Advertisement

ಪಿಂಕ್‌ ಬಾಲ್‌ನಲ್ಲಿ ವೈಟ್‌ವಾಶ್‌ ಸ್ಕೆಚ್‌

09:41 AM Nov 23, 2019 | Sriram |

ಕೋಲ್ಕತಾ: ಮಾಜಿ ಕ್ರಿಕೆಟ್‌ ನಾಯಕ ಹಾಗೂ ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರ ಪ್ರಯತ್ನದ ಫ‌ಲವಾಗಿ ಶುಕ್ರವಾರ ಭಾರತೀಯ ಟೆಸ್ಟ್‌ ಕ್ರಿಕೆಟ್‌ ನೂತನ ಎತ್ತರವನ್ನು ತಲುಪಲಿದೆ. ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಟೀಮ್‌ ಇಂಡಿಯಾ ತನ್ನ ಟೆಸ್ಟ್‌ ಇತಿಹಾಸದ ಪ್ರಪ್ರಥಮ ಹಗಲು-ರಾತ್ರಿ ಟೆಸ್ಟ್‌ ಪಂದ್ಯವನ್ನು ಆಡಲಿದೆ. ಇದಕ್ಕೆ ಐತಿಹಾಸಿಕ “ಈಡನ್‌ ಗಾರ್ಡನ್ಸ್‌’ ಅಂಗಳ ಸಾಕ್ಷಿಯಾಗಲಿದೆ.

Advertisement

2015ರಿಂದ ಮೊದಲ್ಗೊಂಡು ಈವರೆಗೆ 11 ಡೇ-ನೈಟ್‌ ಟೆಸ್ಟ್‌ ಪಂದ್ಯಗಳನ್ನು ಆಡಲಾಗಿದೆಯಾದರೂ ಭಾರತ ಇದರಲ್ಲಿ ಪಾಲ್ಗೊಂಡಿರಲಿಲ್ಲ. ಕಳೆದ ಆಸ್ಟ್ರೇಲಿಯ ಪ್ರವಾಸದ ವೇಳೆ ಅಡಿಲೇಡ್‌ನ‌ಲ್ಲಿ ಇದಕ್ಕೆ ವೇದಿಕೆಯೊಂದನ್ನು ನಿರ್ಮಿಸಲಾಯಿತಾದರೂ ಬಿಸಿಸಿಐ ಒಪ್ಪಲಿಲ್ಲ. ತವರಲ್ಲೂ ಹಗಲು-ರಾತ್ರಿ ಟೆಸ್ಟ್‌ ಆಡಲು ಭಾರತ ನಿರಾಕರಿಸುತ್ತಲೇ ಬಂದಿತ್ತು. ಆದರೆ ಹೊಸ ಹೊಸ ಯೋಜನೆಗಳನ್ನು ತಲೆಯಲ್ಲಿ ತುಂಬಿಸಿಕೊಂಡು ಬಂದಿರುವ ಸೌರವ್‌ ಗಂಗೂಲಿ ಈ ಪ್ರಯತ್ನದಲ್ಲಿ ಕ್ಷಿಪ್ರ ಯಶಸ್ಸು ಸಾಧಿಸಿದರು.
ಮೂಲ ವೇಳಾಪಟ್ಟಿ ಪ್ರಕಾರ ಇದು ಡೇ-ನೈಟ್‌ ಟೆಸ್ಟ್‌ ಆಗಿರಲಿಲ್ಲ. ಆದರೆ ಸೌರವ್‌ ಗಂಗೂಲಿ ಮೊದಲು ಬಾಂಗ್ಲಾ ಕ್ರಿಕೆಟ್‌ ಮಂಡಳಿಯೊಂದಿಗೆ ಚರ್ಚಿಸಿದರು. ಅಲ್ಲಿಂದ ಹಸಿರು ನಿಶಾನೆ ಸಿಕ್ಕಿತು. ಬಳಿಕ ಕ್ಯಾಪ್ಟನ್‌ ಕೊಹ್ಲಿ ಮೂರೇ ನಿಮಿಷದಲ್ಲಿ ಅನುಮೋದನೆ ನೀಡಿದರು. ಹೀಗೆ ಗಂಗೂಲಿ ತವರಲ್ಲೇ “ಪಿಂಕ್‌ ಬಾಲ್‌ ಟೆಸ್ಟ್‌’ ನಡೆಯುವಂತಾಯಿತು!

