ಹೊಸದಿಲ್ಲಿ: ಮಾರುಕಟ್ಟೆ ಕುಸಿತ, ಭಾರತದ ಆರ್ಥಿಕತೆಯ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿರುವಂತೆಯೇ, ಹೂಡಿಕೆ ಕೇಂದ್ರಿತವಾದ ರೇಟಿಂಗ್ ಸಂಸ್ಥೆ ಮೂಡಿ ಇನ್‌ವೆಸ್ಟರ್ ಸರ್ವೀಸ್ ಸಂಸ್ಥೆ ಭಾರತದ ಆರ್ಥಿಕತೆಯನ್ನು “ಸ್ಥಿರ’ದಿಂದ “ಋಣಾತ್ಮಕ’ಕ್ಕೆ ಜಾರಿದೆ ಎಂದು ಹೇಳಿದೆ.
ಆದರೂ ಅದು ಭಾರತದ ರೇಟಿಂಗ್ ಅನ್ನು “ಬಿಎಎ2′ ಮುಂದುವರಿಸಿದೆ.
ಹಿಂದೆ ನಿರೀಕ್ಷಿಸಿದ್ದಕ್ಕಿಂತಲೂ ಕಡಿಮೆ ದರದಲ್ಲಿ ಭಾರತದ ಆರ್ಥಿಕಾಭಿವೃದ್ಧಿ ನಿಂತಿರುವುದು, ಬಹುಕಾಲದ ಆರ್ಥಿಕ ಮತ್ತು ಸಾಂಸ್ಥಿಕ ದುರ್ಬಲತೆಗಳನ್ನು ಪರಿಹರಿಸುವಲ್ಲಿ ಸರಕಾರದ ನೀತಿಗಳು ಹೆಚ್ಚು ಸಫಲವಾಗದೇ ಇರುವುದು, ಹಿಂದೆ ಅಂದುಕೊಂಡಿರುವುದಕ್ಕಿಂತ ಕಡಿಮೆ ಆರ್ಥಿಕ ಗತಿ ಇರುವುದು ಮೂಡಿ ನಿಲುವಿನಲ್ಲಿ ಬದಲಾಗಲು ಕಾರಣವಾಗಿದೆ ಎಂದು ಅದರ ಪ್ರಕಟನೆ ಹೇಳಿದೆ.
ಮೂಡಿಯ ಹೇಳಿಕೆ ಹೊರಬಿದ್ದ ಕೂಡಲೇ ಸದ್ಯದ ಆರ್ಥಿಕ ಸ್ಥಿತಿಯನ್ನು ಕೇಂದ್ರ ಸರಕಾರ ಸಮರ್ಥಿಸಿಕೊಂಡಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿರುವಂತೆ ಭಾರತದ ಆರ್ಥಿಕತೆ ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದು ಸದ್ಯದ ವಿದ್ಯಮಾನಗಳು ಭಾರತದ ಆರ್ಥಿಕತೆ ಮೇಲೆ ಯಾವುದೇ ಪರಿಣಾಮ ಬೀರವು ಎಂದು ಅದು ಹೇಳಿದೆ.
ಈ ಮೊದಲು ಐಎಂಎಫ್ ಭಾರತದ ಆರ್ಥಿಕಾಭಿವೃದ್ಧಿ ದರ 2019ರಲ್ಲಿ ಶೇ.6.1ರಷ್ಟು ಇರುವುದಾಗಿ ಮತ್ತು 2020ರಲ್ಲಿ ಶೇ.7ಕ್ಕೇರುವುದಾಗಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆ ದೃಢವಾಗಿದ್ದು, ಹಣದುಬ್ಬರದಂತಹ ಸಮಸ್ಯೆಗಳ ಮೇಲೆ ನಿಗಾವಹಿಸಲಾಗಿದೆ ಎಂದು ಹೇಳಿದೆ.
ಏನಿದು ಮೂಡಿ ರೇಟಿಂಗ್?
ಜಾಗತಿಕ ವಿದ್ಯಮಾನಗಳಿಗೆ ಅನ್ವಯವಾಗಿ, ನಿರ್ದಿಷ್ಟ ದೇಶದ ಆರ್ಥಿಕ ಸ್ಥಿತಿಯ ಬಗ್ಗೆ ಹೂಡಿಕೆದಾರರಿಗೆ ತಿಳಿಸುವುದು ಮೂಡಿ ರೇಟಿಂಗ್. ಇದೊಂದು ಸಂಸ್ಥೆಯಾಗಿದ್ದು, ನಿರ್ದಿಷ್ಟ ದೇಶದ ಆರ್ಥಿಕತೆ ಅಳೆದು ರೇಟಿಂಗ್ ನೀಡುತ್ತದೆ. “ಎಎಎ’ ಅತ್ಯುನ್ನತ ರೇಟಿಂಗ್ ಆಗಿದ್ದು “ಸಿ’ ಕನಿಷ್ಠ ರೇಟಿಂಗ್ ಆಗಿದೆ. ಸದ್ಯ ಭಾರತದ ರೇಟಿಂಗ್ ಮಧ್ಯಮ ಎಂದು ಪರಿಗಣಿಸಲ್ಪಟ್ಟಿದೆ. ಬಿಎಎ ನಲ್ಲಿ ಬಿಎಎ1 ಬಿಎಎ2 ಬಿಎಎ3 ಎಂದಿದ್ದು ಭಾರತಕಕೆ ಬಿಎಎ2 ಪ್ರಾಪ್ತವಾಗಿದೆ.