Advertisement
2015ಮೊಹಮ್ಮದ್ ಶಮಿ ಆಡಿದ ಮೊದಲ ವಿಶ್ವಕಪ್ ಇದು.7 ಪಂದ್ಯಗಳಲ್ಲಿ ಆಡಿದ್ದ ಶಮಿ, 17 ವಿಕೆಟ್ ಪಡೆದು, ಭಾರತದ ಪರ ಹೆಚ್ಚು ವಿಕೆಟ್ ತೆಗೆದುಕೊಂಡ ಸಾಧನೆ ಮಾಡಿದ್ದರು. ಶೇ.17.29 ಆವರೇಜ್‌ನಲ್ಲಿ, 4.81 ಎಕಾನಮಿ ರೇಟ್ ಹೊಂದಿದ್ದ ಶಮಿ ಉತ್ತಮವಾದ ಬೌಲಿಂಗ್ ಮಾಡಿದ್ದರು. ಆಗ 35 ರನ್‌ಗೆ 4 ವಿಕೆಟ್ ಪಡೆದಿದ್ದೇ ಉತ್ತಮ ಸಾಧನೆಯಾಗಿತ್ತು.
ಹಿಂದಿನ ವಿಶ್ವಕಪ್‌ನಲ್ಲಿ ಭಾರತದ ಪರವಾಗಿ ಅತೀ ಹೆಚ್ಚು ವಿಕೆಟ್ ಪಡೆದಿದ್ದರೂ, 2019ರ ವಿಶ್ವಕಪ್‌ನಲ್ಲಿ ಮೊಹಮ್ಮದ್ ಶಮಿಗೆ ನೇರ ಅವಕಾಶ ಸಿಕ್ಕಿರಲಿಲ್ಲ. ತಂಡಕ್ಕೆ ಆಯ್ಕೆಯಾಗಿದ್ದರೂ, ಭುವನೇಶ್ವರ್ ಕುಮಾರ್ ಅವರಿಗಾಗಿ ಸ್ಥಾನ ಬಿಟ್ಟುಕೊಟ್ಟಿದ್ದರು. ಹೀಗಾಗಿ ಇಡೀ ವಿಶ್ವಕಪ್‌ನಲ್ಲಿ ಶಮಿ ಆಡಿದ್ದು ಕೇವಲ 4 ಮ್ಯಾಚ್. ಆದರೆ ತೆಗೆದುಕೊಂಡ ವಿಕೆಟ್ 14. ಅಫ್ಘಾನಿಸ್ಥಾನ ವಿರುದ್ಧ ಹ್ಯಾಟ್ರಿಕ್, ಇಂಗ್ಲೆಂಡ್ ವಿರುದ್ಧ 5 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದರು. ಆಗ ಒಂದು ವೇಳೆ ಭುವನೇಶ್ವರ್ ಕುಮಾರ್‌ಗೆ ಗಾಯವಾಗದಿದ್ದರೆ, ವಿಶ್ವಕಪ್‌ನಲ್ಲಿ ಜಾಗವೇ ಸಿಗುತ್ತಿರಲಿಲ್ಲವೇನೋ. 2023
ವಿಕೆಟ್ ಪಡೆಯುವಲ್ಲಿ ಶಮಿ ಅತ್ಯಮೋಘ ಸಾಧನೆ ಮಾಡಿದ್ದರೂ, ಪ್ರಸಕ್ತ ವಿಶ್ವಕಪ್‌ನಲ್ಲೂ ಮೊದಲ ಆಯ್ಕೆಯಾಗಿರಲೇ ಇಲ್ಲ. ಈ ಬಾರಿ ತಂಡದಲ್ಲಿ ವೇಗದ ಬೌಲರ್‌ಗಳಾಗಿ ಜಸ್‌ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಇದ್ದರು. ಹಾಗೆಯೇ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಮಧ್ಯಮ ವೇಗಿಯಾಗಿದ್ದರು. ಹೀಗಾಗಿ ಮೂವರು ವೇಗಿ ಮತ್ತು ಇಬ್ಬರು ಸ್ಪಿನ್ನರ್ ಇದ್ದುದರಿಂದಾಗಿ ಶಮಿಗೆ ಸ್ಥಾನವೇ ಸಿಕ್ಕಿರಲಿಲ್ಲ. ಅಲ್ಲದೆ ವಿಶ್ವಕಪ್‌ಗೆ ಮುನ್ನ ಬುಮ್ರಾ ಮತ್ತು ಸಿರಾಜ್ ಪ್ರದರ್ಶನ ಉತ್ತಮವಾಗಿತ್ತು.
