Advertisement

ರಕ್ಷಣಾ ಸಾಮಗ್ರಿಗಳ ರಫ್ತು 5 ಪಟ್ಟು ಹೆಚ್ಚು ; ಜಾಗತಿಕ ರಂಗದಲ್ಲಿ ಹೊಸ ಹೆಗ್ಗಳಿಕೆಯತ್ತ ಭಾರತ

11:01 AM Apr 22, 2020 | Hari Prasad |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸಾದ ‘ಮೇಕ್‌ ಇನ್‌ ಇಂಡಿಯಾ’ದ ಪರಿಣಾಮವಾಗಿ, ಕಳೆದ ನಾಲ್ಕು ವರ್ಷಗಳಲ್ಲಿ ಭಾರತದ ರಕ್ಷಣಾ ಸಾಮಗ್ರಿಗಳ ರಫ್ತು ಐದು ಪಟ್ಟು ಹೆಚ್ಚಳವಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

Advertisement

ಇದೊಂದು ಹೆಮ್ಮೆಯ ವಿಚಾರವಾಗಿದ್ದು, ಈವರೆಗೆ, ರಕ್ಷಣಾ ಸಾಮಗ್ರಿಗಳನ್ನು ವಿಶ್ವದಲ್ಲೇ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿದ್ದ ಭಾರತ, ಈಗ ನಿಧಾನವಾಗಿ ರಕ್ಷಣಾ ಸಾಮಗ್ರಿಗಳ ರಫ್ತು ಕ್ಷೇತ್ರದಲ್ಲಿ ಬೆಳೆಯಲಾರಂಭಿಸಿದೆ ಎಂದು ಸಚಿವಾಲಯ ಹೇಳಿದೆ.

ಇಲಾಖೆಯ ಪ್ರಕಟಣೆಯ ಪ್ರಕಾರ, 2016-17ರಲ್ಲಿ 1,521.86 ಕೋಟಿ ರೂ.ಗಳಷ್ಟು ರಕ್ಷಣಾ ಸಾಮಗ್ರಿಗಳನ್ನು ಭಾರತ ರಫ್ತು ಮಾಡಿತ್ತು. 2019-20ರಲ್ಲಿ 8,620.59 ಕೋಟಿ ರೂ.ಗಳಷ್ಟು ಸಾಮಗ್ರಿಗಳನ್ನು ರಫ್ತು ಮಾಡಲಾಗಿದ್ದು, ರಫ್ತು ಪ್ರಮಾಣ ಐದು ಪಟ್ಟು ಹೆಚ್ಚಳವಾಗಿದೆ.

ರಕ್ಷಣಾ ಸಾಮಗ್ರಿಗಳ ತಯಾರಿಕಾ ಇಲಾಖೆಯು ಸಲ್ಲಿಸಿರುವ ಅಂದಾಜು ಲೆಕ್ಕದ ಪ್ರಕಾರ, 2020-21ನೇ ಆರ್ಥಿಕ ವರ್ಷದಲ್ಲಿ ಈ ರಫ್ತಿನ ಪ್ರಮಾಣ 15,000 ಕೋಟಿ ರೂ.ಗಳಿಗೆ ಏರಬಹುದು ಎಂದು ಅಂದಾಜಿಸಲಾಗಿದೆ.

ಖಾಸಗಿ ಕಂಪನಿಗಳಿಗೆ ಹೆಚ್ಚು ಲಾಭ: ರಕ್ಷಣಾ ಸಾಮಗ್ರಿ ರಫ್ತು ಹೆಚ್ಚಳದಿಂದ ಹೆಚ್ಚಿನ ಮಟ್ಟದಲ್ಲಿ ಲಾಭವಾಗಿರುವುದು ಭಾರತದ ಖಾಸಗಿ ಕಂಪನಿಗಳಿಗೆ ಎಂದು ಡಿಡಿಪಿ ಹೇಳಿದೆ.

Advertisement

2016-17ರಲ್ಲಿ ಈ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಕಂಪನಿಗಳು 194.35 ಕೋಟಿ ರೂ. ಮೌಲ್ಯದ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡಿದ್ದವು. 2019-20ರಲ್ಲಿ 8,013.65 ಕೋಟಿ ರೂ. ಮೌಲ್ಯದ ಸಾಮಗ್ರಿಗಳನ್ನು ಅವು ರಫ್ತು ಮಾಡಿವೆ ಎಂದು ಡಿಡಿಪಿ ತಿಳಿಸಿದೆ.

ಸರ್ಕಾರಿ ಕಂಪನಿಗಳ ರಫ್ತುಇಳಿಕೆ: ರಕ್ಷಣಾ ಸಾರ್ವಜನಿಕ ವಲಯ ಕ್ಷೇತ್ರದ ಉಸ್ತುವಾರಿ­ಯಲ್ಲಿರುವ (ಪಿಎಸ್‌ಯುಗಳು) ಹಾಗೂ ಆರ್ಡನ್ಸ್‌ ಫ್ಯಾಕ್ಟರಿ ಬೋರ್ಡ್‌ (ಒಎಫ್ಬಿ) ಕಂಪನಿಗಳ ಮೇಲಿನ ಹೊರೆಯೂ ಕಡಿಮೆಯಾಗಿದ್ದು, 2016-17ರಲ್ಲಿ ಈ ವಲಯದ ಸರ್ಕಾರಿ ಕಂಪನಿಗಳು 1,357.51 ಕೋಟಿ ರೂ. ಮೌಲ್ಯದ ರಕ್ಷಣಾ ಸಾಮಗ್ರಿ­ಗಳನ್ನು ರಫ್ತು ಮಾಡಿದ್ದರೆ, 2019-20ರಲ್ಲಿ 404.94 ಕೋಟಿ ರೂ. ಮೌಲ್ಯದ ಸಾಮಗ್ರಿಗಳನ್ನು ರಫ್ತು ಮಾಡಿವೆ ಎಂದು ಡಿಡಿಪಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next