿನಿಮಾ ಜಗತ್ತು ಪ್ರವೇಶಿಸುವಂತಾಯಿತು.

ನಾಟಕ ಕಂಪನಿಯಲ್ಲಿದ್ದಾಗ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಬಿಆರ್ ಪಂತುಲು ಅವರ ಪರಿಚಯವಾಗಿತ್ತಂತೆ..ಹೀಗೆ ಪಂತುಲು ಅವರ ಜೊತೆ 1954ರಲ್ಲಿ ಡೈಲಾಗ್ ಕೋಚ್ ಆಗಿ ಪುಟ್ಟಣ್ಣ ಸೇರಿಕೊಂಡಿದ್ದರು. ಪಂತುಲು ಅವರ ಸಹಾಯಕರೂ ಹೌದು, ಜೊತೆಗೆ ಅವರ ಕಾರಿನ ಚಾಲಕನಾಗಿಯೂ ಪುಟ್ಟಣ್ಣ ಕೆಲಸ ಮಾಡಿದ್ದರು! ನಂತರ ಪದ್ಮಿನಿ ಪಿಕ್ಚರ್ಸ್ ನ ಸಹಾಯಕ ನಿರ್ದೇಶಕರಾಗಿ ಭಡ್ತಿ ಪಡೆದಿದ್ದರು.

Advertisement

ಕನ್ನಡ ಚಿತ್ರರಂಗದಲ್ಲಿ ಹೊಸತನದ ಅಲೆ ಎಬ್ಬಿಸಿದವರು ಪುಟ್ಟಣ್ಣ!

1957ರಲ್ಲಿ ಪುಟ್ಟಣ್ಣ ಕಣಗಾಲ್ ಅವರು ರತ್ನಗಿರಿ ರಹಸ್ಯ ಸಿನಿಮಾದಲ್ಲಿ ಮೊದಲ ಬಾರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಹೀಗೆ 60-70ರ ದಶಕದಲ್ಲಿ ಕನ್ನಡ ಚಿತ್ರರಂಗ ಒಂದು ಸಂಪ್ರದಾಯದ ಚೌಕಟ್ಟಿನಲ್ಲಿಯೇ ಸಿನಿಮಾ ನಿರ್ದೇಶನ ಮಾಡಿಕೊಂಡು ಬಂದಿತ್ತು. ಪುಟ್ಟಣ್ಣ ಮಹಿಳಾ ಪ್ರಧಾನ ಮತ್ತು ದುರಂತ ಅಂತ್ಯವನ್ನು ತಮ್ಮ ಸಿನಿಮಾದಲ್ಲಿ ತೋರಿಸುವ ಮೂಲಕ ಹೊಸ ಟ್ರೆಂಡ್ ಹುಟ್ಟು ಹಾಕಿದ್ದರು. ಅಷ್ಟೇ ಅಲ್ಲ ರಂಗನಾಯಕಿಯಂತಹ ಚಿತ್ರದಲ್ಲಿ ತಾಯಿಯನ್ನೇ ಮೋಹಿಸುವ ಮಗನ ಕಥೆ, ಧರ್ಮಸೆರೆ, ಎಡಕಲ್ಲು ಗುಡ್ಡದ ಮೇಲೆ ಹೀಗೆ ಭಾರತೀಯ ಮನೋಧರ್ಮಕ್ಕೆ ವಿರುದ್ಧವಾದ ಕಥೆಗಳನ್ನೇ ಹೆಣೆದು ಮಹಿಳಾ ಪ್ರೇಕ್ಷಕರ ಮನಗೆದ್ದ ಅಪರೂಪದ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ!