ಆದರೆ ಹಾರ್ದಿಕ್ ಪಾಂಡ್ಯ ಗಾಯಾಳುವಾಗಿದ್ದು ಶಮಿಗೆ ಲಕ್ ಬದಲಿಸಿತು. ತಂಡದಲ್ಲಿ ಸ್ಥಾನ ಪಡೆದ ಮೊಹಮ್ಮದ್ ಶಮಿ, ಪೂರ್ಣ ಪ್ರಮಾಣದಲ್ಲಿ ಮಿಂಚಿದರು. ಈ ವಿಶ್ವಕಪ್‌ನಲ್ಲಿ ಮೂರು ಬಾರಿ 5 ವಿಕೆಟ್ ಪಡೆದ ಸಾಧನೆಯನ್ನೂ ಮಾಡಿದ್ದಾರೆ. ಅಲ್ಲದೆ ಎದುರಾಳಿ ತಂಡದ ಆತಂಕಕ್ಕೂ ಕಾರಣವಾಗಿದ್ದಾರೆ. ಈ ವಿಶ್ವಕಪ್‌ನಲ್ಲಿ ಶಮಿ ಆಡಿರುವುದು 10ರಲ್ಲಿ ಕೇವಲ 6 ಮಾತ್ರ. ಇದರಲ್ಲಿ 23 ವಿಕೆಟ್‌ಗಳಿಸಿ ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ.
Related Articles
2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಮೊಹಮ್ಮದ್ ಶಮಿ ಬದುಕು, ಹೂವಿನ ಮೇಲೆ ನಡಿಗೆಯಂತಿರಲಿಲ್ಲ. ಗಾಯದ ಸಮಸ್ಯೆಯಿಂದ ವೈಯಕ್ತಿಕ ಬದುಕಿನ ಸಂಗತಿಗಳು ಶಮಿ ಅವರನ್ನು ಹಿಂಡಿ ಹಿಪ್ಪೆ ಮಾಡಿದ್ದವು. ಮಾನಸಿಕವಾಗಿ ಜರ್ಜರಿತರಾಗಿದ್ದ ಶಮಿ, ಕ್ರಿಕೆಟ್ ಅನ್ನು ಬಿಟ್ಟು ಬಿಡುವ ಸ್ಥಿತಿಗೆ ಬಂದಿದ್ದರು ಎಂಬುದೂ ಸತ್ಯ.
Advertisement
ಬೌಲಿಂಗ್ ಕೋಚ್ ಭರತ್ ಅರುಣ್ ಅವರ ಪ್ರಕಾರ, ಶಮಿ 2018ರಲ್ಲಿ ಕ್ರಿಕೆಟ್ ಬಿಡುವ ಸ್ಥಿತಿಗೆ ಬಂದಿದ್ದರು. ಅಂದರೆ 2018ರಲ್ಲಿ ಭಾರತ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವುದರಲ್ಲಿತ್ತು. ಇದಕ್ಕೂ ಮುನ್ನ ನಾವು ಬೌಲರ್‌ಗಳಿಗೆ ಫಿಟ್‌ನೆಸ್ ಟೆಸ್ಟ್ ಮಾಡಿಸಿದ್ದೆವು. ಅದರಲ್ಲಿ ಶಮಿ ವಿಫಲರಾಗಿದ್ದರು. ಹೀಗಾಗಿ ಭಾರತ ತಂಡದಲ್ಲಿನ ಜಾಗವೂ ಹೋಗಿತ್ತು. ಆಗ ನನಗೆ ಕರೆ ಮಾಡಿದ್ದ ಶಮಿ, ಮಾತನಾಡಬೇಕು ಎಂದಿದ್ದರು. ನನ್ನ ರೂಮಿಗೆ ಬಂದಿದ್ದ ಶಮಿ, ತನ್ನ ಫಿಟ್‌ನೆಸ್ ಬಗ್ಗೆ ಕೋಪಗೊಂಡಿದ್ದರು. ನಾನು ಕ್ರಿಕೆಟ್ ಅನ್ನೇ ಬಿಡುತ್ತೇನೆ ಎಂದಿದ್ದರು. ಆಗ ನಾನು ತತ್‌ಕ್ಷಣವೇ ಕೋಚ್ ರವಿಶಾಸಿŒ ಅವರ ಬಳಿಗೆ ಕರೆದೊಯ್ದಿದ್ದೆ. ರವಿಶಾಸ್ತ್ರಿ ಮುಂದೆಯೂ ಶಮಿ, ಕ್ರಿಕೆಟ್ ಬಿಡುವ ಮಾತುಗಳನ್ನಾಡಿದ್ದರು. ಆಗ ರವಿಶಾಸ್ತ್ರಿ ಅವರು, ಕ್ರಿಕೆಟ್ ಬಿಟ್ಟು ಏನು ಮಾಡುತ್ತೀರಿ ಎಂದು ಪ್ರಶ್ನಿಸಿ, ಬಳಿಕ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಕಳುಹಿಸುವ ನಿರ್ಧಾರ ಮಾಡಿದ್ದೆವು. ಅಲ್ಲಿ ಅವರ ಫಿಟ್‌ನೆಸ್ ಸುಧಾರಿಸಿತು ಎಂದು ಅರುಣ್ ಹೇಳುತ್ತಾರೆ.
ಬಾಲ್ಯದ ಕೋಚ್ ಹೇಳುವುದೇನು?ಶಮಿ ಅವರ ಬಾಲ್ಯದ ಕೋಚ್ ಬದ್ರುದ್ದೀನ್. ಶಮಿಯ ಶಕ್ತಿ, ಸಾಮರ್ಥ್ಯ, ತಂತ್ರಗಾರಿಕೆಗಳೆಲ್ಲವೂ ಬದ್ರುದ್ದೀನ್ ಅವರಿಗೆ ಗೊತ್ತಿದೆ. ಖಾಸಗಿ ವಾಹಿನಿಯೊಂದರ ಬಳಿ ಮಾತನಾಡಿರುವ ಬದ್ರುದ್ದೀನ್ ಶಮಿ, ಆರಂಭಿಕ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ಅದು 2002, ಶಮಿ ಅವರ ತಂದೆ ಸೋನಕ್‌ಪುರ ಕ್ರೀಡಾಂಗಣಕ್ಕೆ ಶಮಿಯನ್ನು ಕರೆತಂದಿದ್ದರು. ಉತ್ತರ ಪ್ರದೇಶದ ಅನ್ರೋಹಾದಲ್ಲಿ ಶಮಿ ಬೌಲಿಂಗ್ ಮಾಡುತ್ತಿದ್ದ ರೀತಿ ಬಗ್ಗೆ ಅವರ ತಂದೆ ಬದ್ರುದ್ದೀನ್‌ಗೆ ವಿವರಿಸಿದ್ದರು. ಶಮಿಗೆ ವಾರ್ಮ್ಅಪ್ ಮಾಡಲು ಹೇಳಿ, 30 ನಿಮಿಷಗಳ ಕಾಲ ಬೌಲಿಂಗ್ ಮಾಡಲು ತಿಳಿಸಿದ್ದೆ. ಇದಾದ ಬಳಿಕ ಮತ್ತೂ ಮುಂದುವರಿಸಲು ಹೇಳಿದ್ದೆ. ಮೊದಲ 30 ನಿಮಿಷಗಳ ಕಾಲ ಬೌಲಿಂಗ್ ಮಾಡಿದ್ದ ಶಮಿ, ಅದೇ ಸಾಮರ್ಥ್ಯ, ಹುರುಪಿನಲ್ಲೇ ಆಟ ಮುಂದುವರಿಸಿದ್ದರು. ಹೀಗಾಗಿ ಬೌಲಿಂಗ್ ಮೇಲೆ ಶಮಿಗೆ ಇದ್ದ ಪ್ರೀತಿ ಅರ್ಥವಾಗಿತ್ತು. ಅಲ್ಲೇ ತಿಂಗಳುಗಳ ಕಾಲ ಶಮಿ ಅಭ್ಯಾಸ ನಡೆಸಿದ್ದರು. ಆಗ ಅವರಿಗೆ ಕೇವಲ 16 ವರ್ಷ ವಯಸ್ಸು. ಶಮಿಗೆ ಇದ್ದ ಚಾಣಾಕ್ಷತನದಿಂದಾಗಿ ಅಂಡರ್ 19 ತಂಡಕ್ಕೆ ಆಯ್ಕೆ ಮಾಡಲು ಪ್ರಯತ್ನ ಮಾಡಿದ್ದೆ. ಆದರೆ ಆಗಲಿಲ್ಲ. ವಿಶೇಷವೆಂದರೆ ಶಮಿ ನನ್ನ ಅಕಾಡೆಮಿಗೆ ಬರುವ ಮುನ್ನ ಎಲ್ಲೂ ತರಬೇತಿ ಪಡೆದಿರಲಿಲ್ಲ. ತನ್ನ ಅನ್ರೋಹಾ ಹಳ್ಳಿಯಲ್ಲಿ ಬೌಲಿಂಗ್ ಮಾಡಿದ್ದರು ಅಷ್ಟೇ. ಇದಾದ ಬಳಿಕ ಬೌಲಿಂಗ್‌ನಲ್ಲಿ ಪಳಗಲು ಹೆಚ್ಚು ಪರಿಶ್ರಮ ಹಾಕಿದರು ಎಂದು ಬದ್ರುದ್ದೀನ್ ನೆನಪಿಸಿಕೊಳ್ಳುತ್ತಾರೆ. ವೈಯಕ್ತಿಕ ಸಮಸ್ಯೆಯ ಬಿರುಗಾಳಿ
2018ರಲ್ಲಿ ಶಮಿ ಕೇವಲ ಗಾಯದಿಂದ ಅಷ್ಟೇ ಬಳಲುತ್ತಿರಲಿಲ್ಲ. ಅವರಿಗೆ ವೈಯಕ್ತಿಕ ಸಮಸ್ಯೆಯೂ ಕಾಡುತ್ತಿತ್ತು. ಆಗ ಮೊಹಮ್ಮದ್ ಶಮಿ ಅವರ ಪತ್ನಿ ಹಸೀನ್ ಜಹನ್, ಕೌಟುಂಬಿಕ ಕಿರುಕುಳ, ಕೊಲೆಗಾಗಿ ಯತ್ನ, ವಿವಾಹೇತರ ಸಂಬಂಧ, ಅತ್ಯಾಚಾರದಂಥ ಆರೋಪಗಳನ್ನು ಮಾಡಿದ್ದರು. ಇದರಿಂದಾಗಿ ಕೋಲ್ಕತಾದಲ್ಲಿ ಶಮಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಆರೋಪಗಳನ್ನು ಶಮಿ ಸಾರಾಸಗಟಾಗಿ ತಳ್ಳಿಹಾಕಿದ್ದು, ನನ್ನ ಹೆಸರಿಗೆ ಕಳಂಕ ತರಲು ಪತ್ನಿ ಪ್ರಯತ್ನಿಸುತ್ತಿದ್ದಾರೆ ಎಂದಿದ್ದರು. ಇದಾದ ಬಳಿಕ ಬಿಸಿಸಿಐ ಶಮಿ ಅವರನ್ನು ಒಪ್ಪಂದದ ಪಟ್ಟಿಯಿಂದ ಹೊರಗಿಟ್ಟಿತು. ಐಪಿಎಲ್‌ನಲ್ಲಿ ಭಾಗಿಯಾಗುವುದೂ ಕಷ್ಟವಾಯಿತು. ಇದಾದ ಬಳಿಕ ವೈಯಕ್ತಿಕ ಬದುಕಿನಲ್ಲಿ ಬಹಳಷ್ಟು ಘಟನೆಗಳು ನಡೆದು ಶಮಿ ನೊಂದಿದ್ದರು. ಈಗಲೂ ಇಬ್ಬರ ಮಧ್ಯೆ ಕಾನೂನು ಸಮರ ಮುಂದುವರಿದಿದೆ. ಶಮಿ ದಾಖಲೆಗಳು
