ಅಮೀನಗಡ (ಬಾಗಲಕೋಟೆ): ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆಯಲ್ಲೂ ಕೊರೊನಾ ಜಾಗೃತಿ!
ಹೌದು, ಶ್ರೀಶೈಲ ಕ್ಷೇತ್ರವೂ ಭಾರತದ ಪ್ರಾಚೀನ ಧಾರ್ಮಿಕ ಕ್ಷೇತ್ರದಲ್ಲಿ ಇತಿಹಾಸದಲ್ಲಿ ತುಂಬಾ ಪ್ರಾಚೀನವಾದದು. ವೇದಗಳಲ್ಲಿ, ಪುರಾಣ ಆಗಮಗಳಲ್ಲಿ ಇದನ್ನು ತುಂಬಾ ಪವಿತ್ರ ಕ್ಷೇತ್ರವೆಂದು ಪರಿಗಣಿಸಲಾಗಿದೆ. ಮಾರ್ಚ್ ತಿಂಗಳು ಮಲ್ಲಯ್ಯನ ಪಾದಯಾತ್ರೆ ಮಾಡುವ ಭಕ್ತರಿಗೆ ಶ್ರೀಶೈಲ ಮಲ್ಲಿಕಾರ್ಜುನದೇ ಧ್ಯಾನ. ಲಕ್ಷಾಂತರ ಭಕ್ತರು ಉತ್ತರ ಕರ್ನಾಟಕದಿಂದ ಪಾದಯಾತ್ರೆ ಕೈಗೊಳ್ಳುವುದು ಶತಮಾನಗಳ ಇತಿಹಾಸವಿದೆ.
ಮಾ.29 ರಂದು ಪಟ್ಟಣದಿಂದ ಬೆಂಗಳೂರಿನ ಅಮ್ಮಾ ಪೌಂಡೇಶನ್ ಮತ್ತು ಪಟ್ಟಣದ ಶ್ರೀಶೈಲ ಭಕ್ತರು ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಪಾದಯಾತ್ರೆಯಲ್ಲಿ ಧಾರ್ಮಿಕ ಜಾಗೃತಿ ಹಾಗೂ ಕೊರೊನಾ ಜಾಗೃತಿ ಮಾಡುವ ಮೂಲಕ ಧಾರ್ಮಿಕ ಆಚರಣೆಯ ಜೊತೆಗೆ ಸಾಮಾಜಿಕ ಕಳಕಳಿಯ ಚಟುವಟಿಕೆ ಮಾಡಲು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಕೊರೊನಾ ಜಾಗೃತಿ: ದಿನೇ ದಿನೆ ಹೆಚ್ಚುತ್ತಿರುವ ಕೊರೊನಾ ವೈರಸ್ ಹಾವಳಿಯಿಂದಾಗಿ ಪಟ್ಟಣದಿಂದ ಶ್ರೀಶೈಲ ಪಾದಯಾತ್ರೆಗೆ ಹೊರಡುವ ಭಕ್ತರು ಈ ಭಾರಿ ಪಾದಯಾತ್ರೆಯಲ್ಲಿ ಕೊರೊನಾ ಜಾಗೃತಿ ಮೂಡಿಸಲು 8 ಅಡಿ ಉದ್ದನೆಯ 6 ಅಡಿ ಅಗಲದ ದೇಶದ ಅತಿದೊಡ್ಡ ಮಾಸ್ಕ್ ತಯಾರಿಸಿ ರಸ್ತೆಯುದ್ದಕ್ಕೂ ಪ್ರಮುಖ ನಗರಗಳಲ್ಲಿ ಜಾಗೃತಿ ಮೂಡಿಸಲು ಹಾಗೂ ರಸ್ತೆಯುದ್ದಕ್ಕೂ ಮಾಸ್ಕ್ ವಿತರಣೆ, ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಇದರ ಕುರಿತು ಮೈಕ್ ಮೂಲಕ ಜಾಗೃತಿ ಅಭಿಯಾನ ಮಾಡಲು ಸಿದ್ದತೆ ಮಾಡಿದ್ದಾರೆ. ಇದು ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.
ಮಲ್ಲಯ್ಯನ ಧ್ವಜ: ಪಟ್ಟಣದಿಂದ ಶ್ರೀಶೈಲ ಪಾದಯಾತ್ರೆಗೆ ಹೋಗುವ ಮಲ್ಲಯ್ಯನ ಭಕ್ತರು ಈ ಭಾರಿ ಸುಮಾರು 108 ಅಡಿ ಉದ್ದನೇಯ ಮಲ್ಲಯ್ಯ ಧ್ವಜ ಸಿದ್ದಪಡಿಸಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆಯ ಮೂಲಕ ಧಾರ್ಮಿಕ ಜಾಗೃತಿ ಮಾಡಲು ವಿಶೇಷ ತಯಾರಿ ಮಾಡಿದ್ದಾರೆ.
ಅಸ್ಲಂನ ಕೈಚಳಕ: 108 ಅಡಿ ಉದ್ದದ ಮಲ್ಲಯ್ಯನ ಧ್ವಜಕ್ಕೆ ಗದಗ ಜಿಲ್ಲೆಯ ಸ್ಯಾಟಿನ್ ಬಟ್ಟೆ ಬಳಸಲಾಗಿದೆ ಮತ್ತು ಬಾಗಲಕೋಟೆಯ ಖ್ಯಾತ ಕಲಾವಿದ ಅಸ್ಲಂ ಕಲಾದಗಿ ಹಾಗೂ ರವೀಂದ್ರ ಬಂಡಿ ಅವರು ಬಟ್ಟೆಯ ಮೇಲೆ ಆಕರ್ಷಕವಾದ ಮಲ್ಯಯನ ಚಿತ್ರ ಮತ್ತು ಮಾಸ್ಕ್ ಜಾಗೃತಿ ಸಂದೇಶಗಳನ್ನು ಬಿಡಿಸಿದ್ದಾರೆ. ಇದು ನೋಡುಗರ ಕಣ್ಮನ ಸೆಳೆಯುತ್ತಿದೆ.
ಬೆಂಗಳೂರಿನ ಭಕ್ತರ ಪಾದಯಾತ್ರೆ: ಬೆಂಗಳೂರಿನ ಅಮ್ಮಾ ಪೌಂಡೇಶನ್ ಮತ್ತು ಪಟ್ಟದ ಶ್ರೀಶೈಲ ಭಕ್ತರು ಕಳೆದ 7 ವರ್ಷಗಳಿಂದ ಅಮೀನಗಡ ಪಟ್ಟಣದಿಂದ ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆ ಮಾಡುತ್ತಿದ್ದಾರೆ. ಪಟ್ಟಣದ ಉದ್ಯಮಿ ಮಂಜುನಾಥ ಬಂಡಿ ರಾಜಧಾನಿ ಬೆಂಗಳೂರಿಗೂ ಈ ಭಕ್ತಿಯ ನಂಟನ್ನು ಹಚ್ಚಿಸಿ ಪ್ರತಿವರ್ಷ ಬೆಂಗಳೂರಿನಿಂದ 25 ಜನರನ್ನು ಕರೆತಂದು ಪಟ್ಟಣದಿಂದ 450 ಕಿಮಿ ನಡೆಸಿ ಅವರಲ್ಲಿ ಭಕ್ತಿ ಬೀಜವನ್ನು ಬಿತ್ತುತ್ತಿದ್ದಾರೆ. ಪಟ್ಟಣದಿಂದ ಸುಮಾರು 200 ಭಕ್ತರು ಕೂಡಾ ಅವರ ಜೊತೆ ಶ್ರೀಶೈಲ ಪಾದಯಾತ್ರೆ ಮಾಡುತ್ತಾರೆ.
ರಸ್ತೆಯುದ್ದಕ್ಕೂ ಸನ್ಮಾನ: ಪಟ್ಟಣದಿಂದ ಹೋಗುವ’ ಪಾದಯಾತ್ರೆಯು ಶ್ರೀ ಶೈಲ ಮಲ್ಲಿಕಾರ್ಜುನ ದೇವಸ್ಥಾನ ತಲುಪುವರೆಗೂ ದಾರಿಯುದ್ದಕ್ಕೂ ದಾಸೋಹ ಮತ್ತು ವಿವಿಧ ರೀತಿಯ ಸೇವೆ ಮಾಡುವ ಮುಖ್ಯಸ್ಥರಿಗೆ ಅಮ್ಮಾ ಪೌಂಡೇಶನ್ ಮತ್ತು ಅಮೀನಗಡ ಶ್ರೀಶೈಲ ಭಕ್ತರ ಪರವಾಗಿ ಸನ್ಮಾನ ಮಾಡಿ ಅವರಿಗೂ ದಾಸೋಹದ ಕುರಿತು ಜಾಗೃತಿ ಮಾಡಲಾಗುತ್ತಿದೆ.
ಒಟ್ಟಾರೆ ಬೆಂಗಳೂರು ಮತ್ತು ಪಟ್ಟಣದ ಶ್ರೀಶೈಲ ಭಕ್ತರು ಧಾರ್ಮಿಕ ಜಾಗೃತಿ ಮತ್ತು ಕೊರೊನಾ ಜಾಗೃತಿ ಮಾಡುವ ಉದ್ದೇಶದಿಂದ 108 ಉದ್ದದ ಮಲ್ಯಯ್ಯನ ಧ್ವಜ ಮತ್ತು 8 ಅಡಿ ಉದ್ದದ ಮಾಸ್ಕ ತಯಾರಿ ಮಾಡಿದ್ದು ಎಲ್ಲರ ಗಮನ ಸೆಳೆದಿದೆ.
ಮಾ.29ರಂದು ಮಲ್ಲಯ್ಯನ ಧ್ವಜ ಪ್ರದರ್ಶನ: ಶ್ರೀಶೈಲ ಪಾದಯಾತ್ರೆ ಅಂಗವಾಗಿ ಧಾರ್ಮಿಕ ಜಾಗೃತಿ ಹಾಗೂ ಕೊರೊನಾ ಜಾಗೃತಿ ಮೂಡಿಸಲು 108 ಅಡಿ ಉದ್ದದ ಮಲ್ಲಯ್ಯನ ಧ್ವಜ ಹಾಗೂ ದೇಶದ ಅತಿ ದೊಡ್ಡ ಮಾಸ್ಕ ಅನಾವರಣ ಕಾರ್ಯಕ್ರಮ ಮಾ.29ರಂದು ಸಂಜೆ 4ಕ್ಕೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ಅವರು ಮಲ್ಲಯ್ಯನ ಧ್ವಜಾ ಅನಾವರಣಗೊಳಿಸುವರು. ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ, ಶ್ರೀಶೈಲ್ ಜಗದ್ಗುರು ಪೀಠದ ಶಾಖಾಮಠ ಸಂಡೂರ ತಾಲೂಕಿನ ಅಂತಾಪುರದ ಕುಮಾರ ಪಂಡಿತಾರಾಧ್ಯ ಸ್ವಾಮೀಜಿ ಸಾನಿಧ್ಯ ವಹಿಸುವರು. ಬೆಂಗಳೂರಿನ ನಾಗಾರ್ಜುನ ವಿವಿಯ ನಿರ್ದೇಶಕ ಮನೋಹರ ಸರೋಜಿ, ರಾಷ್ಟ್ರೀಯ ವಾಲಿಬಾಲ್ ಮಾಜಿ ಆಟಗಾರ ರೋಹಿತ ಕೆಂಪೇಗೌಡ, ರಾಷ್ಟ್ರೀಯ ಆಟಗಾರ್ತಿ ಪ್ರಮೀಳಾ ಗಟ್ಟಿ, ಸಂಪನ್ಮೂಲ ವ್ಯಕ್ತಿ ರಮೇಶ ಉಮ್ರಾಣಿ, ಜ್ಞಾನಜ್ಯೋತಿ ಕಾಲೇಜು ಪ್ರಾಚಾರ್ಯ ರಮೇಶ ಸೇರಿದಂತೆ ಪಟ್ಟಣದ ಗಣ್ಯಮಾನ್ಯರಿಂದ 150 ಕೆಜಿ ಹೂಗಳ ಪುಷ್ಪಾರ್ಚನೆ ಮೂಲಕ ಪಥ ಸಂಚಲನ ನಡೆಯಲಿದೆ ಎಂದು ಉದ್ಯಮಿ ಮಂಜುನಾಥ ಬಂಡಿ ತಿಳಿಸಿದ್ದಾರೆ.
ಎಚ್.ಎಚ್.ಬೇಪಾರಿ