ಕೇವಲ ಟೆಸ್ಟ್‌ ಪಂದ್ಯವಲ್ಲ...
ಇದು ಕೇವಲ ಟೆಸ್ಟ್‌ ಪಂದ್ಯವಲ್ಲ, ಹಲವು ಕ್ರಿಕೆಟ್‌ ಕಾರ್ಯಕ್ರಮಗಳ ಸಂಗಮವೂ ಹೌದು. ಇಲ್ಲಿ ಗಣ್ಯರ ಉಪಸ್ಥಿತಿ ಇರುತ್ತದೆ. ಯೋಧರು ಬರುತ್ತಾರೆ. ಇತಿಹಾಸದ ಮೆಲುಕಾಟವಿದೆ. ಚಾಟ್‌ ಶೋ ನಡೆಸಲಾಗುತ್ತದೆ. ಕ್ರೀಡಾತಾರೆಗಳಿಗೆ ಸಮ್ಮಾನವಿದೆ. ವಿಶೇಷ ಲಾಂಛನ ಪಿಂಕು-ಟಿಂಕು ಕಂಪೆನಿ ಕೊಡುತ್ತಾರೆ. ಇದನ್ನೆಲ್ಲ ಸವಾಲಾಗಿ ಸ್ವೀಕರಿಸಿರುವ ಬಂಗಾಲ ಕ್ರಿಕೆಟ್‌ ಮಂಡಳಿ (ಕ್ಯಾಬ್‌), ಡೇ-ನೈಟ್‌ ಟೆಸ್ಟ್‌ ಪಂದ್ಯವನ್ನು ಯಶಸ್ವಿಗೊಳಿಸುವ ತುಂಬು ಆತ್ಮವಿಶ್ವಾಸದಲ್ಲಿದೆ.

ಒಂದು ಗಂಟೆಗೆ ಆರಂಭ
ಈ ಟೆಸ್ಟ್‌ ಪಂದ್ಯ ಅಪರಾಹ್ನ ಒಂದು ಗಂಟೆಗೆ ಆರಂಭವಾಗಿ ರಾತ್ರಿ 8 ಗಂಟೆ ತನಕ ಸಾಗುತ್ತದೆ. 3ರಿಂದ 3.20ರ ತನಕ 20 ನಿಮಿಷಗಳ ಚಹಾ ವಿರಾಮ ಇರುತ್ತದೆ. ಬಳಿಕ 3.20ರಿಂದ 5.20ರ ತನಕ ಪಂದ್ಯ ಸಾಗುತ್ತದೆ. 5.20ರಿಂದ 6 ಗಂಟೆ ತನಕ 40 ನಿಮಿಷಗಳ “ಸೂಪರ್‌ ಬ್ರೇಕ್‌’. 6ರಿಂದ 8 ಗಂಟೆ ತನಕ ಅಂತಿಮ ಅವಧಿಯ ಆಟ ಸಾಗುತ್ತದೆ. ಬ್ರೇಕ್‌ ವೇಳೆ ನಾನಾ ಕಾರ್ಯಕ್ರಮಗಳು ವೀಕ್ಷಕರ ಮನ ತಣಿಸಲಿವೆ.

5 ದಿನಗಳ ಕಾಲ ಸಾಗೀತೇ?
ಇಂದೋರ್‌ ಟೆಸ್ಟ್‌ ಪಂದ್ಯವನ್ನು ಮೂರೇ ದಿನಗಳಲ್ಲಿ ಇನ್ನಿಂಗ್ಸ್‌ ಅಂತರದಿಂದ ಗೆದ್ದಿರುವ ಭಾರತ, ಪಿಂಕ್‌ ಬಾಲ್‌ನಲ್ಲಿ ವೈಟ್‌ವಾಶ್‌ಗೆ ಸ್ಕೆಚ್‌ ಹಾಕಿರುವುದು ಗುಟ್ಟೇನಿಲ್ಲ. ಕೊಹ್ಲಿ ಪಡೆಯಿಂದ ಇದು ಅಸಾಧ್ಯವೂ ಅಲ್ಲ. ಆದರೆ ಇಷ್ಟೊಂದು ಅದ್ದೂರಿಯಾಗಿ ನಡೆಯಲ್ಪಡುವ ಈ ಹೊನಲು ಬೆಳಕಿನ ಟೆಸ್ಟ್‌ ಪಂದ್ಯ 5 ದಿನಗಳ ಕಾಲ ಸಾಗೀತೇ ಎಂಬುದೊಂದು ಪ್ರಶ್ನೆ! ಕಾರಣ, ಭಾರತದ ಪ್ರಾಬಲ್ಯ ಹಾಗೂ ಬಾಂಗ್ಲಾದ ದೌರ್ಬಲ್ಯ.
ತವರಲ್ಲಿ ಸತತ 12ನೇ ಸರಣಿಯನ್ನು ವಶಪಡಿಸಿಕೊಳ್ಳುವ ಯೋಜನೆಯಲ್ಲಿರುವ ಭಾರತ ಈ ಪಂದ್ಯಕ್ಕಾಗಿ ಆಡುವ ಬಳಗದಲ್ಲಿ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇಲ್ಲ. ಬಾಂಗ್ಲಾ ತಂಡದಲ್ಲಿ ಒಂದೆರಡು ಪರಿವರ್ತನೆ ಸಂಭವಿಸಬಹುದು. ಯಾರೇ ಬಂದರೂ ಈ ಬಾಂಗ್ಲಾ ತಂಡ ಯಾವ ರೀತಿಯಲ್ಲೂ ಭಾರತಕ್ಕೆ ಸಾಟಿಯಾಗದು.