ಪುಟ್ಟಣ್ಣ ಕಣಗಾಲ್ ಅವರ ಶುಭಮಂಗಳ, ಧರ್ಮಸೆರೆ, ಮಾನಸ ಸರೋವರ, ಗೆಜ್ಜೆ ಪೂಜೆ, ನಾಗರಹಾವು, ಶರಪಂಜರ, ಕಪ್ಪು ಬಿಳುಪು, ಪಡುವಾರಹಳ್ಳಿ ಪಾಂಡವರು, ಬಿಳಿ ಹೆಂಡ್ತಿ, ಶುಭಮಂಗಳ, ಅಮೃತಗಳಿಗೆಯಂತಹ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲುಗಳಾಗಿವೆ. ಕಟ್ಟು ನಿಟ್ಟಿನ, ಶಿಸ್ತಿನ ಸಿಪಾಯಿಯಂತಿದ್ದ ಪುಟ್ಟಣ್ಣ ಅವರ ಗರಡಿಯಲ್ಲಿ ಬೆಳೆದ ಕಲ್ಪನಾ, ಆರತಿ, ಜಯಂತಿ, ಪದ್ಮಾವಾಸಂತಿ, ಶ್ರೀನಾಥ್, ರಜನಿಕಾಂತ್, ವಿಷ್ಣುವರ್ಧನ್, ಅಂಬರೀಶ್, ಜೈ ಜಗದೀಶ್, ಚಂದ್ರಶೇಖರ್, ಶಿವರಾಮ್, ವಜ್ರಮುನಿ, ಶ್ರೀಧರ್, ರಾಮಕೃಷ್ಣ, ಅಪರ್ಣಾ(ಟಿವಿ ಆ್ಯಂಕರ್) ದೊಡ್ಡ ನಟ, ನಟಿಯರಾಗಿ ಮಿಂಚಿದ್ದಾರೆ. ಇವರೆಲ್ಲರನ್ನೂ ಚಿತ್ರರಂಗಕ್ಕೆ ಕರೆತಂದು ದೊಡ್ಡ ನಟ, ನಟಿಯರನ್ನಾಗಿ ಮಾಡಿದ್ದ ಕೀರ್ತಿ ಪುಟ್ಟಣ್ಣ ಕಣಗಾಲ್ ಅವರದ್ದು! ಪುಟ್ಟಣ್ಣನವರ ಬಗ್ಗೆ ಡಾ.ವಿಷ್ಣುವರ್ಧನ್ ಅವರಿಗೆ ಅಪಾರವಾದ ಭಕ್ತಿ, ಗೌರವವಿತ್ತು. ನನ್ನ ಪಾಲಿಗೆ ದೇವರೇ ಕಳುಹಿಸಿಕೊಟ್ಟ ಗುರು ಪುಟ್ಟಣ್ಣ ಕಣಗಾಲ್ ಸರ್ ಎಂದು ವಿಷ್ಣುವರ್ಧನ್ ಹೇಳುತ್ತಿದ್ದರಂತೆ!

ಪುಟ್ಟಣ್ಣ ತಾಕತ್ತು…ಕನ್ನಡ ಸಿನಿಮಾ ತಮಿಳಿಗೆ ರಿಮೇಕ್ ಆಗುತ್ತಿತ್ತು!

ಪುಟ್ಟಣ್ಣ ಕಣಗಾಲ್ ಅವರ ಪ್ರತಿಭೆ ಕೇವಲ ಒಂದೇ ಭಾಷೆಗೆ ಸೀಮಿತವಾಗಿರಲಿಲ್ಲ. ಅವರ ನಿರ್ದೇಶನದ ಚಾಕಚಕ್ಯತೆಗೆ ಸಾಕ್ಷಿ ಎಂಬಂತೆ ಅವರು 1964ರಲ್ಲಿ ಸ್ಕೂಲ್ ಮಾಸ್ಟರ್ ಎಂಬ ಸಿನಿಮಾವನ್ನು ಮಲಯಾಳಂನಲ್ಲಿ ನಿರ್ದೇಶಿಸಿದ್ದರು. ಕನ್ನಡದಲ್ಲಿ ಮೊತ್ತ ಮೊದಲು ನಿರ್ದೇಶಿಸಿದ ಸಿನಿಮಾ ಬೆಳ್ಳಿ ಮೋಡ ಅದು 1967ನೇ ಇಸವಿಯಲ್ಲಿ. ನಂತರ ಕನ್ನಡದ ಕಾದಂಬರಿಗಾರ್ತಿ ತ್ರಿವೇಣಿ ಅವರ ಕಾದಂಬರಿಯಾಧಾರಿತ ಬೆಕ್ಕಿನ ಕಣ್ಣು ಸಿನಿಮಾವನ್ನು ಮಲಯಾಳಂನಲ್ಲಿ (ಫೂಂಚಾಕ್ಕಣ್ಣಿ) ನಿರ್ದೇಶಿಸುವ ಮೂಲಕ ತೆರೆಗೆ ಬಂದಿತ್ತು.

ತನಗಿಂತ ವಯಸ್ಸಿನಲ್ಲಿ ಚಿಕ್ಕವರಾಗಿದ್ದರೂ ಕೂಡಾ ತನಗೆ ನಿರ್ದೇಶನದಲ್ಲಿ ಪುಟ್ಟಣ್ಣ ಕಣಗಾಲ್ ಅವರೇ ಗುರು ಎಂದು ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಕೆ.ಬಾಲಚಂದರ್ ಅವರು ಮಾಧ್ಯಮಗಳಿಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು. ಅದಕ್ಕೆ ಸಾಕ್ಷಿ  ಎಂಬಂತೆ ಅಂದು ಪುಟ್ಟಣ್ಣ ನಿರ್ದೇಶಿಸಿದ್ದ ಬೆಂಕಿಯಲ್ಲಿ ಅರಳಿದ ಹೂ, ಮೌನ ಗೀತೆ ಸೇರಿದಂತೆ ಹಲವು ಸಿನಿಮಾಗಳು ತಮಿಳಿಗೆ ರಿಮೇಕ್ ಆಗಿದ್ದು.!

1981ರಲ್ಲಿ ಹಿಂದಿಯ ಹಮ್ ಪಾಂಚ್, 1978ರಲ್ಲಿ ಜಹ್ರೀಲಾ ಇನ್ಸಾನ್, ಮಲಯಾಳಂನ ಕಳಜ್ಞು ಕಿಟ್ಟಿಯ ತಂಗಂ, ಮೇಯರ್ ನಾಯರ್, ಸ್ವಪ್ನಭೂಮಿ ಸಿನಿಮಾಗಳನ್ನು ಪುಟ್ಟಣ್ಣ ನಿರ್ದೇಶಿಸಿದ್ದರು.

ಚೆಲುವೆ ಆರತಿಯ ಪ್ರೇಮಪಾಶಕ್ಕೆ ಬಿದ್ದು ಮದುವೆಯಾದ ಪುಟ್ಟಣ್ಣ!

ತಮ್ಮ ಕಿರಿಯ ವಯಸ್ಸಿನಲ್ಲಿಯೇ ಪುಟ್ಟಣ್ಣ ಕಣಗಾಲ್ ಅವರು ನಾಗಲಕ್ಷ್ಮಿ ಜೊತೆ ವಿವಾಹವಾಗಿದ್ದರು. ಈ ದಂಪತಿಗೆ ಐವರು ಮಕ್ಕಳಿದ್ದರು. ಆದರೆ ಸ್ಟಾರ್ ನಿರ್ದೇಶಕರ ಪಟ್ಟ ಗಿಟ್ಟಿಸಿಕೊಂಡಿದ್ದ ಪುಟ್ಟಣ್ಣ ಅವರು ಅಂದಿನ ಹೆಸರಾಂತ ನಟಿ ಆರತಿಯ ಪ್ರೇಮಪಾಶದೊಳಕ್ಕೆ ಬಿದ್ದಿದ್ದರು.

1970ರ ದಶಕದಲ್ಲಿ ಪುಟ್ಟಣ್ಣ ನಟಿ ಆರತಿಯನ್ನು ಅತೀಯಾಗಿ ಪ್ರೀತಿಸತೊಡಗಿದ್ದರು. ಹೆಂಡತಿ ನಾಗಲಕ್ಷ್ಮಿ ಇದಕ್ಕೆ ಮೂಖಸಾಕ್ಷಿಯಾಗಿದ್ದರು. ಅಂತೂ 1976ರಲ್ಲಿ ಪುಟ್ಟಣ್ಣ ಆರತಿಯನ್ನು ವಿವಾಹವಾಗಿದ್ದರು. 1977ರಲ್ಲಿ ಯಶಸ್ವಿನಿ ಎಂಬ ಹೆಣ್ಣು ಮಗು ಜನಿಸಿತ್ತು. ಆರತಿಯನ್ನು ಹಾಕಿಕೊಂಡು ಮಾಡಿದ್ದ ಸಿನಿಮಾಗಳೂ ಕೂಡಾ ಭರ್ಜರಿ ಹಿಟ್ ಆಗಿದ್ದವು. ವಿಪರ್ಯಾಸ ಎಂಬಂತೆ ಇಬ್ಬರ ನಡುವಿನ ವೈಮನಸ್ಸು ಹೆಚ್ಚಾದ ಪರಿಣಾಮ 1981ರಲ್ಲಿ ಪುಟ್ಟಣ್ಣ ಮತ್ತು ಆರತಿ ನಾನೊಂದು ತೀರ, ನೀನೊಂದು ತೀರ ಆಗಿಬಿಟ್ಟಿದ್ದರು!

