ನವದೆಹಲಿ:ಕಳೆದ 24ಗಂಟೆಯಲ್ಲಿ ಭಾರತದಲ್ಲಿ 45,882 ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿದ್ದು, ಇದರೊಂದಿಗೆ ದೇಶಾದ್ಯಂತ ಶುಕ್ರವಾರ(ನವೆಂಬರ್ 20, 2020) ಸೋಂಕಿತರ ಸಂಖ್ಯೆ 90 ಲಕ್ಷ ದಾಟಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಸಚಿವಾಲಯದ ನೂತನ ಅಂಕಿಅಂಶದ ಪ್ರಕಾರ, ಭಾರತದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 90,04,365ಕ್ಕೆ ಏರಿಕೆಯಾಗಿದ್ದು, ಕಳೆದ 24ಗಂಟೆಯಲ್ಲಿ 584 ಮಂದಿ ಸೋಂಕಿಗೆ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಕೋವಿಡ್ ಗೆ ಸಾವಿಗೀಡಾದವರ ಸಂಖ್ಯೆ 1,32,162ಕ್ಕೆ ಏರಿಕೆಯಾಗಿದೆ.
ಶುಕ್ರವಾರ ಬೆಳಗ್ಗೆ ಭಾರತದಲ್ಲಿ 4,43,794 ಸಕ್ರಿಯ ಕೋವಿಡ್ ಪ್ರಕರಣಗಳು ಇದ್ದಿರುವುದಾಗಿ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ. ದೇಶದಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 84.28 ಲಕ್ಷ ದಾಟಿದೆ ಎಂದು ವರದಿ ತಿಳಿಸಿದೆ.
ಕಳೆದ 24ಗಂಟೆಯಲ್ಲಿ 44,807 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿರುವುದಾಗಿ ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಅತೀ ಹೆಚ್ಚು ಕೋವಿಡ್ ಸೋಂಕಿತರ ಪಟ್ಟಿಯಲ್ಲಿ ಅಮೆರಿಕದ ನಂತರದ ಸ್ಥಾನದಲ್ಲಿ ಭಾರತವಿದೆ.
ಕೋವಿಡ್ 19 ಸೋಂಕು ಪ್ರಕರಣದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, 17,63,055 ಪ್ರಕರಣಗಳು ಪತ್ತೆಯಾಗಿದೆ. ದೆಹಲಿಯಲ್ಲಿ ಕೋವಿಡ್ ಗೆ ಸಾವಿಗೀಡಾದವರ ಸಂಖ್ಯೆ 8ಸಾವಿರಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.