Advertisement

ರಾತ್ರಿ ಪಂದ್ಯಗಳು ನೀಡುವ ಅನುಭವ ಬಹಳ ಭಿನ್ನ. ಶಾಂತ, ತಣ್ಣನೆಯ ವಾತಾವರಣ.ಆರಂಭದಲ್ಲಿ ಹಗಲು-ರಾತ್ರಿ ಪಂದ್ಯಗಳ ಬಗ್ಗೆ ಅಸಡ್ಡೆಯಿತ್ತು.

ಈಗ ಶೇ. 90ರಷ್ಟು ಸೀಮಿತ ಓವರ್‌ಗಳ ಪಂದ್ಯಗಳು ಹಗಲು-ರಾತ್ರಿ ಮಾದರಿಯಲ್ಲೇ ನಡೆಯುತ್ತವೆ. ಟಿ20 ಪಂದ್ಯಗಳನ್ನಂತೂ ಪೂರ್ತಿ ರಾತ್ರಿ ವೇಳೆಯೇ ಆಡಲಾಗುತ್ತದೆ. ಟೆಸ್ಟ್‌ ನಲ್ಲಿ 2015ರಲ್ಲಿ ಇಂಥದೊಂದು ಯೋಜನೆ ಜಾರಿ ಯಾಯಿತು. ಅಲ್ಲಿಂದ ನಿಧಾನಕ್ಕೆ ಡೇ-ನೈಟ್‌ ಟೆಸ್ಟ್‌ ಪಂದ್ಯಗಳ ಮೇಲಿನ ಆಸಕ್ತಿ ಹೆಚ್ಚಾಗುತ್ತಿದೆ. ಇದೀಗ ಭಾರತದ ಸರದಿ…


ಪಿಂಕ್‌ ಆದವೋ ಎಲ್ಲ…
ಐತಿಹಾಸಿಕ ಡೇ-ನೈಟ್‌ ಟೆಸ್ಟ್‌ ಪಂದ್ಯಕ್ಕಾಗಿ ಕೋಲ್ಕತಾ ನಗರದ ಪ್ರಮುಖ ಬೀದಿಗಳು, ಕಟ್ಟಡಗಳೆಲ್ಲ ಗುಲಾಲಿ ಬಣ್ಣಕ್ಕೆ ತಿರುಗಿವೆ. ಶಾಹಿದ್‌ ಮಿನಾರ್‌, ಕೋಲ್ಕತಾ ಮುನ್ಸಿಪಲ್‌ ಕಾರ್ಪೋರೇಶನ್‌ ಪಾರ್ಕ್‌ಗಳೆಲ್ಲ ಗುಲಾಲಿ ದೀಪಗಳಿಂದ ಕಂಗೊಳಿಸುತ್ತಿವೆ. ಟಾಟಾ ಸ್ಟೀಲ್‌ ಬಿಲ್ಡಿಂಗ್‌ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದು, “ತ್ರೀಡಿ ಮ್ಯಾಪಿಂಗ್‌’ ಮೂಲಕ ಎಲ್ಲರನ್ನೂ ಸೆಳೆಯುತ್ತಿದೆ.

ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ 17 ನಿಮಿಷಗಳ ಕ್ಲಿಪಿಂಗ್‌ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದು, ಇದರಲ್ಲಿ ಈಡನ್‌ ಗಾರ್ಡನ್ಸ್‌ ಗುಲಾಲಿಮಯವಾಗಿದೆ.

ಪಿಂಕ್‌ ಬಣ್ಣದ ದೈತ್ಯ ಬಲೂನ್‌ ಒಂದನ್ನು ಸ್ಟೇಡಿಯಂನ ಸಮೀಪ ಇರಿಸಲಾಗಿದ್ದು, ಇದು ಪಂದ್ಯ ಮುಗಿಯುವ ತನಕ ಇರುತ್ತದೆ.

ಪಂದ್ಯದ ಲಾಂಛನವಾದ ಪಿಂಕು-ಟಿಂಕು ಲಾಂಛನವನ್ನು ಈಡನ್‌ ಗಾರ್ಡನ್‌ನ ಪ್ರವೇಶ ದ್ವಾರದ ಬಳಿ ಇರಿಸಲಾಗಿದ್ದು, ಗುಲಾಲಿ ಬಣ್ಣದಲ್ಲಿರುವ ಈ ಗೊಂಬೆಗಳು ಮುಖ್ಯ ಅತಿಥಿಗಳಿಗೆ ಸ್ವಾಗತ ಕೋರುತ್ತವೆ.

ಕೋಲ್ಕತಾ ನಗರದಾದ್ಯಂತ ಒಂದು ಡಜನ್‌ನಷ್ಟು ಬೃಹತ್‌ ಜಾಹೀರಾತು ಫ‌ಲಕಗಳನ್ನು ಅಳವಡಿಸಲಾಗಿದೆ. ಎಲ್‌ಇಡಿ ಲೈಟಿಂಗ್‌ ಹೊಂದಿರುವ 6 ಫ‌ಲಕಗಳು ಆಕರ್ಷಣೆಯ ಕೇಂದ್ರಗಳಾಗಿವೆ. ಹಾಗೆಯೇ ಕೆಲವು ಸಾರಿಗೆ ಬಸ್ಸುಗಳು ಟೆಸ್ಟ್‌ ಪ್ರಚಾರ ಹಾಗೂ ಜಾಗೃತಿಯಲ್ಲಿ ತೊಡಗಿದ್ದು, ಬಸ್ಸುಗಳೆಲ್ಲ ಗುಲಾಲಿ ಬಣ್ಣಗಳನ್ನು ಹೊಂದಿರುವುದು ವಿಶೇಷ.

ಟಾಸ್‌ಗೂ ಸ್ವಲ್ಪ ಮುನ್ನ “ಈಡನ್‌ ಗಾರ್ಡನ್ಸ್‌’ಗೆ ಹಾರಿ ಬರಲಿರುವ ಅರೆಸೇನಾಪಡೆಯ ಯೋಧರು ಗುಲಾಲಿ ಚೆಂಡುಗಳನ್ನು ಇತ್ತಂಡಗಳ ನಾಯಕರಿಗೆ ನೀಡುವರು. ಬಳಿಕ ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಗಂಟೆ ಬಾರಿಸುವ ಮೂಲಕ ಪಂದ್ಯವನ್ನು ಉದ್ಘಾಟಿಸುವರು. ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉಪಸ್ಥಿತರಿರುವರು.

