ಧಾರವಾಡ: ಸಂಶೋಧಕರು ಪ್ರಸ್ತುತ ವಿಷಯ, ಆರ್ಥಿಕತೆ ಮತ್ತು ನಿರ್ವಹಣೆ, ಒಳಹರಿವು ಕುರಿತು ಹೆಚ್ಚು ಅಧ್ಯಯನ-ವಿಶ್ಲೇಷಣೆಗೆ ಒತ್ತು ನೀಡಬೇಕಿದೆ ಎಂದು ತಮಿಳುನಾಡಿನ ತಿರುಚಿರಾಪಳ್ಳಿ ಭಾರತೀಯ ನಿರ್ವಹಣಾ ಸಂಸ್ಥೆ ನಿರ್ದೇಶಕ ಡಾ| ಪವನ್‌ಕುಮಾರ ಸಿಂಗ್ ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಕೌಸಾಳಿ ನಿರ್ವಹಣಾ ಅಧ್ಯಯನ ವಿಭಾಗದ ವತಿಯಿಂದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಆರ್ಥಿಕತೆ, ವ್ಯವಹಾರ ಮತ್ತು ನಿರ್ವಹಣೆಯಲ್ಲಿ ಇತ್ತೀಚಿನ ಪ್ರವೃತ್ತಿಗಳು ವಿಷಯ ಕುರಿತು ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಅರ್ಥಶಾಸ್ತ್ರ ವಾಣಿಜ್ಯ ಮತ್ತು ನಿರ್ವಹಣೆ ವ್ಯಾಪಾರ ಅಧ್ಯಯನ ವಿಷಯಗಳಿಗೆ ಮೂಲ ವಿಷಯವಾಗಿದೆ. ಪ್ರಸ್ತುತ ನಿರ್ವಹಣೆಗೆ ಸಂಬಂಧಿಸಿದ ವಿಷಯಗಳಾದ ಹಣಕಾಸು, ವಾಣಿಜ್ಯ, ಅರ್ಥಶಾಸ್ತ್ರ ಸಂಬಂಧಿಸಿದ ವಿಷಯಗಳು ಹೇಗೆ ನಿರ್ವಹಣಾ ಅಧ್ಯಯನ ವಿಷಯಗಳಿಗೆ ಸಂಬಂ ಧಿಸಿವೆ ಎಂಬುದರ ಕುರಿತು ಸಂಶೋಧನೆಗಳು ನಡೆಯಬೇಕು. ಪ್ರಸ್ತುತ ಭಾರತದ ಅರ್ಥ ವ್ಯವಸ್ಥೆ ಜಾಗತಿಕ ಮಟ್ಟದಲ್ಲಿ ಅತಿ ಬಲಿಷ್ಠವಾಗಿದ್ದು, ಭಾರತೀಯ ಅನೇಕ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿವೆ. ಸಂಶೋಧಕರು ವಿಭಿನ್ನವಾದ ವಿಧಾನಗಳ ಮೂಲಕ ಸಂಶೋಧನೆ ನಡೆಸಬೇಕಾಗಿದೆ ಎಂದರು.
ಬೆಳಗಾವಿ ಉದ್ಯಮಿ ರಾಜೇಂದ್ರ ಬೆಳಗಾಂವಕರ ಮಾತನಾಡಿ, ಉದ್ಯಮಗಳ ಬೇಡಿಕೆಗಳ ಅನುಗುಣವಾಗಿ ವಿದ್ಯಾರ್ಥಿಗಳು ಸಿದ್ಧವಾಗಬೇಕಾಗಿದೆ. ಪ್ರಸ್ತುತ ವಿಶೇಷವಾಗಿ ಮ್ಯಾನೇಜ್‌ಮೆಂಟ್, ಬಿಜಿನೆಸ್ ಶೈಕ್ಷಣಿಕ ಸಂಸ್ಥೆಗಳ ಶಿಕ್ಷಕರು ಭಿನ್ನವಾದ ಬೋಧನಾ ವಿಧಾನ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಬಳ್ಳಾರಿ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ| ಎಂ.ಎಸ್.ಸುಭಾಷ ಮಾತನಾಡಿ, ಮ್ಯಾನೇಜ್‌ಮೆಂಟ್, ಕಾನೂನು, ಮೆಡಿಸಿನ್, ಇಂಜನಿಯರಿಂಗ್ ಕ್ಷೇತ್ರದಲ್ಲಿ ತಕ್ಕಮಟ್ಟಿಗೆ ಮಾತ್ರ ಸಂಶೋಧನೆಗೆ ನಡೆಯುತ್ತಿರುವುದು ದುರದೃಷ್ಟಕರ ಎಂದರು.
ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಪ್ರೊ|ಕೆ.ಬಿ. ಗುಡಸಿ ಮಾತನಾಡಿ, 2 ಕೋಟಿ ರೂ.ಗಳನ್ನು ವಿದ್ಯಾರ್ಥಿ ಮತ್ತು ಶಿಕ್ಷಕರ ವಿನಿಮಯಕ್ಕಾಗಿ ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ವಿಷಯಗಳಲ್ಲಿ ಸಂಶೋಧನೆಗೆ ಹೆಚ್ಚು ಒತ್ತು ನೀಡಲಾಗುವುದು ಎಂಉ ತಿಳಿಸಿದರು.
ಕವಿವಿ ಕುಲಸಚಿವ ಯಶಪಾಲ್ ಕ್ಷೀರಸಾಗರ, ಕೌಸಾಳಿ ನಿರ್ವಹಣಾ ಅಧ್ಯಯನ ವಿಭಾಗದ ಡೀನ್ ಪ್ರೊ|ರಮೇಶ ಕುಲಕರ್ಣಿ, ಕಿಮ್ಸ್ ನಿರ್ದೇಶಕ ಡಾ|ಎ.ಎಮ್.ಕಡಕೋಳ, ಡಾ| ಶಿವಪ್ಪ, ಡಾ|ಉತ್ತಮ ಕಿನ್ನಂಗೆ, ಡಾ|ಎನ್.ರಾಮಾಂಜನೇಯಲು, ಡಾ|ಪುಷ್ಪಾ ಹೊಂಗಲ್ ಸೇರಿದಂತೆ ಕರ್ನಾಟಕ, ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಹುಬ್ಬಳ್ಳಿ ಧಾರವಾಡ ಬಿಬಿಎ, ಎಂಬಿಎ ಕಾಲೇಜುಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಉದ್ಯಮಿದಾರರು, ವೃತ್ತಿಪರರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಇದ್ದರು.