ಹೊಸದಿಲ್ಲಿ: ಮೆಕ್ಸಿಕೋದಲ್ಲಿ ರವಿವಾರ ಮುಗಿದ ಇಂಟರ್‌ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್‌ಎಸ್‌ಎಫ್) ವರ್ಲ್ಡ್ಕಪ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತ ಪದಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ರವಿವಾರ ಅಖೀಲ್ ಶಿಯೊರನ್ ಅವರ ಬಂಗಾರ ಬೇಟೆಯೊಂದಿಗೆ ಭಾರತ ರೈಫಲ್, ಪಿಸ್ತೂಲ್, ಶಾಟ್‌ಗನ್ ವಿಭಾಗಗಳಲ್ಲಿ ಒಟ್ಟು 4 ಚಿನ್ನ, ಒಂದು ಬೆಳ್ಳಿ ಮತ್ತು 4 ಕಂಚು ಸಹಿತ ಒಟ್ಟು 9 ಪದಕಗಳನ್ನು ಬಾಚಿಕೊಂಡಿದೆ.
ಈ ಕೂಟದಲ್ಲಿ ಭಾರತ ಇದೇ ಮೊದಲ ಬಾರಿಗೆ ಪದಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿರುವುದು ವಿಶೇಷ. ಉಳಿದ ಯಾವ ತಂಡಗಳಿಗೂ 4 ಚಿನ್ನ ಲಭಿಸಿಲ್ಲ. ಚೀನ 2 ಚಿನ್ನ, 2 ಬೆಳ್ಳಿ ಮತ್ತು ಒಂದು ಕಂಚಿನ ಪದಕದೊಂದಿಗೆ ದ್ವಿತೀಯ ಸ್ಥಾನ ಪಡೆದಿದೆ. ಅಮೆರಿಕ 3ನೇ (2-1-2), ಫ್ರಾನ್ಸ್ 4ನೇ ಸ್ಥಾನ ಪಡೆದಿದೆ (1-1-3).
ರವಿವಾರ ಪುರುಷರ ಸ್ಕೀಟ್ ಸ್ಪರ್ಧೆಯಲ್ಲಿ ಭಾರತೀಯ ಮೂವರು ಶೂಟರ್‌ಗಳು ಪಾಲ್ಗೊಂಡಿದ್ದರೂ ಪದಕ ಗೆಲ್ಲುವಲ್ಲಿ ವಿಫಲರಾದರು. ಇಲ್ಲವಾದರೆ ಭಾರತದ ಪದಕಗಳ ಯಾದಿ ಇನ್ನಷ್ಟು ಬೆಳೆಯುತ್ತಿತ್ತು. ಈ ವಿಭಾಗದಲ್ಲಿ ಸ್ಪರ್ಧಿಸಿದ್ದ ಸ್ಮಿತ್ ಸಿಂಗ್ 116 ಅಂಕಗಳೊಂದಿಗೆ 15ನೇ ಸ್ಥಾನ ಪಡೆದುಕೊಂಡರೆ, ಅಂಗದ್ ಬಜ್ವಾ 115 ಅಂಕಗಳೊಂದಿಗೆ 18ನೇ, ಸಿರಾಜ್ ಶೇಖ್ 112 ಅಂಕಗಳೊಂದಿಗೆ 30ನೇ ಸ್ಥಾನಿಯಾದರು.
ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್ ಅಮೆರಿಕದ ವಿನ್ಸೆಂಟ್ ಹ್ಯಾನ್ಕಾಕ್ ಪುರುಷರ ಸ್ಕೀತ್ ವಿಭಾಗದಲ್ಲಿ ಚಿನ್ನ ಕೊರಳಿಗೇರಿಸಿದರು. ಬೀಜಿಂಗ್ ಮತ್ತು ಲಂಡನ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಸಾಧನೆ ಹ್ಯಾನ್‌ಕಾಕ್ ಅವರದ್ದು. 2015ರ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರ ಗೆದ್ದ ಬಳಿಕ ಕೊಂಚ ಕುಸಿತ ಕಂಡಿದ್ದ ಹ್ಯಾನ್‌ಕಾಕ್ ಮತ್ತೆ ಚಿನ್ನದ ಗುರಿಯಿಟ್ಟಿದ್ದು ಈ ಟೂರ್ನಿಯಲ್ಲೇ.
ಈ ವಿಭಾಗದಲ್ಲಿ ಹ್ಯಾನ್‌ಕಾಕ್‌ಗೆ ಪ್ರಬಲ ಪೈಪೋಟಿ ನೀಡಿದ ಆಸ್ಟ್ರೇಲಿಯದ ಪೌಲ್ ಆ್ಯಡಮ್ಸ್ ಬೆಳ್ಳಿ ಗೆದ್ದರೆ, ಇಟಲಿಯ ತಮಾರೋ ಕ್ಯಾಸ್ಯಾಂಡ್ರೊ ಕಂಚು ಜಯಿಸಿದರು.