ಡೇ-ನೈಟ್‌ ಟೆಸ್ಟ್‌ ಸ್ವಾರಸ್ಯ
-ಭಾರತ,ಬಾಂಗ್ಲಾ ತಂಡಗಳು ಇದೇ ಮೊದಲ ಹಗಲು-ರಾತ್ರಿ ಟೆಸ್ಟ್‌ ಪಂದ್ಯವನ್ನು ಆಡಲಿಳಿಯುತ್ತವೆ. ಇದರೊಂದಿಗೆ ಡೇ-ನೈಟ್‌ ಟೆಸ್ಟ್‌ ಆಡಿದ ರಾಷ್ಟ್ರಗಳ ಸಂಖ್ಯೆ 10ಕ್ಕೆ ಏರಲಿದೆ.
– ಈವರೆಗೆ 11 ಹಗಲು-ರಾತ್ರಿ ಟೆಸ್ಟ್‌ ಪಂದ್ಯಗಳು ನಡೆದಿದ್ದು, ಎಲ್ಲವೂ ಸ್ಪಷ್ಟ ಫ‌ಲಿತಾಂಶ ಕಂಡಿವೆ.
– ಆಸ್ಟ್ರೇಲಿಯ ಆಡಿದ ಐದೂ ಪಂದ್ಯಗಳನ್ನು ಗೆದ್ದು ಅಜೇಯ ದಾಖಲೆ ಹೊಂದಿದೆ. ವೆಸ್ಟ್‌ ಇಂಡೀಸ್‌ ಮೂರೂ ಪಂದ್ಯಗಳಲ್ಲಿ ಸೋತಿದೆ.
– ಈವರೆಗೆ ಅತೀ ಹೆಚ್ಚು 3 ಡೇ-ನೈಟ್‌ ಟೆಸ್ಟ್‌ ಪಂದ್ಯಗಳ ಆತಿಥ್ಯ ವಹಿಸಿದ ಹೆಗ್ಗಳಿಕೆ “ಅಡಿಲೇಡ್‌ ಓವಲ್‌’ಗೆ ಸಲ್ಲುತ್ತದೆ. ಬ್ರಿಸ್ಬೇನ್‌ ಮತ್ತು ದುಬಾೖಯಲ್ಲಿ ತಲಾ 2 ಟೆಸ್ಟ್‌; ಬರ್ಮಿಂಗ್‌ಹ್ಯಾಮ್‌, ಪೋರ್ಟ್‌ ಎಲಿಜಬೆತ್‌, ಆಕ್ಲೆಂಡ್‌ ಮತ್ತು ಬ್ರಿಜ್‌ಟೌನ್‌ನಲ್ಲಿ ಒಂದು ಟೆಸ್ಟ್‌ ನಡೆದಿದೆ.
– ಆಸ್ಟ್ರೇಲಿಯ ಅತೀ ಹೆಚ್ಚು 5 ಹಗಲು-ರಾತ್ರಿ ಟೆಸ್ಟ್‌ ಪಂದ್ಯಗಳನ್ನು ಆಯೋಜಿಸಿದೆ. ನ. 29ರಿಂದ ಆಸ್ಟ್ರೇಲಿಯ-ಪಾಕಿಸ್ಥಾನ ನಡುವಿನ ದ್ವಿತೀಯ ಟೆಸ್ಟ್‌ (ಅಡಿಲೇಡ್‌) ಕೂಡ ಅಹರ್ನಿಶಿಯಾಗಿ ನಡೆಯುತ್ತದೆ.
– ಡೇ-ನೈಟ್‌ ಟೆಸ್ಟ್‌ನಲ್ಲಿ ಅತ್ಯಧಿಕ 456 ರನ್‌ (6 ಇನ್ನಿಂಗ್ಸ್‌) ಬಾರಿಸಿದ ದಾಖಲೆ ಪಾಕಿಸ್ಥಾನದ ಅಜರ್‌ ಅಲಿ ಹೆಸರಲ್ಲಿದೆ. ಇದರಲ್ಲಿ ಒಂದು ತ್ರಿಶತಕ, 2 ಅರ್ಧ ಶತಕ ಸೇರಿದೆ. ಇವರು ವೆಸ್ಟ್‌ ಇಂಡೀಸ್‌ ಎದುರಿನ 2016ರ ದುಬಾೖ ಟೆಸ್ಟ್‌ನಲ್ಲಿ ಅಜೇಯ 302 ರನ್‌ ಬಾರಿಸಿದ್ದು ದಾಖಲೆ.
– ಪಾಕ್‌ನ ಅಸದ್‌ ಶಫೀಕ್‌ ಡೇ-ನೈಟ್‌ ಟೆಸ್ಟ್‌ನಲ್ಲಿ 2 ಶತಕ ಬಾರಿಸಿದ ಏಕೈಕ ಆಟಗಾರ.
– ಅತ್ಯಧಿಕ ವಿಕೆಟ್‌ ಉರುಳಿ ಸಿದ ದಾಖಲೆ ಆಸ್ಟ್ರೇಲಿಯದ ಮಿಚೆಲ್‌ ಸ್ಟಾರ್ಕ್‌ ಅವರದಾಗಿದೆ (26).
– ದೇವೇಂದ್ರ ಬಿಶೂ ಟೆಸ್ಟ್‌ ಪಂದ್ಯವೊಂದಲ್ಲಿ ಅತ್ಯುತ್ತಮ ಬೌಲಿಂಗ್‌ ದಾಖಲಿಸಿದ್ದಾರೆ (ಪಾಕ್‌ ವಿರುದ್ಧ 49ಕ್ಕೆ 8 ವಿಕೆಟ್‌).

