ನವದೆಹಲಿ: ದೇಶದಲ್ಲಿ ಕೋವಿಡ್-19 ವೈರಸ್ ಪ್ರತಾಪ ಮುಂದುವರೆದಿದ್ದು ಸೋಂಕಿತರ ಸಂಖ್ಯೆ 4ಲಕ್ಷದ ಗಡಿ ದಾಟಿದೆ. ಶನಿವಾರದ ವೇಳೆಗೆ (20-6-2020) ಈ ಮಹಾಮಾರಿಗೆ 13,000 ಮಂದಿ ಬಲಿಯಾಗಿದ್ದು ಹೊಸ ಪ್ರಕರಣಗಳು ದ್ವಿಗುಣಗೊಳ್ಳುತ್ತಲೇ ಇದೆ. ಮಾತ್ರವಲ್ಲದೆ ಅಮೆರಿಕಾ, ಬ್ರೆಜಿಲ್, ರಷ್ಯಾ ನಂತರದ 4ನೇ ಕೋವಿಡ್ ಹಾಟ್ ಸ್ಪಾಟ್ ಆಗಿ ಭಾರತ ಗುರುತಿಸಿಕೊಂಡಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 15,813 ಜನರಿಗೆ ವೈರಾಣು ಭಾಧಿಸಿದ್ದು ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ಹೊಸ ಪ್ರರಣಗಳು ಪತ್ತೆಯಾಗಿದೆ. ಹಾಗಾಗಿ ಒಟ್ಟಾರೆ ಸೋಂಕಿತರ ಸಂಖ್ಯೆ 4,11,500ಕ್ಕೆ ತಲುಪಿದೆ.
ದೇಶದಲ್ಲಿ ಲಾಕ್ ಡೌನ್ ನಿರ್ಬಂಧಗಳನ್ನು ತೆಗೆದ ನಂತರ ಈ ಸಾಂಕ್ರಾಮಿಕ ರೋಗದ ವೇಗ ಹೆಚ್ಚಾಗುತ್ತಿದ್ದು, ಇತ್ತೀಚಿನ ಒಂದು ಲಕ್ಷ ಸೋಂಕಿತ ಪ್ರಕರಣಗಳು ಕೇವಲ ಎಂಟು ದಿನಗಳಲ್ಲಿ ದಾಖಲಾಗಿವೆ. ಈ ಹಿಂದೆ ಒಂದು ಲಕ್ಷ ವೈರಾಣು ಪೀಡಿತರು 15 ದಿನದಲ್ಲಿ ಕಂಡುಬಂದಿದ್ದರು. ಅದಕ್ಕೂ ಮೊದಲು 1 ಲಕ್ಷ ಸೊಂಕಿತರ ಸಂಖ್ಯೆ 78 ದಿನದಲ್ಲಿ ದಾಖಲಾಗಿದ್ದವು.
ಭಾರತದ ಶೇ. 75% ಸೋಂಕಿತರ ಸಂಖ್ಯೆ ಮೇ 19 ರಿಂದ ಜೂನ್ 20 ರೊಳಗೆ ವರದಿಯಾಗಿದೆ. ಅದಾಗ್ಯೂ ಭಾರತದಲ್ಲಿ ಸೋಂಕಿನಿಂದ ಚೇತರಿಸಿಕೊಳ್ಳುವವರ ಪ್ರಮಾಣ ಶೇ. 54.12 ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಮಹಾರಾಷ್ಟ್ರ ರಾಜ್ಯದಲ್ಲೇ ಕೋವಿಡ್ ವೈರಸ್ ಅಟ್ಟಹಾಸ ಮೆರೆಯುತ್ತಿದ್ದು 1.24 ಲಕ್ಷ ಮಂದಿ ವೈರಸ್ ಸೊಂಕಿತರಾಗಿದ್ದಾರೆ. ತಮಿಳುನಾಡಿನಲ್ಲಿ 56,845, ದೆಹಲಿಯಲ್ಲಿ 53,000 ವೈರಾಣು ಪೀಡಿತರಿದ್ದಾರೆ. ಭಾರತದಲ್ಲಿ ಕಳೆದ 24 ಗಂಟೆಗಲಲ್ಲಿ 1,89,869 ಜನರ ಗಂಟಲ ದ್ರವ ಪರೀಕ್ಷಿಸಲಾಗಿದೆ.
ಜಗತ್ತಿನಾದ್ಯಂತ ಕೋವಿಡ್ ಸೋಂಕಿತರ ಸಂಖ್ಯೆ 86 ಲಕ್ಷ ತಲುಪಿದ್ದು, 4.5 ಲಕ್ಷ ಮಂದಿ ಈ ವೈರಾಣುವಿಗೆ ಬಲಿಯಾಗಿದ್ದಾರೆ. ಅಮೆರಿಕಾ ದೇಶವೊಂದರಲ್ಲೇ 22 ಲಕ್ಷ ಮಂದಿ ಸೋಂಕಿತರಿದ್ದು, 1.1 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ.