ಹೊಸದಿಲ್ಲಿ: ಭಾರತ ಮತ್ತು ಇರಾನ್ ನಡುವಿನ ಮಹತ್ವದ ಚಬಹಾರ್ ಬಂದರು ಯೋಜನೆಗೆ ಸೋಮವಾರ ಉಭಯ ರಾಷ್ಟ್ರಗಳು ಸಹಿ ಹಾಕಿವೆ.
ಒಪ್ಪಂದದ ಪ್ರಕಾರ ಮುಂದಿನ 10 ವರ್ಷಗಳ ಕಾಲ ಚಬಹಾರ್ ಸಂಪೂರ್ಣ ಕಾರ್ಯಾಚರಣೆಯನ್ನು ಭಾರತ ವಹಿಸಿಕೊಳ್ಳಲಿದೆ. ದೇಶದ ಮೊದಲ ಸಾಗರೋತ್ತರ ಬಂದರು ಕಾರ್ಯಾ ಚರಣೆ ಒಪ್ಪಂದ ಇದಾಗಿದ್ದು, ಪಾಕಿ ಸ್ಥಾನದ ಗ್ವಾದರ್ ಬಂದರು ಹಾಗೂ ಚೀನದ ಬೆಲ್ಟ್ ಮತ್ತು ರೋಡ್ ಯೋಜನೆಗೆ ಭಾರತ ಸೆಡ್ಡು ಹೊಡೆದಿದೆ.
ಅಫ್ಘಾನಿಸ್ಥಾನ, ಮಧ್ಯ ಏಷ್ಯಾ, ಯುರೋಪಿಯನ್ ಪ್ರದೇಶಗಳೊಂದಿಗೆ ಭಾರತ ಸಂಪರ್ಕ ಸಾಧಿಸಲು ಪ್ರಮುಖ ಕೊಂಡಿಯಾಗಿ ಚಬಹಾರ್ ಬಂದರು ಕಾರ್ಯನಿರ್ವಹಿಸಲಿದೆ.
ಈ ಮೂಲಕ ಅಫ್ಘಾನಿಸ್ತಾನ ಮತ್ತು ಅದರಾಚೆಗಿನ ದೇಶಗಳನ್ನು ಪ್ರವೇಶಿಸಲು ಪಾಕಿಸ್ಥಾನಿ ಬಂದರುಗಳನ್ನು ಬಳಸುವ ಅಗತ್ಯವೇ ಇನ್ನು ಭಾರತಕ್ಕೆ ಇರುವುದಿಲ್ಲ. ಪಾಕಿಸ್ಥಾನದಲ್ಲಿರುವ ಗ್ವಾದರ್ ಬಂದರನ್ನು ಚೀನ ನಿರ್ವಹಿಸುತ್ತಿದ್ದು, ಈಗ ಅದಕ್ಕೆ ಪರ್ಯಾಯವಾಗಿ ಗ್ವಾದರ್‌ನಿಂದ ಕೇವಲ 70 ಕಿ.ಮೀ.ದೂರದಲ್ಲೇ ಭಾರತ ಚಬಹಾರ್ ಅನ್ನು ಅಭಿವೃದ್ಧಿ ಪಡಿಸುತ್ತಿದ್ದು, ಗ್ವಾದಾರ್‌ನ ಪ್ರಭಾವ ತಗ್ಗಿಸಲು ಇದು ಸಹಕಾರಿಯಾಗಲಿದೆ.