1 ಸತತ ಮೂರು ಪಂದ್ಯಗಳಲ್ಲಿ
ತಲಾ 4 ವಿಕೆಟ್
2 ವಿಶ್ವಕಪ್ ಪಂದ್ಯಗಳಲ್ಲಿ 54 ವಿಕೆಟ್ ಪಡೆದ ಮೊದಲ ಬೌಲರ್
3 ವಿಶ್ವಕಪ್‌ವೊಂದರಲ್ಲಿ
ಹೆಚ್ಚು ವಿಕೆಟ್(23) ಪಡೆದ ಭಾರತದ ಬೌಲರ್
4 ವಿಶ್ವಕಪ್‌ವೊಂದರಲ್ಲಿ ಮೂರು ಬಾರಿ 5 ವಿಕೆಟ್ ಪಡೆದ ಬೌಲರ್
5 ನ್ಯೂಜಿಲ್ಯಾಂಡ್ ವಿರುದ್ಧ 57/7. ಭಾರತೀಯ ಬೌಲರ್‌ನಿಂದ ಶ್ರೇಷ್ಠ ಸಾಧನೆ
6 ಕೇವಲ 17 ಪಂದ್ಯಗಳಲ್ಲಿ 50 ವಿಕೆಟ್ ಪಡೆದ ಮೊದಲ ಆಟಗಾರ ಮೊಣಕಾಲು ನೋವಲ್ಲೇ ಆಡಿದ್ದ ಶಮಿ
2015ರ ವಿಶ್ವಕಪ್ ವೇಳೆಯಲ್ಲಿ ಶಮಿ,ಮೊಣಕಾಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಆಟದಿಂದ ಹಿಂದೆ ಸರಿಯಲೇ ಇಲ್ಲ. ಆಗ 8 ಪಂದ್ಯಗಳಿಂದ 17 ವಿಕೆಟ್ ಪಡೆದಿದ್ದ ಶಮಿ ಯಶಸ್ವಿ ಬೌಲರ್ ಎನ್ನಿಸಿದ್ದರು. ಆಗಿನ ದಿನಗಳ ಬಗ್ಗೆ ಸ್ವತಃ ಶಮಿ ಅವರೇ ನೆನಪಿಸಿಕೊಂಡಿದ್ದು, ಪ್ರತೀ ಪಂದ್ಯವಾದ ಮೇಲೂ ವೈದ್ಯರನ್ನು ಭೇಟಿ ಮಾಡುತ್ತಿದ್ದೆ. ಆಗ ಮೊಣಕಾಲಿನಲ್ಲಿದ್ದ 40ರಿಂದ 50 ಎಂಎಲ್ ಕೀವನ್ನು ತೆಗೆಯುತ್ತಿದ್ದರು. ಬಳಿಕ ಸ್ವೀಕಾರಾರ್ಹ ಮಟ್ಟದಲ್ಲಿ ಸ್ಟಿರಾಯ್ಡ ಇಂಜೆಕ್ಷನ್ ನೀಡುತ್ತಿದ್ದರು. ಚಿಕಿತ್ಸೆ ಪಡೆದ ಬಳಿಕ ಮೂರು ದಿನ ಬೆಡ್‌ರೆಸ್ಟ್‌ನಲ್ಲಿ ಇರುತ್ತಿದ್ದೆ. ನಾಲ್ಕನೇ ದಿನ ಕೊಂಚ ವ್ಯಾಯಾಮ ಮಾಡಿ, ಐದನೇ ದಿನ ನೆಟ್‌ನಲ್ಲಿ ಅಭ್ಯಾಸ ಮಾಡುತ್ತಿದ್ದೆ. ಮಾರನೇ ದಿನ ಪಂದ್ಯಕ್ಕೆ ಸಿದ್ಧಗೊಳ್ಳುತ್ತಿದ್ದೆ ಎಂದು ಕ್ರಿಕ್‌ಇನ್ಫೋಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.