ಮಂಗಳೂರು: ಕರಾವಳಿ ರಕ್ಷಣಾ ಪಡೆಯನ್ನು ಸಜ್ಜುಗೊಳಿಸುವ ದೇಶದ ಮೊದಲ ತರಬೇತಿ ಅಕಾಡೆಮಿ ಮಂಗಳೂರಿನಲ್ಲಿ ಸ್ಥಾಪನೆಯಾಗಲಿದೆ. ಇದಕ್ಕಾಗಿ ಗ್ರಾಮಾಂತರ ಮಂಗಳೂರಿನ ಕೆಂಜಾರಿನಲ್ಲಿ ಗುರುಪುರ ನದಿಬದಿ 160 ಎಕರೆ ಜಮೀನು ಕೂಡ ಮಂಜೂರಾಗಿದ್ದು, ಎರಡು ವರ್ಷಗಳಲ್ಲಿ ಕಾರ್ಯಾರಂಭಿಸುವ ನಿರೀಕ್ಷೆಯಿದೆ. ಕರಾವಳಿ ರಕ್ಷಣೆಯ ಮೊದಲ ಮತ್ತು ಏಕೈಕ ಅಕಾಡೆಮಿ ಯಾಗಿರುವ ಕಾರಣ ಹಲವು ರಾಜ್ಯಗಳು ಇದಕ್ಕಾಗಿ ಬೇಡಿಕೆ ಮಂಡಿಸಿದ್ದವು. ಅಂದಿನ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಅವರ ಪ್ರಭಾವದಿಂದಾಗಿ ಅದು ಕೇರಳದ ಪಾಲಾಗಿ, ಶಿಲಾನ್ಯಾಸ ಕೂಡ ನೆರವೇರಿತ್ತು. ಈಗ ಮಂಗಳೂರಿಗೆ ಸ್ಥಳಾಂತರಗೊಂಡಿದೆ. ಅಕಾಡೆಮಿ ಸ್ಥಾಪನೆಯ ನೀಲ ನಕ್ಷೆ ತಯಾರಾಗಿದ್ದು, ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶ ಇದೆ ಎಂದು ಅಧಿಕೃತ ಮೂಲಗಳು “ಉದಯವಾಣಿ’ಗೆ ತಿಳಿಸಿವೆ. ಮಂಗಳೂರಿನಲ್ಲೇ ಸ್ಥಾಪನೆಯಾಗಲಿದೆ ಎಂದು ಕೇಂದ್ರ ರಕ್ಷಣಾ ಖಾತೆಯ ಸಹಾಯಕ ಸಚಿವ ಶ್ರೀಪಾದ ನಾಯಕ್ ಖಚಿತಪಡಿಸಿದ್ದಾರೆ.
ಕೆಂಜಾರು ಸನಿಹ ಜಮೀನು
ಕೆಂಜಾರು ಸಮೀಪ, ಗುರುಪುರ ನದಿ ತೀರದಲ್ಲಿ ಹಿಂದೆ ಜೆಸ್ಕೊ ಕಂಪೆನಿಗೆ 160 ಎಕರೆ ಜಮೀನು ಮಂಜೂರು ಮಾಡಲಾಗಿತ್ತು. ಆದರೆ ಕಂಪೆನಿ ಅಲ್ಲಿ ಬಂಡವಾಳ ಹೂಡದ್ದರಿಂದ ಸ್ಥಳವನ್ನು ಕೆಐಎಡಿಬಿ ವಾಪಸ್ ಪಡೆದಿತ್ತು. ಕೋಸ್ಟ್ ಗಾರ್ಡ್ ಅಕಾಡೆಮಿ ಸ್ಥಾಪನೆಯಾಗುವುದಾದರೆ ಅದನ್ನು ನೀಡಲು ಎರಡು ವರ್ಷಗಳ ಹಿಂದೆಯೇ ರಾಜ್ಯ ಸರಕಾರ ನಿರ್ಧರಿಸಿ, ಸಚಿವ ಸಂಪುಟದ ಅನುಮೋದನೆ ಪಡೆದಿತ್ತು. ಸುಮಾರು 1,010 ಕೋ.ರೂ. ವೆಚ್ಚದ ಯೋಜನೆ ಮಂಗಳೂರಿಗೆ ಬರುವುದಕ್ಕೆ ಆಗ ಸಚಿವರಾಗಿದ್ದ ಯು.ಟಿ. ಖಾದರ್ ಶ್ರಮಿಸಿದ್ದರು.
