ನವದೆಹಲಿ: ಭಾರತದಲ್ಲಿ ಸತತವಾಗಿ ಏರಿಕೆಯಾಗುತ್ತಿದ್ದ ಕೋವಿಡ್ ಪ್ರಕರಣ ಇದೀಗ ಏಪ್ರಿಲ್ 14ರ ನಂತರ ಇದೇ ಮೊದಲ ಬಾರಿಗೆ ಕಳೆದ 24ಗಂಟೆಗಳಲ್ಲಿ 2 ಲಕ್ಷಕ್ಕಿಂತ ಕಡಿಮೆ ಕೋವಿಡ್ 19 ಪ್ರಕರಣ ಪತ್ತೆಯಾಗಿದ್ದು, 3,511 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ (ಮೇ 25) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ರೈಲ್ವೇ ಇಲಾಖೆಯಿಂದ ಸುಶೀಲ್ ಕುಮಾರ್ ಅಮಾನತು?
ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 1,96 ಲಕ್ಷ ಕೋವಿಡ್ ಪ್ರಕರಣ ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 2,59ಲಕ್ಷಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ. ಮಹಾರಾಷ್ಟ್ರದಲ್ಲಿ 22,122 ಕೋವಿಡ್ ಪ್ರಕರಣ ಪತ್ತೆಯಾಗಿದ್ದು, 592 ಸಾವು ಸಂಭವಿಸಿದೆ. ಇದರೊಂದಿಗೆ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 56.02ಲಕ್ಷಕ್ಕೆ ಹೆಚ್ಚಳವಾಗಿದ್ದು, 89,212 ಮಂದಿ ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದ ನಂತರ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಉತ್ತರಪ್ರದೇಶದಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣ ಪತ್ತೆಯಾಗಿದೆ. ಕರ್ನಾಟಕದಲ್ಲಿ ಕೋವಿಡ್ ಎರಡನೇ ಅಲೆಯಲ್ಲಿ 25,311 ಹೊಸ ಪ್ರಕರಣ ವರದಿಯಾಗಿದ್ದು, ಬೆಂಗಳೂರಿನಲ್ಲಿ 5,701 ಪ್ರಕರಣ ಪತ್ತೆಯಾಗಿದೆ.
ತಮಿಳುನಾಡಿನಲ್ಲಿ ಕಳೆದ 24ಗಂಟೆಗಳಲ್ಲಿ 34,867 ಕೋವಿಡ್ ಪ್ರಕರಣ ಪತ್ತೆಯಾಗಿದ್ದು, 404 ಸಾವು ಸಂಭವಿಸಿದೆ. ರಾಜಧಾನಿ ಚೆನ್ನೈನಲ್ಲಿ 4,985 ಕೋವಿಡ್ ಪ್ರಕರಣ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.