ಹೊಸದಿಲ್ಲಿ: ರಕ್ಷಣ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ದೇಶ ಮುಂದಡಿಯಿಟ್ಟಿರುವಂತೆಯೇ, ದೇಶೀಯ ಕಂಪೆನಿಯೊಂದು ಜಾಗತಿಕ ರಕ್ಷಣ ಮಾರು ಕಟ್ಟೆಗೆ ಎಐ(ಕೃತಕ ಬುದ್ಧಿಮತ್ತೆ) ಚಾಲಿತ “ಮೇಡ್ ಇನ್ ಇಂಡಿಯಾ’ ರೊಬೋಟ್‌ವೊಂದನ್ನು ಅಭಿವೃದ್ಧಿಪಡಿಸಿದೆ.
ಡ್ರೋನ್ ನಿಗ್ರಹ ತಂತ್ರಜ್ಞಾನ ಸಂಸ್ಥೆಯಾದ ಹೈದರಾಬಾದ್ ಮೂಲದ ಝೆನ್ ಟೆಕ್ನಾಲಜೀಸ್ ಜಾಗತಿಕ ರಕ್ಷಣ ಮಾರುಕಟ್ಟೆಗೆ ಹಲವು ಹೊಸ ಉತ್ಪನ್ನಗಳನ್ನು ತಯಾರಿಸಿದೆ. ಆ ಪೈಕಿ ಎಐ ಚಾಲಿತ ರೊಬೋಟ್ ಕೂಡ ಒಂದು. ಈ ರೊಬೋಟ್‌ಗೆ “ಪ್ರಹಸ್ತ’ ಎಂದು ಹೆಸರಿಡಲಾಗಿದೆ.
4 ಕಾಲಿರುವ ಪ್ರಹಸ್ತ: ಈ ಎಐ ಚಾಲಿತ ಪ್ರಹಸ್ತ ರೊಬೋಟ್ 4 ಕಾಲುಗಳನ್ನು ಹೊಂದಿದೆ. ಇದು ಲಿಡಾರ್(ಲೈಟ್ ಡಿಟೆಕ್ಷನ್ ಆ್ಯಂಡ್ ರೇಂಜಿಂಗ್) ಅನ್ನು ಬಳಸಿ ಕೊಂಡು, ಯಾವುದೇ ಭೂಪ್ರದೇಶದ 3ಡಿ ಮ್ಯಾಪಿಂಗ್ ಅನ್ನು ರಚಿಸಲಿದೆ. ಇದರ ಮೂಲಕ ಯಾವುದೇ ಮಿಷನ್‌ನ ಯೋಜನೆ, ನೇವಿಗೇಶನ್ ಮತ್ತು ಅಪಾಯ ಅರಿಯಲು ಸಾಧ್ಯವಾಗಲಿದೆ ಎಂದು ಸಂಸ್ಥೆ ಹೇಳಿದೆ.
ಏನೇನು ಅಭಿವೃದ್ಧಿ?: ಎಐ ಚಾಲಿತ ರೊಬೋಟ್ ಮಾತ್ರವಲ್ಲದೇ, ಸಶಸ್ತ್ರ ವಾಹನಗಳು, ಐಸಿವಿಗಳು ಮತ್ತು ಹಡಗುಗಳಲ್ಲಿ ಬಳಸಲಾಗುವ ಹಾಕಿಯೇ ಡ್ರೋನ್ ನಿಗ್ರಹ ಕೆಮರಾ ವ್ಯವಸ್ಥೆ, ಬಾರ್ಬಾರಿಕ್-ಯುಆರ್‌ಸಿಡಬ್ಲ್ಯುಎಸ್ ರಿಮೋಟ್-ಕಂಟ್ರೋಲ್ಡ್ ವೆಪನ್ ಸ್ಟೇಶನ್, ಸ್ಥಿರ್ ಸ್ಟಾಬ್ 640 ಅನ್ನೂ ಕಂಪೆನಿ ಅಭಿವೃದ್ಧಿಪಡಿಸಿದೆ.
ಎಐ ರೊಬೋಟ್‌ನ ವೈಶಿಷ್ಟ್ಯಗಳೇನು?
– 4 ಕಾಲಿರುವ ಎಐ ಚಾಲಿತ ರೊಬೋಟ್
– ಬೆನ್ನಲ್ಲೇ ಅಸಾಲ್ಟ್ ರೈಫಲ್ ಹೊತ್ತುಕೊಂಡು ಮೆಟ್ಟಿಲು ಹತ್ತಿ, ಇಳಿಯುವ ಸಾಮರ್ಥ್ಯ
– 16 ಇಂಚುಗಳಷ್ಟು ಎತ್ತರದ ಅಡೆತಡೆಯನ್ನು ದಾಟಿ ಚಲಿಸಬಲ್ಲದು
– ಸಣ್ಣ ಅಂತರ ಅಥವಾ ಗುಂಡಿಯಿದ್ದರೆ ಜಿಗಿದು ಮತ್ತೂಂದು ಬದಿಗೆ ಹೋಗಬಲ್ಲದು
– 81 ಕೆ.ಜಿ.ಯ ವರೆಗೆ ತೂಕವಿರುವ ಸೈನಿಕನನ್ನು ಎತ್ತಿಕೊಂಡು ಹೋಗಬಲ್ಲದು
– ಯಾರಾದರೂ ಹೊಡೆದುರುಳಿಸಿದರೆ ಈ ರೋಬೋ ಮತ್ತೆ ತನ್ನನ್ನು ತಾನು ಸರಿಪಡಿಸಿಕೊಂಡು ಎದ್ದು ಬರಬಲ್ಲದು