ಶಿರಸಿ: ಮೋದಿಯವರ ಆತ್ಮ ನಿರ್ಭರ ಭಾರತ ಕಲ್ಪನೆ ಎಂದಿಗೂ ಆಕಸ್ಮಿಕವಲ್ಲ ಎಂದು ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ ಹೇಳಿದರು.
ನಗರದ ನೆಮ್ಮದಿ ಕುಟೀರದಲ್ಲಿ ಮಂಗಳವಾರ ಹೋವೆ ಶೇಷಾದ್ರಿ ಅವರ ಪ್ರಬಂಧ ಸಂಚಯ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು .
ಇದು ಒಂದು ರಾಷ್ಟ್ರ ಚಿಂತನೆ ಮತ್ತು ಅದು ಸರಿಯಾದ ದಾರಿಯಲ್ಲಿ ಸಾಗುತ್ತಿದೆ ಎಂಬುದರ ಸಂಕೇತ ಆತ್ಮ ನಿರ್ಭರ ಭಾರತ. ಸೇವೆ ಎಂಬುದು ಎಂದಿಗೂ ಪರಕೀಯವಲ್ಲ. ಇದರ ನಾಡಿಯನ್ನು ಮುಟ್ಟಿ ನರೇಂದ್ರ ಮೋದಿ ಮಾತನಾಡಿದ್ದಾರೆ ಎಂದರು.
ಸಮಾಜದಲ್ಲಿ ಎಲ್ಲೂ ನೆಮ್ಮದಿ ಸಿಗದಿದ್ದರೆ ಸಂಸ್ಕೃತ ಓದಿ. ಸಂಸ್ಕೃತ ಎಂದಿಗೂ ಸತ್ತ ಭಾಷೆಯಲ್ಲ, ಸಂಸ್ಕೃತ ಓದದೇ ನಾವೇ ಸತ್ತಿದ್ದೇವೆ ಎಂದು ಶೇಷಾದ್ರಿ ಅಭಿಪ್ರಾಯಿಸುತ್ತಿದ್ದರು. ಶೇಷಾದ್ರಿ ಅವರ ಲೇಖನಗಳು ಒಂದೊಂದೂ ಸಂಶೋಧನಾ ವಿಷಯದಂತಿದೆ. ಈ ರೀತಿ ಸಾಹಿತ್ಯ ನಮ್ಮಜೀವ ಧ್ವನಿಯನ್ನು ಎತ್ತರಕ್ಕೆ ಒಯ್ಯುವ ಸಾಹಿತ್ಯ ಎಂದರು.
ನಿವೃತ್ತ ಪ್ರಾಚಾರ್ಯ ಪ್ರೊ. ಕೆ ಎನ್ ಹೊಸ್ಮನಿ ಮಾತನಾಡಿ, ಹೊ ವೆ ಶೇಷಾದ್ರಿ ಅವರ ಬರಹದ ಬೆಳಕು ನಾ ಡಿಸೋಜಾ ಅವರ ಲೇಖನಗಳಲ್ಲಿ ಕಾಣಬಹುದಾಗಿದೆ ಎಂದರು.
ಸಾಹಿತಿ ನಾರಾಯಣ ಭಟ್ ಬಳ್ಳಿ ಕೃತಿ ಪರಿಚಯಿಸಿದರು. ಜನಾರ್ಧನ ಆಚಾರ್ಯ, ಕಿರಣ ಭೈರುಂಬೆ ಇದ್ದರು.