2018ರ ಮಾರ್ಚ್‌ನಲ್ಲಿ ಆಗಿನ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಕೋಸ್ಟ್ ಗಾರ್ಡ್ ಮಹಾ ನಿರ್ದೇಶಕ ರಾಜೇಂದ್ರ ಸಿಂಗ್ ಪ್ರಸ್ತಾವಿತ ನಿವೇಶನಕ್ಕೆ ಭೇಟಿ ನೀಡಿದ್ದು, ಕೇರಳದಿಂದ ಸ್ಥಳಾಂತರಿಸುವ ಸೂಚನೆ ನೀಡಿದ್ದರು. ಪ್ರಸ್ತಾವಿತ ಜಮೀನು ಈಗ ಕೆಐಎಡಿಬಿ ಅಧೀನದಲ್ಲಿದ್ದು, ಅದನ್ನು ಕೋಸ್ಟ್ ಗಾರ್ಡ್‌ಗೆ ನೀಡಬೇಕಾದರೆ ದರ ನಿಗದಿಪಡಿಸಬೇಕಿದೆ. ಬಳಿಕ ಕೇಂದ್ರ ಸರಕಾರವು ಅದನ್ನು ಖರೀದಿಸಿ, ಕೋಸ್ಟ್‌ಗಾರ್ಡ್‌ಗೆ ಹಸ್ತಾಂತರಿಸಿದ ಕೂಡಲೇ ಕಾಮಗಾರಿ ಆರಂಭವಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ದೇಶಕ್ಕೆ ಏಕೈಕ ಅಕಾಡೆಮಿ
ಅಕಾಡೆಮಿಯು ಮಂಗಳೂರಿ ನಲ್ಲಿ ಸ್ಥಾಪನೆಯಾದರೆ ತಟ ರಕ್ಷಕ ಪಡೆ ಸೇರುವ ದೇಶಾದ್ಯಂತದ ಯುವಜನರಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ಕೋಸ್ಟ್
ಗಾರ್ಡ್‌ನ ಅತ್ಯಾಧುನಿಕ ಹಡಗು, ದೋಣಿ, ಹೆಲಿಕಾಪ್ಟರ್ ಮತ್ತಿತರ ವಾಹನಗಳು, ಉಪಕರಣಗಳು ಇಲ್ಲಿಗೆ ಬರುತ್ತವೆ. ಅರಬಿ ಸಮುದ್ರ ಮತ್ತು ಕರಾವಳಿಯ ಭದ್ರತೆಗೂ ಇದು ಪೂರಕ. ಆರ್ಥಿಕ ಅಭಿವೃದ್ಧಿಗೂ ಮಹತ್ವದ ಕೊಡುಗೆ ನೀಡಬಲ್ಲುದು.
ಪ್ರಸ್ತುತ ಕೋಸ್ಟ್‌ಗಾರ್ಡ್ ಸಿಬಂದಿಗೆ ಭಾರತೀಯ ನೌಕಾ ಅಕಾಡೆಮಿಯಲ್ಲಿ ತರಬೇತಿ ನೀಡಲಾಗುತ್ತಿದೆ. 2008ರ ಮುಂಬೈ ದಾಳಿ ಬಳಿಕ ಕೇಂದ್ರ ಸರಕಾರವು ಕೋಸ್ಟ್ ಗಾರ್ಡ್‌ನ ಆಸ್ತಿ ಮತ್ತು ಮೂಲ ಸೌಕರ್ಯಗಳನ್ನು ಮೂರು ಪಟ್ಟು ಹೆಚ್ಚಿಸಲು ಉದ್ದೇಶಿಸಿತ್ತು. ಅಧಿಕ ಸಿಬಂದಿ ನೇಮಕ ಮಾಡ ಬೇಕಾದರೆ ನೌಕಾ ಅಕಾಡೆಮಿಯ ಮೂಲ ಸೌಲಭ್ಯ ಹೆಚ್ಚಿಸುವ ಅನಿವಾರ್ಯತೆ ಇದ್ದುದರಿಂದ ಕೇಂದ್ರ ಸಚಿವ ಸಂಪುಟವು 2009ರಲ್ಲಿ ಕೋಸ್ಟ್ ಗಾರ್ಡ್ ಅಕಾಡೆಮಿ ಸ್ಥಾಪಿಸಲು ತೀರ್ಮಾನಿಸಿ, ಅನು ಮೋದನೆ ನೀಡಿತ್ತು.
ಕೋಸ್ಟ್ ಗಾರ್ಡ್ ಅಕಾಡೆಮಿಗಾಗಿ ಮಂಗಳೂರಿನಲ್ಲಿ 160 ಎಕರೆ ಜಾಗವನ್ನು ರಾಜ್ಯ ಸರಕಾರ ಮೀಸಲಿರಿಸಿದೆ ಮತ್ತು ಈ ಯೋಜನೆಗೆ ಸಚಿವ ಸಂಪುಟದ ಅನುಮೋದನೆ ಸಿಕ್ಕಿದೆ. ಅಕಾಡೆಮಿ ಮಂಗಳೂರಿಗೆ ಬರುವುದರಿಂದ ಕೋಸ್ಟ್ ಗಾರ್ಡ್‌ಗೆ ಎಲ್ಲ ರೀತಿಯ ಸವಲತ್ತುಗಳೂ ಲಭ್ಯವಾಗಲಿವೆ.
– ಯು.ಟಿ. ಖಾದರ್, ಶಾಸಕ ಮತ್ತು ಮಾಜಿ ಸಚಿವರು
160 ಕೆಂಜಾರಿನಲ್ಲಿ ಎಕರೆ ಜಾಗ ಮೀಸಲು
02 ವರ್ಷಗಳಲ್ಲಿ ಕಾಮಗಾರಿ ಪೂರ್ಣ ನಿರೀಕ್ಷೆ
ಹಿಲರಿ ಕ್ರಾಸ್ತಾ