Advertisement

2032ರ ಒಲಿಂಪಿಕ್‌ ಗೇಮ್ಸ್‌ ಆತಿಥ್ಯಕ್ಕೆ ಭಾರತ ಪ್ರಯತ್ನ

10:28 PM May 02, 2020 | Sriram |

ಹೊಸದಿಲ್ಲಿ: ಕೋವಿಡ್-19 ಸಾಂಕ್ರಾಮಿಕ ರೋಗ ಶಮನಗೊಂಡ ಬಳಿಕ ಭಾರತವು 2032ರ ಒಲಿಂಪಿಕ್‌ ಗೇಮ್ಸ್‌ ಮತ್ತು ಇನ್ನಿತರ ಅಂತಾರಾಷ್ಟ್ರೀಯ ಕೂಟಗಳ ಆತಿಥ್ಯ ವಹಿಸಲು ಪ್ರಯತ್ನ ನಡೆಸಲಿದೆ ಎಂದು ಭಾರತೀಯ ಒಲಿಂಪಿಕ್‌ ಅಸೋಸಿಯೇಶನ್‌ (ಐಒಎ) ಅಧ್ಯಕ್ಷ ನರೀಂದರ್‌ ಬಾತ್ರಾ ಹೇಳಿದ್ದಾರೆ.

Advertisement

ಭಾರತವು ಹತ್ತು ವರ್ಷಗಳ ಹಿಂದೆ ಕಾಮನ್‌ವೆಲ್ತ್‌ ಗೇಮ್ಸ್‌ ಕೂಟವನ್ನು ಅದ್ಧೂರಿಯಾಗಿ ಆಯೋಜಿಸಿತ್ತು. ಇದರಿಂದ ಭಾರತ ಹಲವು ಪಾಠಗಳನ್ನು ಕಲಿತಿದೆ. ಆದರೆ ಇದರಿಂದ ಮುಂದೆಯೂ ಆತಿಥ್ಯ ವಹಿಸುವ ಪ್ರಯತ್ನದಲ್ಲಿ ಹಿಂದೆ ಸರಿಯುವ ಪ್ರಶ್ನೆಯಿಲ್ಲ ಎಂದು ಬಾತ್ರಾ ಹೇಳಿದರು. ಹಾಗೆಯೇ ಮುಂಬರುವ 2036ರ ಯೂತ್‌ ಒಲಿಂಪಿಕ್‌ ಗೇಮ್ಸ್‌ ಮತ್ತು 2032ರ ಒಲಿಂಪಿಕ್ಸ್‌ ಕೂಟ ಆಯೋಜಿಸುವ ನಿಟ್ಟಿನಲ್ಲಿ ಬಿಡ್‌ ಗೆಲ್ಲಲು ಗಂಭೀರ ಪ್ರಯತ್ನ ನಡೆಸಲಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಐಒಸಿಗೆ ಪತ್ರ
ಒಲಿಂಪಿಕ್‌ ಕೂಟ ಆಯೋಜಿಸುವ ನಿಟ್ಟಿನಲ್ಲಿ ನಾವು ಉತ್ಸುಕರಾಗಿದ್ದೇವೆ ಎಂದು ಭಾರತ ಈಗಾಗಲೇ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿಗೆ (ಐಒಸಿ) ಪತ್ರದ ಮೂಲಕ ತಿಳಿಸಿದೆ. ಆದರೆ 2026ರ ಕೂಟ ಆಯೋಜಿಸಲು ಭಾರತವು ಥಾಯ್ಲೆಂಡ್‌, ರಶ್ಯ ಮತ್ತು ಕೊಲಂಬಿಯಾದಿಂದ ಸ್ಪರ್ಧೆ ಎದುರಿಸಲಿದೆ. 2032ರ ಒಲಿಂಪಿಕ್ಸ್‌ ಆಯೋಜಿಸಲು ಆಸ್ಟ್ರೇಲಿಯದ ಕ್ವೀನ್ಸ್‌ ಲ್ಯಾಂಡ್‌,  ಮತ್ತು ಸೋಲ್‌-ಪ್ಯಾಂಗ್‌ಯಾಂಗ್‌ ಕೂಡ ಜಂಟಿಯಾಗಿ ಬಿಡ್‌ ಸಲ್ಲಿಸುವ ಸಾಧ್ಯತೆಯಿದೆ.

ಟೋಕಿಯೊ ಒಲಿಂಪಿಕ್ಸ್‌ ಖಂಡಿತ ನಡೆಯಲಿದೆ
ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿರುವ ಕೋವಿಡ್-19ದಿಂದಾಗಿ ಈಗಾಗಲೇ ಮುಂದೂಡಲ್ಪಟ್ಟ 2020ರ ಟೋಕಿಯೊ ಒಲಿಂಪಿಕ್ಸ್‌ ಮುಂದಿನ ವರ್ಷ ಖಂಡಿತವಾಗಿಯೂ ನಡೆಯಲಿದೆ ಎಂದು ಐಒಸಿ ಸದಸ್ಯ ಮತ್ತು ಐಒಎ ಅಧ್ಯಕ್ಷ ನರೀಂದರ್‌ ಬಾತ್ರಾ ತಿಳಿಸಿದ್ದಾರೆ.

ಕೋವಿಡ್-19ಕ್ಕೆ ಮದ್ದು ಹುಡುಕಲು ಸಾಧ್ಯವಾಗದಿದ್ದರೆ ಮುಂದಿನ ವರ್ಷವೂ ಒಲಿಂಪಿಕ್ಸ್‌ ಆಯೋಜಿಸುವುದು ಸಂಶಯ ಎಂದು ಕೆಲವು ಖ್ಯಾತ ವಿಜ್ಞಾನಿಗಳು ಮತ್ತು ವೈದ್ಯರು ತಿಳಿಸಿದ್ದರೆ, ಕೋವಿಡ್-19 ನಿಯಂತ್ರಣಕ್ಕೆ ಬಂದಲ್ಲಿ ಮಾತ್ರ ಗೇಮ್ಸ್‌ ನಡೆಯಬಹುದೆಂದು ಜಪಾನ್‌ ವೈದ್ಯಕೀಯ ಅಸೋಸಿಯೇಶನ್‌ ಅಧ್ಯಕ್ಷರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next