ನವದೆಹಲಿ: ಭಾರತದಲ್ಲಿ ಕೋವಿಡ್-19 ಆರ್ಭಟ ಮುಂದುವರೆದಿದ್ದು ಕೇರಳದಲ್ಲಿ ಜನವರಿ ತಿಂಗಳಲ್ಲಿ ಮೊದಲ ಪ್ರಕರಣ ಕಂಡುಬಂದಾಗಿನಿಂದ ಇಂದಿನವರೆಗೂ ಸುಮಾರು 9,06,752 ಜನರು ಸೊಂಕಿಗೆ ತುತ್ತಾಗಿದ್ದಾರೆ. ಮಾತ್ರವಲ್ಲದೆ 23 ಸಾವಿರಕ್ಕಿಂತ ಹೆಚ್ಚು ಜನರು ಬಲಿಯಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಸುಮಾರು 28,498 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 553 ಜನರು ಮೃತಪಟ್ಟಿದ್ದಾರೆ. ಮಾತ್ರವಲ್ಲದೆ ಕಳೆದ 15 ದಿನಗಳಲ್ಲಿ ಸುಮಾರು 3.21 ಲಕ್ಷದಷ್ಟು ಜನರು ಸೋಂಕಿತರಾಗಿದ್ದಾರೆ.
ಭಾರತದಲ್ಲಿ 3.11.565 ಸಕ್ರಿಯ ಪ್ರಕರಣಗಳಿದ್ದು, ಸೋಂಕಿನಿಂದ ಚೇತರಿಕೆ ಆಗುವವರ ಪ್ರಮಾಣ ಶೇ. 63.02% ರಷ್ಟಿದೆ. ಕಳೆದ ಒಂದೇ ದಿನ ಸುಮಾರು 17,989 ಜನರು ವೈರಾಣು ಮುಕ್ತರಾಗಿದ್ದಾರೆ. ಆ ಮೂಲಕ ಸುಮಾರು 5,71,459 ಜನರು ಸೊಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ದೇಶದಲ್ಲಿ 1.20 ಕೋಟಿಗೂ ಅಧಿಕ ಜನರಿಗೆ ಸೋಂಕು ಪತ್ತೆ ಪರೀಕ್ಷೆ ನಡೆಸಲಾಗಿದ್ದು, ಜುಲೈ 13 ರ ಸೋಮವಾರ ಒಂದೇ ದಿನ 2,86,247 ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಉತ್ತರಪ್ರದೇಶ, ತೆಲಂಗಾಣ, ಕರ್ನಾಟಕ, ಆಂಧ್ರಪ್ರದೇಶ ದಲ್ಲಿ ಸೊಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಲೇ ಇದೆ.