ಗುಲಾಲಿ ಚೆಂಡೇ ಯಾಕೆ ಬೇಕು?
ಟೆಸ್ಟ್‌ನಲ್ಲಿ ಕೆಂಪು ಚೆಂಡನ್ನು ಬಳಸಲಾಗುತ್ತದೆ. ರಾತ್ರಿ ಬೆಳಕಿಗೆ ಅವು ಹೊಂದಿಕೊಳ್ಳುವುದಿಲ್ಲ. ಸ್ವಲ್ಪ ಹಳದಿಗೆ ಸಮೀಪವಾಗುವ ರಾತ್ರಿ ಬೆಳಕಿಗೂ, ಕೆಂಪು ಚೆಂಡಿಗೂ ಹೊಂದಾಣಿಕೆ ಬರುವುದಿಲ್ಲ. ಆಗ ಅವು ಸ್ಪಷ್ಟವಾಗಿ ಕಾಣಿಸುವುದಿಲ್ಲ. ಆದರೆ ಗುಲಾಲಿ ಚೆಂಡು ಹಗಲು ಮತ್ತು ರಾತ್ರಿ ಎರಡರ ಬೆಳಕಿಗೂ ಹೊಂದಿಕೊಳ್ಳುತ್ತದೆ. ಅದಕ್ಕೂ ಮಿಗಿಲಾಗಿ ಅದರ ಬಾಳಿಕೆ ಗುಣ ಚೆನ್ನಾಗಿದೆ.

ವಿದ್ಯಮಾನವಾಗಿರಬೇಕೇ ಹೊರತು ನಿತ್ಯ ಮಾದರಿಯಾಗಬಾರದು. ಆಗ ಕೆಂಪು ಚೆಂಡಿನಲ್ಲಿ ಬ್ಯಾಟಿಂಗ್‌ ಆರಂಭಿಸುವ ಸಂತೋಷವನ್ನು ನಾವು ಕಳೆದುಕೊಳ್ಳುತ್ತೇವೆ. ಟೆಸ್ಟ್‌ ಕ್ರಿಕೆಟನ್ನು ನೋಡುವುದು ಒಂದು ಆಯ್ಕೆಯಾಗಿರಬೇಕು, ಅದು ಕಡ್ಡಾಯವಾಗಬಾರದು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಕುತೂಹಲ ಇರಬೇಕೆನ್ನುವುದು ಸತ್ಯ. ಹಾಗಂತ ಮನೋರಂಜನೆಯನ್ನೇ ಮೊದಲ ಆದ್ಯತೆಯಾಗಿಸಿಕೊಳ್ಳಬಾರದು.
-ವಿರಾಟ್‌ ಕೊಹ್ಲಿ

ಸಂಭಾವ್ಯ ತಂಡಗಳು
ಭಾರತ: ರೋಹಿತ್‌ , ಅಗರ್ವಾಲ್‌, ಪೂಜಾರ, ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರವೀಂದ್ರ ಜಡೇಜ, ಸಾಹಾ, ಆರ್‌. ಅಶ್ವಿ‌ನ್‌, ಇಶಾಂತ್‌, ಉಮೇಶ್‌ ಯಾದವ್‌, ಶಮಿ.

ಬಾಂಗ್ಲಾದೇಶ: ಶದ್ಮಾನ್‌ ಇಸ್ಲಾಮ್‌, ಇಮ್ರುಲ್‌ ಕಯೆಸ್‌, ಮೊಮಿನುಲ್‌ ಹಕ್‌ (ನಾಯಕ), ರಹೀಂ, ಮಹಮದುಲ್ಲ, ಮಿಥುನ್‌, ಲಿಟನ್‌ ದಾಸ್‌, ಮೆಹಿದಿ ಹಸನ್‌, ತೈಜುಲ್‌ ಇಸ್ಲಾಮ್‌/ಮುಸ್ತಫಿಜುರ್‌ , ಅಬು ಜಾಯೇದ್‌, ಇದಾಬತ್‌ ಹೊಸೈನ್‌/ಅಲ್‌ ಅಮಿನ್‌ ಹೊಸೈನ್‌.

Advertisement

Udayavani is now on Telegram. Click here to join our channel and stay updated with the latest news.

Next