Advertisement

ದೇಶದ ಸಂವಿಧಾನ ವಿಶ್ವಕ್ಕೇ ಮಾದರಿ

04:06 AM Jan 27, 2019 | Team Udayavani |

ಧಾರವಾಡ: ಸಮಾನತೆಯ ಹರಿಕಾರ ಡಾ| ಬಾಬಾಸಾಹೇಬ ಅಂಬೇಡ್ಕರ ಅವರು ದೇಶಕ್ಕೆ ಕೊಟ್ಟ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಪೌರಾಡಳಿತ ಸಚಿವ ಸಿ.ಎಸ್‌. ಶಿವಳ್ಳಿ ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿಂದತೆ ವಿವಿಧ ಇಲಾಖೆ ಸಹಯೋಗದಲ್ಲಿ ಆರ್‌.ಎನ್‌. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡ 70ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೇರವೇರಿಸಿ ವಿವಿಧ ದಳಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ದೇಶದ ಸ್ವಾತಂತ್ರ್ಯಕ್ಕೆ ಅನೇಕ ಮಹನೀಯರು ಪ್ರಾಣತ್ಯಾಗ ಮಾಡಿದರು. ಡಾ| ಅಂಬೇಡ್ಕರ ಕರಡು ಸಮಿತಿ ಅಧ್ಯಕ್ಷರಾಗಿ ಈ ದೇಶದ ಸರ್ವಜನಾಂಗದ ಹಿತದೃಷ್ಟಿಯಿಂದ ಅತ್ಯುತ್ತಮ ಸಂವಿಧಾನವನ್ನು ನೀಡಿದ್ದಾರೆ. ಸಂವಿಧಾನ ಜಾರಿಗೆ ಬಂದ ನಂತರ ಜವಾಹರಲಾಲ್‌ ನೆಹರೂ ಅವರು ಪಂಚವಾರ್ಷಿಕ ಯೋಜನೆ ಜಾರಿಗೊಳಿಸುವ ಮೂಲಕ ದೇಶದಲ್ಲಿ ಸಾಕಷ್ಟು ಬದಲಾವಣೆ ತಂದರು. ಲಾಲ್‌ ಬಾಹದ್ದೂರ್‌ ಶಾಸ್ತ್ರೀಜಿ ಜೈ ಜವಾನ್‌, ಜೈಕಿಸಾನ್‌ ಘೋಷಣೆಯ ಮೂಲಕ ದೇಶದ ರೈತರಿಗೆ ಹಾಗೂ ಸೈನಿಕರಿಗೆ ಗೌರವ ಸಲ್ಲಿಸಿದರು ಎಂದು ಸ್ಮರಿಸಿದರು.

ನಾವೀಗ ಅನ್ನ ಕೊಡುತ್ತಿದ್ದೇವೆ: ಸ್ವಾತಂತ್ರ್ಯ ಪೂರ್ವದಲ್ಲಿದ್ದ ಭಾರತ ತುತ್ತು ಅನ್ನಕ್ಕಾಗಿ ಪ್ರಪಂಚದ ಇತರ ರಾಷ್ಟ್ರಗಳ ಎದುರು ನಿಲ್ಲಬೇಕಾಗಿತ್ತು. ಆದರೆ ಇಂದು ಹಸಿರು ಕ್ರಾಂತಿಯ ಮೂಲಕ ಮತ್ತು ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿ ನಾವೇ ವಿಶ್ವದ ಇತರ ರಾಷ್ಟ್ರಗಳಿಗೆ ಆಹಾರ ಪೂರೈಸುವ ಸ್ಥಿತಿಗೆ ಬಂದು ನಿಂತಿದ್ದೇವೆ. ಇದರಿಂದ ಭಾರತ ಹೆಮ್ಮೆ ಪಡುವಂತಾಗಿದೆ ಎಂದರು.

ಕೃಷಿ ಉದ್ದಿಮೆ ಸೇರಿದಂತೆ ವಿವಿಧ ರಂಗಗಳಲ್ಲಿ ಮುಂದುವರಿದಿರುವ ಭಾರತ ಐಟಿ-ಬಿಟಿ ಕ್ಷೇತ್ರಗಳಲ್ಲಿ ಬಲಿಗuವಾಗಿದೆ. ಅಲ್ಲದೇ ನಮ್ಮ ರಾಜ್ಯದ ಅನೇಕ ಜನರು ಅಮೆರಿಕದಲ್ಲಿ ಮೇಲುಗೈ ಸಾಧಿಸಿದ್ದಾರೆ. ನಮ್ಮ ದೇಶ ಚೀನಾ, ಅಮೆರಿಕ, ರಷ್ಯಾ ಸೇರಿದಂತೆ ಇತರ ದೇಶಗಳಿಗಿಂತ ಉನ್ನತ ಮಟ್ಟದಲ್ಲಿ ಬೆಳೆದಿದೆ ಎಂದು ಹೇಳಿದರು.

Advertisement

ಸಾಲಮನ್ನಾ ಮಾಡಿದ್ದೇವೆ: ದೇಶ ಸದೃಢವಾಗಿ ಬೆಳೆದು ಬಡತನ ನಿವಾರಣೆಯಾಗಬೇಕು ಎಂಬ ದೃಷ್ಟಿಯಿಂದ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ರೋಟಿ, ಮಕಾನ, ಕಪಡಾ (ಗರೀಬಿ ಹಠಾವೋ ಯೋಜನೆ) ಘೋಷಣೆ ಮಾಡಿದ್ದರು. ಅದೇ ರೀತಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡವರ ಹಸಿವು ನೀಗಿಸುವ ನಿಟ್ಟಿನಲ್ಲಿ ಅನ್ನ ಭಾಗ್ಯ, ಕ್ಷೀರ ಭಾಗ್ಯ ಸೇರಿದಂತೆ ವಿವಿಧ ಯೋಜನೆ ಜಾರಿಗೆ ತಂದರು. ಸದ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡುವ ಮೂಲಕ ರೈತರಿಗೆ ನೆರವಾಗಿದ್ದಾರೆ ಎಂದರು.

ಮಹದಾಯಿ ಯೋಜನೆ ಜಾರಿಗೆ ತಂದು ರೈತರು, ಜನರಿಗೆ ನೀರು ನೀಡುವಲ್ಲಿ ಸರಕಾರ ಬದ್ಧವಾಗಿದೆ. ಸಮಾಜದ ಕಟ್ಟಕಡೆ ಜನರಿಗೂ ಶಿಕ್ಷಣ, ಉದ್ಯೋಗ ದೊರೆಯಬೇಕು. ಅವರೂ ಮುಖ್ಯವಾಹಿನಿಗೆ ಬರಬೇಕು ಎಂಬುದು ಡಾ| ಅಂಬೇಡ್ಕರ ಅವರ ಆಶಯವಾಗಿತ್ತು. ಅದರಂತೆ ನಮ್ಮ ಸರಕಾರ ನಡೆಯಲಿದೆ ಎಂದು ಹೇಳಿದರು.

ಸಾಂಸ್ಕೃತಿಕ ಸಂಭ್ರಮ: ಧ್ವಜಾರೋಹಣದ ನಂತರ ವಿದ್ಯಾಗಿರಿಯ ಜೆಎಸ್ಸೆಸ್‌ ಆಂಗ್ಲ ಮಾಧ್ಯಮ ಶಾಲೆ, ಮಲ್ಲಸಜ್ಜನ ಶಾಲೆ, ಕೆ.ಇ. ಬೋರ್ಡ್‌ ಹಾಗೂ ವಿದ್ಯಾರಣ್ಯ ಪಿಯು ಕಾಲೇಜು, ಕರ್ನಾಟಕ ಪ್ರೌಢಶಾಲೆ ಸೇರಿದಂತೆ ವಿವಿಧ ಸಂಸ್ಥೆಗಳ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ದೇಶಭಕ್ತಿ ಬಿಂಬಿಸುವ ಹಾಡುಗಳಿಗೆ ಪುಟಾಣಿಗಳು ಹೆಜ್ಜೆ ಹಾಕಿದಾಗ ಕ್ರೀಡಾಂಗಣದಲ್ಲಿ ನೆರೆದಿದ್ದ ಎಲ್ಲಾ ಪ್ರೇಕ್ಷಕರು ಚಪ್ಪಾಳೆ ಸುರಿಮಳೆಗೈದರು.

ಜಿಲ್ಲಾಧಿಕಾರಿ ದೀಪಾ ಚೋಳನ್‌, ಜಿಪಂ ಸಿಇಒ ಡಾ| ಬಿ.ಸಿ. ಸತೀಶ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪವಿಭಾಗಾಧಿಕಾರಿ ಮಹ್ಮದ್‌ ಝುಬೇರ, ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ, ಎಸ್ಪಿ ಸಂಗೀತಾ ಜಿ., ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ, ಉಪಾಧ್ಯಕ್ಷ ಶಿವಾನಂದ ಕರಿಗಾರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next