1981ರಲ್ಲಿ ರಂಗನಾಯಕಿ ಸಿನಿಮಾ ಕೂಡಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿಬಿಟ್ಟಿತ್ತು. ಬೆಂಗಳೂರಿನಲ್ಲಿ ಆರತಿ ಕಟ್ಟಿಸಿದ್ದ ಮನೆಗೆ ಚಿತ್ರರಂಗದ ಘಟಾನುಘಟಿ ನಟ, ನಟಿಯರಿಗೆ ಆಹ್ವಾನ ನೀಡಿದ್ದರೂ ಕೂಡಾ ಪುಟ್ಟಣ್ಣ ಕಣಗಾಲ್ ಗೆ ಮಾತ್ರ ಆಹ್ವಾನ ನೀಡಿರಲಿಲ್ಲವಂತೆ! ಆರತಿ ಪುಟ್ಟಣ್ಣ ಅವರ ಬದುಕಿನಿಂದ ದೂರ ಹೋದ ಮೇಲೆ ಅವರ ಆರೋಗ್ಯ ಹದಗೆಟ್ಟಿತ್ತು. 1980-1982ರ ಸುಮಾರು 14 ತಿಂಗಳ ಕಾಲ ಪುಟ್ಟಣ್ಣ ಬರೀಗೈಯಲ್ಲಿ ನಿರ್ದೇಶನವಿಲ್ಲದೇ ಕಾಲ ಕಳೆದಿದ್ದರಂತೆ!

ಈ ಎಲ್ಲಾ ಜಂಜಾಟಗಳ ನಡುವೆ 1987ರಲ್ಲಿ ಆರತಿ ಕನ್ನಡ ಚಿತ್ರರಂಗವನ್ನು ತೊರೆದು ಮಗಳ ಜೊತೆ ಅಮೆರಿಕಕ್ಕೆ ತೆರಳಿದ್ದರು. ಚಂದ್ರಶೇಖರ್ ದೇಸಾಯಿಗೌಡರ್ ಜೊತೆ ವಿವಾಹವಾದ ಆರತಿಗೆ ಎರಡನೇ ಮಗಳು ಜನಿಸಿದ್ದಳು. ಇದೀಗ ದೊಡ್ಡ ಮಗಳು “ಯಶಸ್ವಿನಿ” ಚಿತ್ರಕಥೆ ಬರೆದ ಮಿಠಾಯಿ ಮನೆ ಸಿನಿಮಾವನ್ನು ಆರತಿ ನಿರ್ದೇಶಿಸಿದ್ದರು. ಮಿಠಾಯಿ ಮನೆ ಸಿನಿಮಾಕ್ಕೆ ಕರ್ನಾಟಕ ರಾಜ್ಯದ ಉತ್ತಮ ಮಕ್ಕಳ ಚಿತ್ರ ಪ್ರಶಸ್ತಿಯನ್ನೂ ಗೆದ್ದುಕೊಂಡಿತ್ತು.

ಮಸಣದ ಹೂ ಸಿನಿಮಾದ ನಿರ್ದೇಶನದ ಮಧ್ಯೆಯೇ ಇಹಲೋಕ ತ್ಯಜಿಸಿದ ಕಣಗಾಲ್..

ವೈಯಕ್ತಿಕ ಬದುಕಿನ ನೋವು, ಹತಾಶೆಯಿಂದ ಕಂಗೆಟ್ಟು ಹೋಗಿದ್ದ ಪುಟ್ಟಣ್ಣನವರು ಮಸಣದ ಹೂವು ಸಿನಿಮಾವನ್ನು ನಿರ್ದೇಶಿಸುತ್ತಿದ್ದರು. ಆದರೆ ಚಿತ್ರ ಪೂರ್ಣಗೊಳ್ಳುವ ಮೊದಲೇ ಪುಟ್ಟಣ್ಣ ಕಣಗಾಲ್ ಅವರು 1985ರ ಜೂನ್ 5ರಂದು ವಿಧಿವಶರಾಗಿದ್ದರು. ತದನಂತರ ಅವರ ಶಿಷ್ಯ, ಗೆಳೆಯ ಕೆಎಸ್ ಎಲ್ ಸ್ವಾಮಿ ಚಿತ್ರದ ನಿರ್ದೇಶನ ಪೂರ್ಣಗೊಳಿಸಿದ್ದರು. ಈ ಸಿನಿಮಾ ಹಿಟ್ ಆಗಿತ್ತು. ಆದರೆ ಅದನ್ನು ನೋಡಲು ಪುಟ್ಟಣ್ಣನ್ನೇ ಇರಲಿಲ್ಲ!ಆದರೆ ಹೊಸ ದೃಷ್ಟಿಕೋನದ ಸಿನಿಮಾಗಳ ಮೂಲಕ ಅವರು ಇಂದಿಗೂ ನಮ್ಮ ಜೊತೆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next